ಕನಕಗಿರಿ: ಗಾಳಿಪಟವು ಹೇಗೆ ಸ್ವತಂತ್ರವಾಗಿ ಹಾರಾಡುತ್ತದೆಯೋ ಅದೇ ರೀತಿ ನೀವು ಸಹ ಸ್ವತಂತ್ರವಾಗಿ ಯಾವುದೇ ಆಮಿಷಗಳಿಗೆ ಒಳಗಾಗದೆ ಮೇ 7ರಂದು ತಪ್ಪದೇ ಮತ ಚಲಾಯಿಸಬೇಕೆಂದು ತಹಸೀಲ್ದಾರ್ ವಿಶ್ವನಾಥ್ ಮುರುಡಿ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ತಾಲೂಕು ಸ್ವೀಪ್ ಸಮಿತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಗಾಳಿಪಟ ಉತ್ಸವದಲ್ಲಿ, ಗಾಳಿಪಟವನ್ನು ಹಾರಿಸುವ ಮೂಲಕ ಮತದಾನ ಜಾಗೃತಿಗೆ ಚಾಲನೆ ನೀಡಿ ಮಾತನಾಡಿದರು. ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಎಲ್ಲಾ ಮತದಾರರು ಅಂದು ನಿಮ್ಮ ಮತಗಟ್ಟೆ ಕೇಂದ್ರಕ್ಕೆ ತೆರಳಿ ಮತ ಚಲಾಯಿಸಬೇಕು. ಯಾವುದೇ ಕಾರಣಕ್ಕೂ ಮತದಾನದಿಂದ ದೂರ ಉಳಿಯಬಾರದು ಎಂದರು.
ಗಾಳಿಪಟದಲ್ಲಿ ಮತದಾರರ ಸಂದೇಶ ಬಳಸಿ, ಮೇ 7 ರಂದು ತಪ್ಪದೇ ಮತ ಚಲಾಯಿಸಬೇಕು. ನಮ್ಮ ಮತ ನಮ್ಮ ಹಕ್ಕು, ತಾಲೂಕು ಸ್ವೀಪ್ ಸಮಿತಿ ಕನಕಗಿರಿ ಎಂಬ ಇತ್ಯಾದಿ ಘೋಷ ವಾಕ್ಯಗಳು ಗಾಳಿಪಟದಲ್ಲಿ ರಾರಾಜಿಸುತ್ತಿದ್ದವು.
ತಾಪಂ ಸಹಾಯಕ ನಿರ್ದೇಶಕರಾದ ಚಂದ್ರಶೇಖರ್ ಬಿ. ಕಂದಕೂರು, ಕಂದಾಯ ಇಲಾಖೆಯ ಉಮಾಮಹೇಶ್, ಉಮೇಶ್, ತಾಪಂ ಸಿಬ್ಬಂದಿ ಹನುಮಂತ, ಕೊಟ್ರಯ್ಯಸ್ವಾಮಿ, ಪವನಕುಮಾರ್, ಯಂಕೋಬ ಮತ್ತಿತರರಿದ್ದರು.