More

    ಕುಟುಂಬ ನಿರ್ವಹಣೆಯಲ್ಲಿ ಮಹಿಳೆ ಪಾತ್ರ ಪ್ರಮುಖ

    ಕಂಪ್ಲಿ: ಕುಟುಂಬ ನಿರ್ವಹಣೆಯಲ್ಲಿ ಮಹಿಳೆ ಪಾತ್ರ ಪ್ರಮುಖವಾಗಿದೆ ಎಂದು ಸಪ್ತಗಿರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಾ.ವೆಂಕಟೇಶ್ ಸಿ.ಭರಮಕ್ಕ ಹೇಳಿದರು.

    ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿಸಿ ಟ್ರಸ್ಟ್ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ‘ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ’ ವಿಷಯ ಕುರಿತು ಶುಕ್ರವಾರ ಉಪನ್ಯಾಸ ನೀಡಿದರು. ಬಹುತೇಕ ಕುಟುಂಬಗಳು ಮಹಿಳೆಯರ ಆರ್ಥಿಕತೆ ಅವಲಂಬಿಸಿದ್ದು, ಮಕ್ಕಳಿಗೆ ಸಮಾನ ಶಿಕ್ಷಣ, ಆರೈಕೆ ಒದಗಿಸಲು ಆದ್ಯತೆ ನೀಡಬೇಕಿದೆ ಎಂದರು.

    ವಿಜಯನಗರ ಜಿಲ್ಲೆ ಪ್ರೌಢಶಾಲೆ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷೆ ಡಾ.ಆರ್.ಎಸ್. ಅಕ್ಕಮಹಾದೇವಿ, ಸಂಸ್ಕೃತಿ ಸಂಸ್ಕಾರ ಕುರಿತು ಉಪನ್ಯಾಸ ನೀಡಿ, ಸಂಸ್ಕಾರ ಕೊರತೆಯಿಂದಾಗಿ ಬಡ ವೃದ್ಧರು ಅನಾಥಾಶ್ರಮ ಪಾಲಾದರೆ ಶ್ರೀಮಂತ ವೃದ್ಧರು ವೃದ್ಧಾಶ್ರಮದ ಪಾಲಾಗುತ್ತಿದ್ದಾರೆ. ಮೊಬೈಲ್, ಅಂತರ್ಜಾಲ, ಆಧುನಿಕ ಜೀವನ ಶೈಲಿಯಿಂದ ನಾಡಿನ ಸಂಸ್ಕೃತಿ-ಸಂಸ್ಕಾರ ಕಣ್ಮರೆಯಾಗುತ್ತಿದೆ ಎಂದರು.

    ಕಾರ್ಯಕ್ರಮ ಉದ್ಘಾಟಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನ ಕಲ್ಯಾಣ ಕರ್ನಾಟಕ ಪ್ರಾದೇಶಿಕ ನಿರ್ದೇಶಕ ಬಿ.ಗಣೇಶ್, ಸಂಸಾರದಲ್ಲಿ ಸಾಮರಸ್ಯ ಮೂಡಿಸುವಲ್ಲಿ ಮಹಿಳೆ ಪ್ರಮುಖ ಪಾತ್ರವಹಿಸುತ್ತಾಳೆ. ತಾಲೂಕಿನ 24ಸಾವಿರ ಸದಸ್ಯೆಯರು 10.25 ಕೋಟಿ ರೂ. ಉಳಿತಾಯ ಸಾಧಿಸಿದ್ದು, ನಾನಾ ಯೋಜನೆಗಳಲ್ಲಿ 58 ಕೋಟಿ ರೂ. ಸಾಲ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

    ಪುರಸಭೆ ಅಧ್ಯಕ್ಷೆ ಶಾಂತಲಾ ವಿ.ವಿದ್ಯಾಧರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ನಿರ್ಮಲಾ ಕೆ.ವಸಂತ್, ಬಿಸಿ ಟ್ರಸ್ಟ್ ವಿಜಯನಗರ ಜಿಲ್ಲೆ ನಿರ್ದೇಶಕ ಕೆ.ಚಿದಾನಂದ, ಯೋಜನಾಧಿಕಾರಿ ಹಾಲಪ್ಪ, ಜ್ಞಾನವಿಕಾಸ ಕೇಂದ್ರ ಅಧ್ಯಕ್ಷೆ ಜ್ಯೋತಿ, ಸಮನ್ವಯ ಅಧಿಕಾರಿ ರೇಖಾ, ಮೇಲ್ವಿಚಾರಕರಾದ ರಾಜೇಶ್ವರಿ, ರವಿಚಂದ್ರ, ಕೃಷಿ ಮೇಲ್ವಿಚಾರಕ ಸಂಜೀವ್, ಸೇವಾಪ್ರತಿನಿಧಿಗಳು ಇತರರಿದ್ದರು. ಕಾರ್ಯಕ್ರಮದಲ್ಲಿ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಂಗೋಲಿ ಸ್ಪರ್ಧೆಗಳು ಜರುಗಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts