More

    ಶೈಕ್ಷಣಿಕ ಕ್ಷೇತ್ರಕ್ಕೆ ಮಠಗಳ ಕೊಡುಗೆ ಅಪಾರ: ಶಾಸಕ ಬಸವರಾಜ ದಢೇಸುಗೂರು ಅಭಿಮತ

    ಕನಕಗಿರಿ: ಗ್ರಾಮೀಣ ಭಾಗದ ಬಡ ಮಕ್ಕಳಿಗೆ ವಸತಿಯುತ ಶಿಕ್ಷಣ ನೀಡುವಲ್ಲಿ ಮಠ-ಮಾನ್ಯಗಳ ಕೊಡುಗೆ ಅಪಾರವಾದದ್ದು ಎಂದು ಶಾಸಕ ಬಸವರಾಜ ದಢೇಸುಗೂರು ಹೇಳಿದರು.

    ಪಟ್ಟಣದಲ್ಲಿ ಏರ್ಪಡಿಸಿದ್ದ ಶ್ರೀ ರುದ್ರಸ್ವಾಮಿ ಗ್ರಾಮೀಣ ವಿದ್ಯಾವರ್ಧಕ ಸಂಘದ ಶ್ರೀ ಶಿವಯೋಗಿ ಚನ್ನಮಲ್ಲ ಪ್ರಾಥಮಿಕ ಶಾಲೆ, ಶ್ರೀ ಗುರು ರುದ್ರಸ್ವಾಮಿ ಪ್ರೌಢಶಾಲೆ ವಾರ್ಷಿಕೋತ್ಸವ ಉದ್ಘಾಟಿಸಿ ಶನಿವಾರ ಮಾತನಾಡಿದರು. ಬಡ ಮಕ್ಕಳಿಗೆ ಶಿಕ್ಷಣ, ವಸತಿ ಹಾಗೂ ಊಟಕ್ಕಾಗಿ ಮಠಾಧೀಶರು ಜೋಳಿಗೆ ಹಿಡಿದು ದೇಣಿಗೆ ಸಂಗ್ರಹಿಸಿದರು. ಅಂತಹ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸಂಸ್ಕಾರ ಕಲಿತು ಉನ್ನತ ಹುದ್ದೆಗಳಲ್ಲಿದ್ದಾರೆ ಎಂದರು.
    ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಎ.ರಡ್ಡೇರ್ ಮಾತನಾಡಿ, ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗಬಾರದೆಂದು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಪಾಲಕರು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಅವರ ಬಾಳು ಬೆಳಗಿಸಿ ದೇಶದ ಆಸ್ತಿಯನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.

    ಸುವರ್ಣಗಿರಿ ಸಂಸ್ಥಾನ ವಿರಕ್ತ ಮಠದ ಡಾ.ಚನ್ನಮಲ್ಲ ಸ್ವಾಮಿಗಳು ಮಾತನಾಡಿ, ಈ ಭಾಗದ ಜನರು ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಅಭಿವೃದ್ಧಿ ಕಾಣಲು ಈ ಹಿಂದಿನ ಶ್ರೀಗಳು ಹುಟ್ಟು ಹಾಕಿದ ಸಂಸ್ಥೆ ಶ್ರಮಿಸುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಕೆಲಸವನ್ನು ಮಾಡಲಾಗುತ್ತದೆ ಎಂದರು. ದೈಹಿಕ ಶಿಕ್ಷಣ ಶಿಕ್ಷಕ ಶಿವರೆಡ್ಡಿ ಮಣ್ಣೂರ ಹಾಗೂ ವಿದ್ಯಾರ್ಥಿನಿ ದ್ಯಾಮವ್ವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ತಾಪಂ ಇಒ ಚಂದ್ರಶೇಖರ ಕಂದಕೂರ, ಪ್ರಾಚಾರ್ಯ ಕುಮಾರಸ್ವಾಮಿ, ಮುಖ್ಯಶಿಕ್ಷಕರಾದ ಕರೇಗೌಡ, ಮಹಮದ್ ರಫಿ, ಸಂಸ್ಥೆಯ ಕಾರ್ಯದರ್ಶಿ ಪ್ರಶಾಂತ್ ಪ್ರಭು ಶೆಟ್ಟರ, ಶಿಕ್ಷಕ ಬಸವರಾಜ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts