More

    ರಭಸದ ಮಳೆಗೆ ಮಹಿಳೆ ಸಾವು, 26 ಮನೆಗಳು ಕುಸಿತ

    ಕಂಪ್ಲಿ: ಪಟ್ಟಣ ಸೇರಿ ತಾಲೂಕಾದ್ಯಂತ ಮಂಗಳವಾರ ರಾತ್ರಿ ಸುರಿದ 42.6ಮಿ.ಮೀ. ಮಳೆಗೆ ಒಬ್ಬ ನಹಿಳೆ ಮೃತಪಟ್ಟಿದ್ದು, ಕಚ್ಚಾಮನೆಗಳು ಬಿದ್ದಿವೆ. ಹಳ್ಳಕೊಳ್ಳಗೂ ತುಂಬಿಹರಿಯುತ್ತಿದ್ದು ನದಿಪಾತ್ರ ತಗ್ಗು ಪ್ರದೇಶಗಳ ಬೆಳೆ, ಪಂಪ್‌ಸೆಟ್ ಮೋಟಾರ್‌ಗಳು ಜಲಾವೃತಗೊಂಡಿವೆ. ಸಾಲದೆಂಬಂತೆ ತುಂಗಭದ್ರಾ ನದಿಗೆ ಜಲಾಶಯದಿಂದ 95ಸಾವಿರ ಕ್ಯೂಸೆಕ್ಸ್‌ಗೂ ಅಧಿಕ ನೀರು ಹರಿದು ಬರುತ್ತಿದ್ದು ಸೇತುವೆ ಮುಳುಗಡೆ ಭೀತಿ ಎದುರಾಗಿದೆ.ಜತೆಗೆ ನಾರಿಹಳ್ಳ ಸೇತುವೆಗಳು ಮುಳುಗಿ ಸಂಚಾರಕ್ಕೆ ವ್ಯತ್ಯಯವನ್ನುಂಟು ಮಾಡಿದೆ.

    ಜೀವ ಹಾನಿ: ಎಮ್ಮಿಗನೂರಿನ ಇಂದಿರಾನಗರದ ನೀರಾವರಿ ಇಲಾಖೆಯ ಕ್ವಾಟರ್ಸ್‌ನಲ್ಲಿ ವಾಸವಿದ್ದ ಆಶಾ ಕಾರ್ಯಕರ್ತೆ ಬಿ.ಉಮಾದೇವಿ(44) ಮಲಗಿದ್ದಾಗ ಮನೆಯ ಅಡ್ಡಗೋಡೆ ಮೈಮೇಲೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಡ್ಡಗೋಡೆ ಪಕ್ಕದಲ್ಲಿ ಬಿ.ಉಮಾದೇವಿ, ಪತಿ ಜಡೆಪ್ಪ, ಇಬ್ಬರು ಮಕ್ಕಳು ಮಲಗಿದ್ದರು. ಮಳೆಯಿಂದಾಗಿ ವಿದ್ಯುತ್ ಸಂಪರ್ಕ ಕಡಿದು ಹೋಗಿತ್ತು. ಈ ಸಂದರ್ಭ ಮಗ ಶ್ರೀಧರ್ ಮೊಬೈಲ್ ವೀಕ್ಷಿಸುತ್ತಿದ್ದಾಗ ರಾತ್ರಿ 1.30ರವೇಳೆಗೆ ಅಡ್ಡಗೋಡೆ ಜರಿಯುವ ಸದ್ದು ಕೇಳಿ ನಿದ್ರಿಸುತ್ತಿದ್ದ ತಮ್ಮನನ್ನು, ತಂದೆಯನ್ನು ಪಕ್ಕಕ್ಕೆ ಎಳೆದುಹಾಕಿ, ತಾಯಿಯನ್ನು ಎಳೆಯುವ ವೇಳೆಗೆ ಆಕೆ ಮುಖ, ದೇಹದ ಮೇಲೆ ಗೋಡೆ ಬಿದ್ದಿದೆ. ತಲೆಗೆ ತೀವ್ರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಾಪಂ ಇಒ ಮೊಹಮ್ಮದ್ ಖಿಜರ್, ತಹಸೀಲ್ದಾರ್ ಗೌಸಿಯಾಬೇಗಂ, ಪಿಡಿಒ ತಾರುಲಕ್ಷ್ಮಣ ನಾಯ್ಕ ಭೇಟಿ ನೀಡಿದ್ದರು.

    ಮನೆ ಕುಸಿತ: ತಾಲೂಕಾದ್ಯಂತ ಒಟ್ಟು 26ಮನೆಗಳು ಭಾಗಶಃ ಕುಸಿದಿವೆ. ಕಂಪ್ಲಿಯಲ್ಲಿ 2, ಎಮ್ಮಿಗನೂರಿನಲ್ಲಿ 7, ಸುಗ್ಗೇನಹಳ್ಳಿ, ಉಪ್ಪಾರಹಳ್ಳಿಯಲ್ಲಿ ಹಂಪಾದೇವನಹಳ್ಳಿಯಲ್ಲಿ ತಲಾ 2, ಇಟಗಿ, ದೇವಸಮುದ್ರ, ಜಿರೀಗನೂರು, ಚಿಕ್ಕಜಾಯಿಗನೂರಿನಲ್ಲಿ ತಲಾ 1, ದೇವಲಾಪುರದಲ್ಲಿ 3, ಮೆಟ್ರಿಯಲ್ಲಿ 4 ಕಚ್ಚಾ ಮನೆಗಳು ಭಾಗಶಃ ಬಿದ್ದಿವೆ.

    ಸಂಪರ್ಕ ಬಂದ್: ಮಳೆ ರಭಸಕ್ಕೆ ಕೃಷ್ಣನಗರ ಕ್ಯಾಂಪಿನ ಚರ್ಚ್ ರಸ್ತೆ ತುಂಬಾ ನೀರು ನಿಂತು ಸಂಪರ್ಕಕ್ಕೆ ತೊಂದರೆಯಾಗಿದೆ. ಅಕ್ಕಪಕ್ಕದ ಮನೆಯೊಳಗೆ ನೀರುನುಗ್ಗಿದೆ. ನೀರು ನಿಲ್ಲದಂತೆ ವ್ಯವಸ್ಥೆ ಕಲ್ಪಿಸುವಂತೆ, ಚರಂಡಿ ನಿರ್ಮಿಸುವಂತೆ ಕೆ.ಎನ್.ಕ್ಯಾಂಪಿನ ಪೋಟ್ನೂರಿ ರಾಜೇಶ್, ನೀಲಕಂಠೇಶ್ವರರಾವ್, ಶಿವಯ್ಯ ಸೇರಿ ಇತರರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts