More

    ಜಾನಪದ ಅಕಾಡೆಮಿಗೆ ಅನುದಾನದ ಕೊರತೆ: ಅಧ್ಯಕ್ಷೆ ಬಿ.ಮಂಜಮ್ಮ ಜೋಗತಿ ಕಳವಳ



    ಕಂಪ್ಲಿ: ಕಲಾವಿದರು ಸಮಯಪ್ರಜ್ಞೆ ಅಳವಡಿಸಿಕೊಳ್ಳಬೇಕು ಎಂದು ಪದ್ಮಶ್ರೀ ಪುರಸ್ಕೃತೆ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಬಿ.ಮಂಜಮ್ಮ ಜೋಗತಿ ಹೇಳಿದರು.

    ತಾಲೂಕಿನ ರಾಮಸಾಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜಯನಗರ ಛಲವಾದಿ ಕಹಳೆ ವಾದನ ಕಲಾವಿದರ ಸಂಘ ಹಾಗೂ ಜನಪದ ತಂಡಗಳ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ವೃತ್ತಿ ಕಲಾವಿದರಾಗದೆ ಹವ್ಯಾಸಿ ಕಲಾವಿದರಾದಲ್ಲಿ ಮಾತ್ರ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ. ಜನಪದ ಕಲಾ ಪ್ರಕಾರಗಳನ್ನು ಎಲ್ಲ ಹಂತದ ಶೈಕ್ಷಣಿಕ ಪಠ್ಯದಲ್ಲಿ ಅಳವಡಿಸಬೇಕಿದೆ. ಜಾನಪದ ಅಕಾಡೆಮಿಗೆ ಅನುದಾನದ ಕೊರತೆ ಇದ್ದು, ರಾಜ್ಯದ ಎಲ್ಲ ಜಿಲ್ಲೆಗಳ ಕಲಾವಿದರಿಗೆ ನ್ಯಾಯ ಒದಗಿಸಲು ತೊಂದರೆ ಇದೆ ಎಂದು ಹೇಳಿದರು.

    ಮೆರವಣಿಗೆಯಲ್ಲಿ ಕಾಳಿ ವೀರೇಶ್ ಕಹಳೆ ವಾದನ ತಂಡ, ಕೆ.ಬಸವರಾಜ್ ಡೊಳ್ಳು ಕುಣಿತ ತಂಡ, ಕೆ.ರವಿ ತಾಷಾರಾಂಡೋಲು ತಂಡ, ಛಲವಾದಿ ವೆಂಕೋಬಾ ಕೋಲಾಟ ತಂಡ, ಹೊಸಪೇಟೆಯ ಯೇಸು ಮರಗಾಲು ಕುಣಿತ ಜನಮನ ಸೆಳೆದವು.

    ನಾಟಕ ಪ್ರದರ್ಶನ: ಮೆರವಣಿಗೆ ಬಳಿಕ ನಡೆದ ಶಿವಶರಣ ಸಮಗಾರ ಹರಳಯ್ಯ ನಾಟಕ ಪ್ರದರ್ಶನಕ್ಕೆ ಮಾಜಿ ಶಾಸಕ ಟಿ.ಎಚ್.ಸುರೇಶ್‌ಬಾಬು ಚಾಲನೆ ನೀಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಂಜಮ್ಮ ಜೋಗತಿಯಂತಹ ಕಲಾವಿದೆಯನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡುವ ಮೂಲಕ ಜನಪದ ಕಲೆಯ ಉಳಿವಿಗೆ ಮಹತ್ವದ ಕೊಡುಗೆ ನೀಡಿದೆ ಎಂದರು.

    ವಿಜಯನಗರ ಛಲವಾದಿ ಕಹಳೆ ವಾದನ ಕಲಾವಿದರ ಸಂಘದ ಅಧ್ಯಕ್ಷ ಕೆ.ವಸಂತಕುಮಾರ್ ಅಧ್ಯಕ್ಷತೆವಹಿಸಿದ್ದರು. ಗ್ರಾಪಂ ಅಧ್ಯಕ್ಷ ಶರಣಪ್ಪ ಬೊಮ್ಮಗಂಡಿ, ಉಪಾಧ್ಯಕ್ಷೆ ಕೆ.ಯಲ್ಲಮ್ಮ, ಪ್ರಮುಖರಾದ ಸಿ.ಆರ್.ಹನುಮಂತ, ಸಿ.ವಿರೂಪಾಕ್ಷ, ಎಚ್.ಕೆ.ಕಾರಮಂಚಪ್ಪ, ಎಚ್.ಪಿ.ಶಿಕಾರಿರಾಮು, ಸುಗ್ಗೇನಹಳ್ಳಿ ರಮೇಶ್, ಕರಿಬಸಯ್ಯ ಸ್ವಾಮಿ, ಬಿ.ದೇವೇಂದ್ರ, ಅಳ್ಳಳ್ಳಿ ವೀರೇಶ್, ಪುರುಷೋತ್ತಮ, ಸಿ.ವೆಂಕಟೇಶ್, ಸಿ.ರುದ್ರಪ್ಪ ಸೇರಿ ಕಲಾವಿದರು, ಗ್ರಾಪಂ ಸದಸ್ಯರು, ಗ್ರಾಮಸ್ಥರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts