More

    ರಕ್ಷಣೆ ಇಲ್ಲದೆ ಅಳಿವನಂಚಿಗೆ ನುಸುಳುತ್ತಿರುವ ರಾಮಸಾಗರದ ಗಿರಿದುರ್ಗ ಕೋಟೆ

    ಟ್ಯಾಂಕ್ ಬಸಿವ ನೀರಿನಿಂದ ಕೋಟೆ ಗೋಡೆ ಶಿಥಿಲ-ಗ್ರಾಮಾಡಳಿತ ನಿರ್ಲಕ್ಷ್ಯ


    ಕಂಪ್ಲಿ: ತಾಲೂಕಿನ ರಾಮಸಾಗರದ ಐತಿಹಾಸಿಕ ಕೋಟೆ ಸ್ಮಾರಕಕ್ಕೆ ಸೂಕ್ತ ರಕ್ಷಣೆ ಇಲ್ಲದೆ ದಿನೇ ದಿನೇ ಅವನತಿಯ ಅಂಚಿಗೆ ನುಸುಳುತ್ತಿದೆ. ಸ್ಮಾರಕಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಿದ್ದ ಗ್ರಾಮಾಡಳಿತ ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಗ್ರಾಮಸ್ಥರ ಆರೋಪವಿದೆ.

    ಶಿಥಿಲಕ್ಕೆ ಕಾರಣ: ಕೋಟೆ ಆವರಣದಲ್ಲಿ ಗ್ರಾಮಾಡಳಿತ ಟ್ಯಾಂಕ್ ನಿರ್ಮಿಸಿದ್ದು ನೀರು ಸೋರಿ ಕೋಟೆ ಗೋಡೆ ಶಿಥಿಲಗೊಳ್ಳುತ್ತಿದೆ. ಟ್ಯಾಂಕ್ ಸ್ಥಳಾಂತರಿಸಿ ಎನ್ನುವ ಗ್ರಾಮಸ್ಥರ ಒತ್ತಾಯ ಅರಣ್ಯರೋಧನವಾಗಿದೆ.

    ಗಿರಿದುರ್ಗದ ಇತಿಹಾಸ: ಭೀಮ ಎನ್ನುವ ಜಟ್ಟಿ ಅನೆಗೊಂದಿ ಅರಸರ ಮಾರ್ಯಾದೆಗೆ ಕುಂದು ತರಲೆಂದು ಊರ ಬಾಗಿಲಿಗೆ ತನ್ನ ಇಜಾರವನ್ನು ಕಟ್ಟಿಸಿ ಮೆರೆಯುತ್ತಿದ್ದನಂತೆ. ಜೋಡಿ ಮಲ್ಲಪ್ಪನಾಯಕ ಎನ್ನುವ ಜಟ್ಟಿಯು ಭೀಮ ಜಟ್ಟಿಯನ್ನು ಸೋಲಿಸಿದ್ದಕ್ಕಾಗಿ ಅನೆಗೊಂದಿಯ ರಾಮರಾಯ ತಿರುಮಲ ರಾಜದೇವನು ಜೋಡಿ ಮಲ್ಲಪ್ಪನಾಯಕನಿಗೆ ಭೀಮ ಎನ್ನುವ ಬಿರುದನ್ನು ನೀಡಿ ಗೌರವಿಸಿದನು. ಜೋಡಿ ಮಲ್ಲಪ್ಪನಾಯಕನ ಗೌರವಾರ್ಥವಾಗಿ ರಾಮಸಾಗರ ಕೆರೆಯನ್ನು, ರಾಮಸಾಗರ ಗ್ರಾಮದಲ್ಲಿ ಕೋಟೆಯನ್ನು, ಭೀಮೇಶ್ವರ ದೇವಸ್ಥಾನವನ್ನು ನಿರ್ಮಿಸಿದರೆನ್ನುವ ಉಲ್ಲೇಖವಿದೆ.

    ಗಿರಿದುರ್ಗದ ಲಕ್ಷಣ: ರಾಮಸಾಗರದ ಈಶಾನ್ಯದ ಚಿಕ್ಕ ಬೆಟ್ಟದ ಮೇಲೆ ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿ ಕೋಟೆಯನ್ನು ನಿರ್ಮಿಸಲಾಗಿದೆ. ಇದು ಗ್ರಾಮ ರಕ್ಷಣೆಯ ಗಿರಿದುರ್ಗವೂ ಆಗಿದೆ. ಕೋಟೆ ಉತ್ತರಾಮುಭಿಮುಖವಾಗಿದ್ದು ಸರಳ ಬಾಗಲವಾಡವನ್ನೊಂದಿದೆ. ಒಳ ಮಧ್ಯ ಭಾಗದಲ್ಲಿ ದೊಡ್ಡ ಕೊತ್ತಲವಿದೆ. ಈ ಕೊತ್ತಲವು 30ಅಡಿ ಸುತ್ತಳತೆ ಹಾಗೂ 30ಅಡಿ ಎತ್ತರವಾಗಿದೆ. ವೃತ್ತಾಕಾರದ ಕೊತ್ತಲವನ್ನೇರಿ ಶತ್ರುಗಳ ಚಲನವಲನಗಳನ್ನು ಗುರುತಿಸಲು ಅನುಕೂಲವಾಗುವಂತೆ ನಿರ್ಮಿಸಲಾಗಿದೆ. ಕೋಟೆ ಗೋಡೆ ಸುಮಾರು 10ಅಡಿ ಎತ್ತರವಿದ್ದು ಸುಮಾರು 300ಅಡಿಗಳಷ್ಟು ಸುತ್ತಳತೆ ಹೊಂದಿದೆ. ಅತ್ಯಂತ ಕಿರಿದಾದ ಕೋಟೆಯೆಂಬ ಉಪಖ್ಯಾತಿಯನ್ನೊಂದಿದೆ. ತಳಪಾಯವಿಲ್ಲದೆ ಹಾಸು ಬಂಡೆಯ ಮೇಲೆ ಮಧ್ಯಮ ಗಾತ್ರದ ಕಲ್ಲುಗಳಿಂದ ಕೋಟೆಯನ್ನು ನಿರ್ಮಿಸಲಾಗಿದ್ದು, ಕೋಟೆಯೊಳಗೆ ಬಾವಿ ತೋಡಿಸಲಾಗಿದೆ. ವಿಜಯನಗರಕ್ಕೆ ಪೂರ್ವ ದಿಕ್ಕಿನಿಂದ ನುಗ್ಗುವ ಶತ್ರುಗಳನ್ನು ತಡೆ ಹಿಡಿಯುವುದಕ್ಕಾಗಿ, ಚಲನವಲನಗಳನ್ನು ಗುರುತಿಸಲು ಈ ಚಿಕ್ಕ ಕೋಟೆಯನ್ನು ನಿರ್ಮಿಸಿದ್ದಾರೆ ಎನ್ನುವ ಪ್ರತೀತಿಯಿದೆ.

    ಗ್ರಾಮಸ್ಥರ ಆಗ್ರಹ: ಕೋಟೆ ಪ್ರದೇಶದಲ್ಲಿ ನೀರು ಸಂಗ್ರಹಣಾ ತೊಟ್ಟಿಯಿದ್ದು, ತೊಟ್ಟಿ ನೀರು ಸೋರುವಿಕೆಯಿಂದಾಗಿ ಕೋಟೆ ಗೋಡೆ ದಿನೆದಿನೇ ಶಿಥಿಲಗೊಳ್ಳುತ್ತಿದೆ. ಕೋಟೆ ಪ್ರದೇಶದಲ್ಲಿನ ನೀರು ಸಂಗ್ರಹಣಾ ತೊಟ್ಟಿಯನ್ನು ಸ್ಥಳಂತರಿಸಬೇಕಿದೆ. ರಾಜ್ಯ ಪುರಾತತ್ವ ಸಂಗ್ರಾಹಾಲಯ ಮತ್ತು ಪರಂಪರೆ ಇಲಾಖೆ ಇತ್ತ ಗಮನವಹಿಸಿ ಕೋಟೆಯನ್ನು ಜೀರ್ಣೋದ್ಧಾರಗೊಳಿಸಲು ಮುಂದಾಗಬೇಕೆಂದು ಹಾದಿಮನೆ ಕಾಳಿಂಗವರ್ಧನ, ದೇವಸಮುದ್ರ ಪಂಪಾಪತಿ, ಕಡ್ಡಿ ದೇವೇಂದ್ರ, ಜಿ.ಗೌಡ, ಉಪ್ಪಾರ ರಮೇಶ್, ಎಚ್.ಬಿ.ಜಲಸಿಂಗ್, ಬೇವಿನಹಳ್ಳಿ ವಿರುಪಾಕ್ಷಪ್ಪ, ಹೊಸಪೇಟೆ ಕನಕಪ್ಪ ಸೇರಿ ಅನೇಕರು ಆಗ್ರಹಿಸಿದ್ದಾರೆ.

    ಕೋಟೆಯಲ್ಲಿರುವ ಬಂಡೇ ಹನುಮಂತರಾಯಸ್ವಾಮಿ ಪ್ರಾಚೀನ ದೇವಸ್ಥಾನವಾಗಿದ್ದು, ಬಂಡೇ ಹನುಮಂತರಾಯ ಪ್ರತಿಮೆ ವ್ಯಾಸರಾಯರಿಂದ ಪ್ರತಿಷ್ಠಾಪಿತವಾಗಿದೆ. ಈ ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೊಳಪಡಿಸಬೇಕು. ದೇವಸ್ಥಾನ ಆವರಣದೊಳಗಿನ ನೀರಿನ ತೊಟ್ಟಿಯನ್ನು ತುರ್ತಾಗಿ ಸ್ಥಳಾಂತರಿಸಬೇಕು. ಕೋಟೆ ಗೋಡೆಯನ್ನು, ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಬೇಕು.
    | ಕಂಪ್ಲಿ ಎರ್ರಿಸ್ವಾಮಿ, ಅಧ್ಯಕ್ಷರು, ಶ್ರೀ ಬಂಡೇ ಹನುಮಂತರಾಯಸ್ವಾಮಿ ದೇವಸ್ಥಾನ ಸಮಿತಿ, ರಾಮಸಾಗರ.

    ಜಲಜೀವನ್ ಮಿಷನ್ ಯೋಜಡಿ ಹೊಸ ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸಲಾಗುವುದು. ನಂತರ ಕೋಟೆಯೊಳಗಿನ ನೀರಿನ ಟ್ಯಾಂಕ್‌ನ್ನು ಸ್ಥಳಾಂತರಿಸಲಾಗುವುದು. ಕೋಟೆ ಗೋಡೆ ಜೀರ್ಣೋದ್ಧಾರಕ್ಕಾಗಿ ರಾಜ್ಯ ಪುರಾತತ್ವ ಸಂಗ್ರಾಹಾಲಯ ಮತ್ತು ಪರಂಪರೆ ಇಲಾಖೆಗೆ ಪತ್ರ ಬರೆಯಲಾಗುವುದು.
    | ಕೆ.ಎಚ್.ಶಶಿಕಾಂತ್, ಪಿಡಿಒ, ರಾಮಸಾಗರ.

    ರಕ್ಷಣೆ ಇಲ್ಲದೆ ಅಳಿವನಂಚಿಗೆ ನುಸುಳುತ್ತಿರುವ ರಾಮಸಾಗರದ ಗಿರಿದುರ್ಗ ಕೋಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts