More

    ಮಾಹಿತಿ ನೀಡುತ್ತಿಲ್ಲವೆಂದು ಕೆಲ ಹೊತ್ತು ಸಾಮಾನ್ಯ ಸಭೆ ಬಹಿಷ್ಕರಿಸಿದ ಮೆಟ್ರಿ ಗ್ರಾಪಂನ ಸರ್ವ ಸದಸ್ಯರು

    ಕಂಪ್ಲಿ: ಲೆಕ್ಕ ಪತ್ರಗಳು, ದಾಖಲೆಗಳನ್ನು ಸಮರ್ಪಕವಾಗಿ ಒದಗಿಸುತ್ತಿಲ್ಲ ಎಂದು ಪಿಡಿಒ, ಕಾರ್ಯದರ್ಶಿಗಳು ವಿರುದ್ಧ ಆರೋಪಿಸಿದ ಸದಸ್ಯರು, ದಾಖಲೆಗಳನ್ನು ಒದಗಿಸುವಂತೆ ತಾಲೂಕಿನ ಮೆಟ್ರಿ ಗ್ರಾಪಂ ಕಚೇರಿಯಲ್ಲಿ ಬುಧವಾರ ಜರುಗಿದ ಸಾಮಾನ್ಯ ಸಭೆಯನ್ನು ಕೆಲ ಹೊತ್ತು ಬಹಿಷ್ಕರಿಸಿದರು.

    ಗ್ರಾಪಂ ಅಧ್ಯಕ್ಷ ತಿಮ್ಮಪ್ಪ ಮತ್ತು ಉಪಾಧ್ಯಕ್ಷೆ ಜಯಲಕ್ಷ್ಮೀ ಜಡೇಗೌಡ ಜಂಟಿಯಾಗಿ ಮಾತನಾಡಿ, 5 ಲಕ್ಷ ರೂ.ಗೂ ಅಧಿಕ ವೆಚ್ಚದ ವಿವಿಧ ಕಾಮಗಾರಿಗಳನ್ನು ಗ್ರಾಪಂ ಸಿಬ್ಬಂದಿ ಸಂಬಂಧಿಕರಿಗೆ ನೀಡಿದ್ದು, ಇವುಗಳಿಗೆ ಸೂಕ್ತ ದಾಖಲೆಗಳಿಲ್ಲದೆ ಅವ್ಯವಹಾರವಾಗಿದೆ. ಗ್ರಾಪಂನ 7 ಬ್ಯಾಂಕ್ ಖಾತೆಗಳ ಪೈಕಿ 6 ಬ್ಯಾಂಕ್ ಖಾತೆಗಳ ವಿವರ ನೀಡುತ್ತಿಲ್ಲ. ಈತನಕ ನಾಲ್ಕು ಸಾಮಾನ್ಯ ಸಭೆಗಳಾದರೂ ಲೆಕ್ಕಪತ್ರ ಮಾಹಿತಿ ನೀಡುತ್ತಿಲ್ಲ. ಕರವಸೂಲಿ ಮೊತ್ತವನ್ನು ಆಯಾ ದಿನವೇ ಬ್ಯಾಂಕಿಗೆ ಜಮೆ ಮಾಡದೆ ಬಹುದಿನಗಳ ಕಾಲ ತಮ್ಮಲ್ಲಿರಿಸಿಕೊಂಡು ಸ್ವಂತಕ್ಕೆ ಬಳಸಿಕೊಳ್ಳಲಾಗುತ್ತಿದೆ.

    ಕಚೇರಿಗೆ ಬರುವ ಸದಸ್ಯರು ಮತ್ತು ಸಾರ್ವಜನಿಕರೊಂದಿಗೆ ಸಿಬ್ಬಂದಿ ಸೌಜನ್ಯದಿಂದ ವರ್ತಿಸುತ್ತಿಲ್ಲ. ಕುಡಿವ ನೀರಿಗಾಗಿ ಪ್ರತ್ಯೇಕ ಖಾತೆಯಿದ್ದು, ಕಳೆದ ಐದು ವರ್ಷಗಳಲ್ಲಿ 55ಲಕ್ಷ ರೂ.ಗಳ ಖರ್ಚುವೆಚ್ಚ ಮಾಡಲಾಗಿದ್ದು, ಇದರಲ್ಲಿ 30ಲಕ್ಷ ರೂ. ಹಗರಣವಾಗಿದೆ. ಫಾಗಿಂಗ್ ಯಂತ್ರ ಹೊಸದಾಗಿ ಖರೀದಿಸಿದ್ದು, ದುರಸ್ತಿಗೆ ಬಂದ ನೆಪದಲ್ಲಿ ಮತ್ತೊಂದು ಫಾಗಿಂಗ್ ಯಂತ್ರ ಖರೀದಿಸಿದ್ದಾರೆ. ಗ್ರಾಪಂ ಸದಸ್ಯರಿಗೆ ಸರ್ಕಾರದಿಂದ ಬಂದ ಮಾಹಿತಿಯಾಗಲಿ, ಯಾವುದೇ ಯೋಜನೆಗಳ ಬಗ್ಗೆ ಪಿಡಿಒ, ಕಾರ್ಯದರ್ಶಿ ತಿಳಿಸದೆ ಶಿಷ್ಟಚಾರ ಪಾಲಿಸುತ್ತಿಲ್ಲ. ಚಿನ್ನಾಪುರದ ಟಿ.ಸಂಜೀವಪ್ಪ ಸೇರಿ ಕೆಲ ಗ್ರಾಮಸ್ಥರಿಂದ ನಿವೇಶನವನ್ನು ದಾಖಲೆಗೆ ಸೇರಿಸಲು ಸರ್ಕಾರ ನಿಗದಿಪಡಿಸಿದಕ್ಕಿಂತ ಹೆಚ್ಚಿನ ಹಣವನ್ನು ಕರ ವಸೂಲಿಗಾರ ಪಡೆದಿದ್ದಾರೆ.

    ಈ ಹಿನ್ನೆಲೆಯಲ್ಲಿ ಪಿಡಿಒ ಮತ್ತು ಕಾರ್ಯದರ್ಶಿಗಳನ್ನು ಬದಲಿಸುವಂತೆ ಹಾಲಿ ಮತ್ತು ಮಾಜಿ ಶಾಸಕರಿಗೂ, ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಹದಿನೈದು ದಿನದೊಳಗಾಗಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಲಾಗುವುದೆಂದು ಎಚ್ಚರಿಕೆ ನೀಡಿದರು. 20 ಸದಸ್ಯರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts