More

    ಸಂಸ್ಕೃತ ಕಲಿತರೆ ಶಾಸ್ತ್ರ ಸುಲಭ, ಕನಕ ಜಯಂತಿ ಕಾರ್ಯಕ್ರಮದಲ್ಲಿ ಈಶಪ್ರಿಯ ಶ್ರೀ ಅಭಿಪ್ರಾಯ

    ಉಡುಪಿ: ಸರ್ಕಾರಕ್ಕೆ ಜಾತಿ ಪದ್ಧತಿ ನಿವಾರಣೆಯಾಗಬೇಕು ಎಂಬ ಇಚ್ಛೆ ಇದ್ದರೆ ದಾಖಲೆಗಳಲ್ಲಿ ಜಾತಿ ಕಾಲಂ ರದ್ದು ಮಾಡಬೇಕು. ಜತೆಗೆ ಎಲ್ಲರಿಗೂ ಸಂಸ್ಕೃತ ಕಲಿಸುವ ಕಾರ್ಯವಾಗಬೇಕು. ಇದರಿಂದ ಶಾಸ್ತ್ರಗಳಲ್ಲಿ ಏನಿದೆ ಎಂಬುದನ್ನು ಜನರು ಸ್ವತಃ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ರಾಜಕೀಯ ಉದ್ದೇಶದ ಮಾತುಗಳನ್ನು ಪರಿಶೀಲನೆ ಮಾಡಲು ಇದು ಸಕಾಲ ಎಂದು ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.

    ರಥಬೀದಿ ಕನಕ ಗುಡಿ ಮುಂಭಾಗ ಕೃಷ್ಣ ಮಠ ಹಾಗೂ ಪರ್ಯಾಯ ಅದಮಾರು ಮಠ ಆಶ್ರಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಮರಸ್ಯ ಗತಿವಿಧಿ ವತಿಯಿಂದ ಆಯೋಜಿಸಿದ್ದ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಸ್ವತಃ ಶಾಸ್ತ್ರಗಳನ್ನು ಅಧ್ಯಯನ ಮಾಡಿ ಅಲ್ಲಿರುವ ಗಹನವಾದ ವಿಚಾರಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಕಾರ್ಯವನ್ನು ದಾಸರು ಮಾಡಿದ್ದಾರೆ. ಕುಲ ಕುಲ ಎನ್ನುತಿಹರು ಹಾಡಿನ ಎಲ್ಲ ಸಾಲುಗಳನ್ನು ತಾತ್ವಿಕ ಹಿನ್ನೆಲೆಯಲ್ಲಿ ಅರಿತುಕೊಳ್ಳಬೇಕು. ಕೃಷ್ಣ ಮಠದಲ್ಲಿ ಕನಕದಾಸರ ಹೆಸರಿನಲ್ಲಿ ನೈವೇದ್ಯ ನೀಡಲಾಗುತ್ತಿದೆ. ಅವರ ‘ಈಶ ನಿನ್ನ ಚರಣ ಭಜನೆ’ ಹಾಡು ತುಳುನಾಡಿನ ಮನೆಮನೆಗಳಲ್ಲಿ ಹಾಡಲಾಗುತ್ತಿದೆ. ಈ ಮೂಲಕ ಕನಕದಾಸರಿಗೆ ಅಗ್ರಮಾನ್ಯ ಸ್ಥಾನ ನೀಡಲಾಗಿದೆ. ಕನಕ ಜಯಂತಿ ಆಚರಣೆ ಒಂದು ದಿನಕ್ಕೆ ಸೀಮಿತಗೊಳ್ಳದೆ ಪ್ರತಿನಿತ್ಯ ಅವರ ಸಾಹಿತ್ಯ ಅಧ್ಯಯನ ಮಾಡುವುದರಿಂದ ಅರ್ಥಪೂರ್ಣವಾಗಿ ಆಚರಿಸಬೇಕು ಎಂದರು.

    ಆರ್‌ಎಸ್‌ಎಸ್ ಜಿಲ್ಲಾ ಸಂಘ ಚಾಲಕ್ ಪ್ರೊ. ನಾರಾಯಣ ಶೆಣೈ, ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್, ಕುರುಬರ ಸಂಘದ ನಿರ್ದೇಶಕ ಬಸವರಾಜು ಉಪಸ್ಥಿತರಿದ್ದರು. ಸಾಮರಸ್ಯ ಗಿತಿವಿಧಿ ಪ್ರಮುಖ್ ಸುರೇಶ್ ಪರ್ಕಳ ಪ್ರಸ್ತಾವಿಸಿದರು.
    ನಿರಂತರ ಭಜನೆ ನಡೆಸುತ್ತಿರುವ ಬಾಲರಾಜ್ ಎಸ್. ಪೂಜಾರ್, ಕನಕ ಗುಡಿಸ್ವಚ್ಛತಾ ಕಾರ್ಯ ಮಾಡುತ್ತಿರುವ ಚಂದ್ರಶೇಖರ್, ಪೌರಕಾರ್ಮಿಕ ಸುಧೀಂದ್ರ, ಸಾಂಪ್ರದಾಯಿಕ ಕಸಬು ಮಾಡುತ್ತಿರುವ ಶಾರದಾ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಬೆಂಗಳೂರು ಕನಕ ಸದ್ಭಾವನ ಜ್ಯೋತಿ ರಥಯಾತ್ರೆ ಸಮಿತಿ ಅಧ್ಯಕ್ಷ ಓಂ ಕೃಷ್ಣಮೂರ್ತಿ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಹಾಲುಮತ ಮಹಾಸಭಾ ಸದಸ್ಯರಿಂದ ಕನಕದಾಸರ ಮೂರ್ತಿಗೆ ವಿಶೇಷ ಪೂಜೆ ನಡೆಯಿತು.

    ಮಠದಲ್ಲಿ ಕನ್ನಡಕ್ಕೆ ಆದ್ಯತೆ: ತುಳುನಾಡಿನಲ್ಲಿ ಕನ್ನಡವನ್ನು ಉಳಿಸುವ ಕಾರ್ಯವನ್ನು ಸ್ವಯಂಪ್ರೇರಣೆಯಿಂದ ಜನರು ಮಾಡುತ್ತಿದ್ದಾರೆ. ದಾಸ ಸಾಹಿತ್ಯ ಇದಕ್ಕೆ ಮಹತ್ವ ಕೊಡುಗೆ ನೀಡಿದೆ. ರಾಜಾಂಗಣದಲ್ಲಿ ಶೇ.99ರಷ್ಟು ಕಾರ್ಯಕ್ರಮ ಕನ್ನಡದಲ್ಲೇ ನಡೆಯುತ್ತಿದೆ ಎಂದು ಈಶಪ್ರಿಯ ತೀರ್ಥ ಶ್ರೀಗಳು ನಾಮಫಲಕ ವಿವಾದದ ಬಗ್ಗೆ ಸ್ಪಷ್ಟೀಕರಣ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts