More

    ಕಂಪ್ಲಿಯ ಶಾಪಗ್ರಸ್ಥ ಶ್ರಾದ್ಧ ಮಂಟಪಕ್ಕೆ ಬೇಕಿದೆ ಅಭಿವೃದ್ಧಿ ಸ್ಪರ್ಶ

    ಕರ್ಮಾದಿಗಳನ್ನು ಕೈಗೊಳ್ಳಲು ಅನನುಕೂಲ | ಸುತ್ತಮುತ್ತ ಅನೈರ್ಮಲ್ಯ ವಾತಾವರಣ

    ಕಂಪ್ಲಿ: ಇಲ್ಲಿನ ತುಂಗಭದ್ರಾ ನದಿ ತಟದಲ್ಲಿರುವ ವಿಜಯನಗರ ಕಾಲದ ಶ್ರಾದ್ಧ (ಕರ್ಮ) ಮಂಟಪ ನಿರ್ಲಕ್ಷೃಕ್ಕೆ ಒಳಗಾಗಿದ್ದು, ಜೀರ್ಣೋದ್ಧಾರಕ್ಕಾಗಿ ಕಾದಿದೆ.

    ಪವಿತ್ರ ತುಂಗಭದ್ರಾ ನದಿ ತಟದಲ್ಲಿರುವ ಕರ್ಮಮಂಟಪಕ್ಕೆ ನಾನಾ ಕಡೆಗಳಿಂದ ಜನರು ಮೃತರ ಉತ್ತರ (ಶ್ರಾದ್ಧ) ಕರ್ಮಾದಿಗಳನ್ನು ನೆರವೇರಿಸಲು ಬರುತ್ತಾರೆ. ಶ್ರಾದ್ಧಮಂಟಪದ ಛಾವಣಿ ಗಿಡಗಂಟಿಗಳಿಂದ ಮುಚ್ಚಿ ಹೋಗಿದೆ. ಮಂಟಪದ ಒಳಗಿನ ಮತ್ತು ಮುಂದಿನ ನೆಲಹಾಸು ಕಲ್ಲುಗಳು ಸರಿದಿದ್ದು, ಧಾರ್ಮಿಕ ಕಾರ್ಯ ನಡೆಸಲು ಅಡಚಣೆಯಾಗಿದೆ. ಮಂಟಪಕ್ಕೆ ಬರುವ ಮಾರ್ಗ ಪೂರ್ಣ ಮಲಮೂತ್ರ ವಿಸರ್ಜನೆಯಿಂದ ಹೊಲಸಾಗಿದ್ದು, ದುರ್ನಾತ ಬೀರುತ್ತಿದೆ. ಮಂಟಪದ ಸುತ್ತಲೂ ಸ್ವಚ್ಛತೆಯಿಲ್ಲ. ಬೇಲಿ, ಅರಣ್ಯಗಿಡಗಳು ಬೆಳೆದಿದ್ದು, ಮಂಟಪ ಶಾಪಗ್ರಸ್ಥದಂತಾಗಿದೆ.

    ಶ್ರಾದ್ಧಮಂಟಪಕ್ಕೆ ತನ್ನದೆ ಪಾವಿತ್ರ್ಯ ಮತ್ತು ಧಾರ್ಮಿಕ ನಂಬಿಕೆ, ಇತಿಹಾಸ ಹೊಂದಿದೆ. ಇದಕ್ಕೆ ಪೂರಕವಾಗಿ ಆರು ಶತಮಾನಗಳ ಹಿಂದೆ ರಘೋತ್ತಮ ತೀರ್ಥರು ಕಂಪ್ಲಿಯಲ್ಲಿ ಚಾತುರ್ಮಾಸ್ಯ ನಿರತರಾಗಿದ್ದರು. ಆಗ ತುಂಗಭದ್ರಾ ನದಿ ತಟದ ಕರ್ಮಮಂಟಪಕ್ಕೆ ಬಂದು ಪೂಜಾನುಷ್ಠಾನ ಕೈಗೊಂಡಾಗ ಕೂರ್ಮಸಾಲಿಗ್ರಾಮ ನದಿ ನೀರಲ್ಲಿ ಬಿದ್ದು ಕಳೆದು ಹೋಯಿತು.

    ತೀರ್ಥರು ಕೂರ್ಮಸಾಲಿಗ್ರಾಮ ಮರಳಿ ಪಡೆಯುವ ಸಂಕಲ್ಪಕ್ಕಾಗಿ ಉಪವಾಸ ವ್ರತಾದಿಗಳನ್ನು ನೆರವೇರಿಸಿ ಸ್ನಾನ ಮಾಡುವ ಸಂದರ್ಭ ಪುನಃ ಕೂರ್ಮಸಾಲಿಗ್ರಾಮ ದೊರೆತ ಪವಿತ್ರ ಸ್ಥಳ ಇದಾಗಿದೆ ಎಂದು ನಂಬುತ್ತಾರೆ ಬ್ರಾಹ್ಮಣ ಸಮುದಾಯ. ಇಂತಹ ಧಾರ್ಮಿಕ ನಂಬಿಕೆ, ಇತಿಹಾಸ ಹೊಂದಿರುವ ಕರ್ಮ ಮಂಟಪವನ್ನು ಜೀರ್ಣೋದ್ಧಾರ ಗೊಳಿಸಬೇಕು ಎಂದು ಕೇಶವಜೋಷಿ, ಶ್ರೀನಿವಾಸ, ಪ್ರಸನ್ನ ವೈದ್ಯ, ಗ್ರಾಮ ಪುರೋಹಿತ ನಾಗರಾಜಾಚಾರ್ ಜೋಷಿ, ಸಪ್ಪರದ ರಾಘವೇಂದ್ರ, ಡಿ.ಶ್ರೀಧರಶ್ರೇಷ್ಠಿ, ಷಣ್ಮುಖಪ್ಪ ಚಿತ್ರಗಾರ ಒತ್ತಾಯಿಸಿದ್ದಾರೆ.

    ತುಂಗಭದ್ರಾ ನದಿಯ ತಟದ ಪಂಪಾಪತಿ ದೇವಸ್ಥಾನ ಬಳಿಯ ಕರ್ಮಮಂಟಪದಲ್ಲಿ ಜನಿವಾರ ಧರಿಸುವ ಎಲ್ಲರೂ ಶ್ರಾದ್ಧ ನಡೆಸುತ್ತಾರೆ. ಕರ್ಮಮಂಟಪ ಹಾಳು ಬಿದ್ದಿದ್ದರಿಂದ ಕರ್ಮಾದಿಗಳನ್ನು ನಡೆಸುವುದು ಕಷ್ಟವಾಗಿದೆ. ಕರ್ಮಮಂಟಪವನ್ನು ಆಧುನಿಕವಾಗಿ ಜೀರ್ಣೋದ್ಧಾರಗೊಳಿಸಬೇಕು. ನದಿಯಲ್ಲಿ ಪಾವಟಿಗೆಗಳನ್ನು ಹಾಕಿಸುವ ಮೂಲಕ ಉತ್ತರಕರ್ಮಾದಿಗಳ ಸ್ನಾನಕ್ಕೆ ಅನುಕೂಲ ಮಾಡಿಕೊಡಬೇಕು.
    | ಡಾ.ಧೀರಣ್ಣ ವೈದ್ಯ ಸಾಹಿತಿ, ಕಂಪ್ಲಿ ಕೋಟೆ

    ಕರ್ಮಮಂಟಪ ಸ್ಥಳಕ್ಕೆ ಭೇಟಿ ನೀಡಿ ಜೀರ್ಣೋದ್ಧಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಜನರೂ ನದಿತಟ, ಕರ್ಮಮಂಟಪ ವಾತಾವರಣದಲ್ಲಿ ಸ್ವಚ್ಛತೆ ಕಾಪಾಡಬೇಕು.
    | ಕೆ.ದುರುಗಣ್ಣ ಮುಖ್ಯಾಧಿಕಾರಿ, ಪುರಸಭೆ, ಕಂಪ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts