More

    ರಾಮಸಾಗರಕ್ಕೆ ಬೇಕಿದೆ ಕಾಯಕಲ್ಪ

    ಬಂಗಿ ದೊಡ್ಡ ಮಂಜುನಾಥ ಕಂಪ್ಲಿ

    ತಾಲೂಕಿನ ರಾಮಸಾಗರ ಗ್ರಾಮವನ್ನು ಮೂಲಸೌಕರ್ಯಗಳ ಕೊರತೆ ಕಾಡುತ್ತಿದ್ದು, ಕಾಯಕಲ್ಪದ ಅಗತ್ಯ ಅಧಿಕವಾಗಿದೆ. ಇಲ್ಲಿ 6797ಕ್ಕೂ ಅಧಿಕ ಜನಸಂಖ್ಯೆ, 1575ಕ್ಕೂ ಅಧಿಕ ಕುಟುಂಬಗಳಿವೆ. ಸ್ವಚ್ಛತೆ ಇಲ್ಲ. ಚರಂಡಿ ವ್ಯವಸ್ಥೆ ಸರಿಯಿಲ್ಲ. ನಲ್ಲಿ ನೀರು, ಚರಂಡಿ ನೀರು, ಬಚ್ಚಲ ನೀರು ರಸ್ತೆ ಮೇಲೆ ಹರಿಯುತ್ತಿದೆ. ವೃದ್ಧರು, ಮಕ್ಕಳು, ರೋಗಿಗಳು, ಗರ್ಭಿಣಿಯರು, ಬಾಣಂತಿಯರು, ಅಂಗವಿಕಲರು ಈ ರಸ್ತೆ ಮೇಲೆ ತಿರುಗಾಡಲು ಹಿಂದೆ-ಮುಂದೆ ನೋಡುವಂತಾಗಿದೆ. ಗ್ರಾಮದಲ್ಲಿ ಕಸವಿದೆಯೋ, ಕಸದಲ್ಲಿ ಗ್ರಾಮ ಇದೆಯೋ ಎನ್ನುವ ಸ್ಥಿತಿ ಇದೆ. ಎಲ್ಲಿ ನೋಡಿದರೂ ಕಸ, ನಿರುಪಯುಕ್ತ ಗಿಡಗಳು ಬೆಳೆದಿವೆ.

    2ನೇವಾರ್ಡ್ ಪೂಜಾರ ನಾಗಪ್ಪನ ಮನೆಹತ್ತಿರ ವಿದ್ಯುತ್ ಕಂಬಗಳು ಶಿಥಿಲಗೊಂಡಿವೆ. ಯಾವ ಸಮಯದಲ್ಲಾದರೂ ನೆಲಕ್ಕುರುಳುವಂತಿವೆ. ಅಲ್ಲಲ್ಲಿ ವಿದ್ಯುತ್‌ತಂತಿಗಳು ಜೋತು ಬಿದ್ದಿವೆ. ಈ ವಿದ್ಯುತ್‌ತಂತಿಗಳು ತಗುಲಿ ಟಿಸಿಗಳು ಹಾಳಾಗುತ್ತಿವೆ. ಐದಾರು ತಿಂಗಳಿಗೊಮ್ಮೆ ಹೆಚ್ಚಿನ ಪ್ರಮಾಣದ ವಿದ್ಯುತ್ ಹರಿದು ವಿದ್ಯುತ್ ಆಧಾರಿತ ವಸ್ತುಗಳು ಹಾಳಾಗುತ್ತಿವೆ. ಈ ಬಗ್ಗೆ ಜೆಸ್ಕಾಂ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ.

    ರಾಮಸಾಗರ ಬಯಲು ಶೌಚ ಮುಕ್ತ ಎನ್ನುವುದು ದಾಖಲೆಗಳಲ್ಲಿದೆ. ವಾಸ್ತವವಾಗಿ ಬಯಲು ಶೌಚ ಮುಕ್ತವಾಗಿಲ್ಲ. 2ನೇವಾರ್ಡ್ ಸೇರಿ ಕೆಲವೆಡೆಗಳಲ್ಲಿ ವೃದ್ಧರು, ಮಹಿಳೆಯರು, ಮಕ್ಕಳು ಬಯಲನ್ನೇ ನೆಚ್ಚಿಕೊಂಡಿದ್ದಾರೆ.

    ಚರಂಡಿಗಳಲ್ಲಿ ಹೊಲಸು ನೀರು ನಿಂತಲ್ಲೇ ನಿಲ್ಲುವುದರಿಂದ ದುರ್ನಾತ ಬೀರುತ್ತಿವೆ. ಕಲ್ಯಾಣಮಂಟಪದಿಂದ ಕೆಳಭಾಗದತ್ತ ಹರಿಯುವ ಚರಂಡಿ ನೀರು 3ನೇವಾರ್ಡ್‌ನ ಕೋತಿ ಶಿವಕುಮಾರ್ ಮನೆ ಬಳಿ ಹಳ್ಳದಂತೆ ನಿಲ್ಲುತ್ತಿದೆ. ದುರ್ನಾತ, ಸೊಳ್ಳೆಗಳ ಕಾಟ ಅಧಿಕವಾಗಿದೆ. ಚರಂಡಿ ನಿರ್ಮಿಸಲು ಗ್ರಾಮಸ್ಥರು ಒತ್ತಾಯಿಸುತ್ತಲೇ ಬಂದಿದ್ದಾರೆ. ಮಳೆ ಬಂದರೆ ಚರಂಡಿ ನೀರಿನೊಂದಿಗೆ ಸೇರಿ ರಸ್ತೆಗುಂಟ ಹರಿದು ಮೊಣಕಾಲುತನಕ ನೀರು ನಿಲ್ಲುತ್ತದೆ. ಈ ಎಲ್ಲ ಸಮಸ್ಯೆ ಪರಿಹರಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

    ಸಕಾಲದಲ್ಲಿ ಚರಂಡಿ ಸ್ವಚ್ಛಗೊಳಿಸಲಾಗುವುದು. ಗ್ರಾಮಸ್ಥರು ಸಹಕರಿಸಬೇಕು. ಹೈಸ್ಕೂಲ್ ಆವರಣಗೋಡೆ ಅತಿಕ್ರಮಿಸಿದವರಿಗೆ ನೋಟಿಸ್ ನೀಡಲಾಗುವುದು. ಕೋಟೆಯಲ್ಲಿನ ನೀರು ತೊಟ್ಟಿ ಸ್ಥಳಾಂತರಿಸುವಂತೆ ಆರ್‌ಡಬ್ಲ್ಯುಎಸ್‌ಗೆ ಪತ್ರ ಬರೆದಿದೆ. ಸ್ಮಶಾನ ಹದ್ದುಬಸ್ತಿಗೆ ತಹಸೀಲ್ದಾರ್‌ಗೆ ಪತ್ರ ಬರೆದಿದೆ. ಅಂಗನವಾಡಿ ಕಟ್ಟಡಕ್ಕೆ ಸಿಎ ನಿವೇಶನ ನೀಡಲಾಗುವುದು. ಉದ್ದಿಗುಡಿ, ನಾಗರಕಟ್ಟೆ ಚರಂಡಿ ನೀರನ್ನು ಬೂದು ನೀರು ನಿರ್ವಹಣೆಯಡಿಯಲ್ಲಿ ಸಂಸ್ಕರಿಸಿ ಕಾಲುವೆಗೆ ಹರಿಸಲಾಗುವುದು. 2ನೇವಾರ್ಡ್‌ನಲ್ಲಿ ಡಿಎಂಎಫ್‌ನಲ್ಲಿ ಸಾಮೂಹಿಕ ಶೌಚಗೃಹ ನಿರ್ಮಿಸುವಂತೆ ಜಿಪಂಗೆ ಪ್ರಸ್ತಾವನೆ ಸಲ್ಲಿಸಿದೆ. ಪಶು ಇಲಾಖೆಗೆ ರಾಳ್ಳಗುಡ್ಡದಲ್ಲಿ ನಿವೇಶನ ನೀಡುವಂತೆ ಡಿಸಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು.
    | ಕೆ.ಎಚ್.ಶಶಿಕಾಂತ, ಪಿಡಿಒ, ರಾಮಸಾಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts