More

    ತುಂಗಭದ್ರೆಗೆ ನೆರೆ, ಮೀನುಗಾರಿಕೆಗೆ ಬರೆ

    ಕಂಪ್ಲಿ: ತುಂಗಭದ್ರಾ ನದಿಗೆ ನೆರೆ ಬಂದರೆ ಮೀನುಗಾರ ಕುಟುಂಬಗಳ ಉದ್ಯೋಗಕ್ಕೆ ಬರೆ ಬೀಳುತ್ತಿದೆ. ಮೀನುಗಾರಿಕೆ ಆಧಾರಿತ ಕುಟುಂಬಗಳು ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಸಹಜ ಸ್ಥಿತಿಗೆ ಬರುವತನಕ ನಿರುದ್ಯೋಗ ಅನುಭವಿಸಬೇಕಾಗುತ್ತದೆ.

    ಕಂಪ್ಲಿ ಕೋಟೆಯಲ್ಲಿನ ಕಂಪ್ಲಿ ಮೀನುಗಾರರ ಸಹಕಾರ ಸಂಘವಿದ್ದು 420 ಮೀನುಗಾರ ಕುಟುಂಬಗಳು ಸದಸ್ಯರಾಗಿದ್ದಾರೆ. ತುಂಗಭದ್ರಾ ನದಿ ತಟದ ಕಮಲಾಪುರ, ಬುಕ್ಕಸಾಗರ, ರಾಮಸಾಗರ, ಕಂಪ್ಲಿ ಕೋಟೆ, ಬೆಳಗೋಡ್‌ಹಾಳ್, ಸಣಾಪುರ, ಇಟಗಿ ವ್ಯಾಪ್ತಿಯ ಮೀನುಗಾರರ ಕುಟುಂಬಗಳು ಮೀನು ಬೇಟೆಯನ್ನೇ ಅವಲಂಬಿಸಿವೆ. ತುಂಗಭದ್ರಾ ನದಿಗೆ ಒಂದೂವರೆ ಲಕ್ಷಕ್ಕೂ ಅಧಿಕ ಕ್ಯೂಸೆಕ್ಸ್ ನೀರು ಹರಿದು ಬಂದರೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಕೂಡಲೇ ತಾಲೂಕು ಆಡಳಿತ ಮೀನುಗಾರಿಕೆಗೆ ನದಿಗೆ ಇಳಿಯಂತೆ ಎಚ್ಚರಿಕೆ ನೀಡುತ್ತದೆ. ಮೀನುಗಾರಿಕೆಯನ್ನೇ ನೆಚ್ಚಿಕೊಂಡ ಕುಟುಂಬಗಳು ನಿತ್ಯ ಐದಾರು ನೂರು ರೂ. ದಿನಗೂಲಿ ಸಂಪಾದಿಸುತ್ತೇವೆ. ನೆರೆ ಬಂದಾಗ ಮೀನು ಬೇಟೆಗೆ ಅವಕಾಶ ದೊರಕದಿದ್ದರಿಂದ ನಿರುದ್ಯೋಗ ಸಮಸ್ಯೆ ಎದುರಿಸಬೇಕಾಗುತ್ತವೆ. ಈ ವರ್ಷ ಜು.13ರಿಂದ ಮೀನುಗಾರಿಕೆ ಬೇಟೆಗೆ ಅವಕಾಶ ದೊರಕದ ಕಾರಣ ನಿರುದ್ಯೋಗ ಅನುಭವಿಸುತ್ತಿದ್ದಾರೆ. ಮೀನು ಬಲೆ ಸಿದ್ಧಪಡಿಸಿಕೊಳ್ಳುವ, ದುರಸ್ತಿಮಾಡಿಕೊಳ್ಳುವ, ಮೀನುಗಾರಿಕೆಗೆ ಅಗತ್ಯ ಸಲಕರಣೆ ಜೋಡಿಸಿಕೊಳ್ಳುವಲ್ಲಿ ಮೀನುಗಾರರು ನಿರತರಾಗಿದ್ದಾರೆ.

    ತುಂಗಭದ್ರೆಗೆ ನೆರೆ ಬಂದಾಗ ಮೀನುಗಾರಿಕೆಗೆ ಬರೆ ಬೀಳುತ್ತದೆ. ಉದ್ಯೋಗವಿಲ್ಲದೆ ಸುಖಾಸುಮ್ಮನೆ ಕುಳಿತು ಉಣ್ಣಬೇಕಿದೆ. ಇಲ್ಲವೆ ಮೀನುಬೇಟೆಗೆ ಅಗತ್ಯ ಸಲಕರಣೆ ಜೋಡಿಸಿಕೊಳ್ಳಬೇಕಾಗುತ್ತದೆ ಎಂದು ಮೀನುಗಾರ ಕುಟುಂಬದ ಕೃಷ್ಣ, ಮಹೇಶ್, ಪಂಪಾಪತಿ, ಲಕ್ಷ್ಮಮ್ಮ, ಲತಾ ಅವಲೊತ್ತಿಕೊಳ್ಳುತ್ತಾರೆ.

    ಮೀನುಗಾರ ಕುಟುಂಬಗಳಿಗೆ ಅನುಕೂಲವಾಗಲು ಪ್ರತಿ ವರ್ಷ ಅಕ್ಟೋಬರ್‌ನಲ್ಲಿ ತುಂಗಭದ್ರಾ ನದಿಯಲ್ಲಿ ಕಟ್ಲ, ರವು, ಮೀರ‌್ಗ, ಕಮಾನ್ ಕರ್ಪು ಮೊದಲಾದ ತಳಿಗಳ ಹತ್ತು ಲಕ್ಷ ಮೀನು ಮರಿಗಳನ್ನು ಬಿತ್ತನೆ ಮಾಡಬೇಕು. ಮೀನುಗಾರ ಕುಟುಂಬಗಳಿಗೆ ನಿವೇಶನ, ವಸತಿ ಸೌಲಭ್ಯದೊಡನೆ, ಪುಟ್ಟಿ ಬಲೆ, ಸಹಾಯಧನ ಒದಗಿಸುವಲ್ಲಿ ಮೀನುಗಾರ ಇಲಾಖೆ ಮುಂದಾಗಬೇಕು.
    | ಎಸ್.ಆರ್.ಚಿನ್ನರಾಜು, ಅಧ್ಯಕ್ಷರು, ಕಂಪ್ಲಿ ಮೀನುಗಾರರ ಸಹಕಾರ ಸಂಘ, ಕಂಪ್ಲಿ ಕೋಟೆ

    ಮೀನುಗಾರರ ಬೇಡಿಕೆಯಂತೆ ಅಕ್ಟೋಬರ್‌ನಲ್ಲಿ ಜಿಪಂ ಸಹಕಾರದಿಂದ ತುಂಗಭದ್ರಾ ನದಿಯಲ್ಲಿ ಮೀನು ಮರಿ ಬಿತ್ತನೆ ಮಾಡಲಾಗುವುದು. ನೆರೆಗೆ ಪುಟ್ಟಿ, ದೋಣಿ, ಬಲೆ ಕೊಚ್ಚಿ ಹೋಗಿದ್ದರೆ ಅಗತ್ಯ ಪರಿಹಾರ ದೊರಕಿಸಿಕೊಡಲಾಗುವುದು. ಮೀನುಗಾರರು ಸ್ವಂತ ನಿವೇಶನ ಹೊಂದಿದ್ದಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗುವುದು. ನೆರೆ ಸಂದರ್ಭದಲ್ಲಿ ಮೀನುಗಾರರು ನಿರುದ್ಯೋಗಿಗಳಾದಲ್ಲಿ ಅಗತ್ಯ ಕ್ರಮ ಕುರಿತು ಕೇಂದ್ರ ಕಚೇರಿಯಿಂದ ಮಾರ್ಗಸೂಚಿ ಬಂದಿಲ್ಲ.
    | ಎಸ್.ದೊಡ್ಡ ನೀಲಪ್ಪ, ಮೀನುಗಾರಿಕೆ ಸಹಾಯಕರು, ಹೊಸಪೇಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts