More

    ಕಾಮೇಗೌಡ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಲಿ: ಕಸಾಪ ಮಾಜಿ ಅಧ್ಯಕ್ಷ ಜಿ.ಟಿ.ವೀರಪ್ಪ ಆಗ್ರಹ

    ಮಂಡ್ಯ: ಜಲ ಸಂರಕ್ಷಣೆ ಕ್ಷೇತ್ರದಲ್ಲಿ ಸರ್ಕಾರ ಮಾಡದ ಕೆಲಸವನ್ನು ಮಾಡಿರುವ ಜಲಸಂರಕ್ಷಕ ಕಲ್ಮನೆ ಕಾಮೇಗೌಡರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಕಾರ್ಯ ಮಾಡಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಜಿ.ಟಿ.ವೀರಪ್ಪ ಆಗ್ರಹಿಸಿದರು.
    ನಗರದ ಕಸಾಪ ಭವನದ ಸಂಚಿ ಹೊನ್ನಮ್ಮ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಲ ಸಂರಕ್ಷಕ ಕಲ್ಮನೆ ಕಾಮೇಗೌಡ ಹಾಗೂ ಕಿರುತೆರೆ ಕಲಾವಿದ ಎಂ.ರವಿಪ್ರಸಾದ್‌ಗೆ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
    ಕಾಮೇಗೌಡ ಕುಗ್ರಾಮದ ಸಾಮಾನ್ಯ ವ್ಯಕ್ತಿಯಾಗಿ ಜನಿಸಿ ಅಸಾಮಾನ್ಯ ಸಾಧನೆ ಮಾಡಿದ್ದಾರೆ. ಕುರಿಗಳನ್ನು ಸಾಕುತ್ತ ಅವುಗಳನ್ನು ಮಾರಿ ಬಂದ ಹಣದಿಂದ ಹತ್ತಾರು ಕೆರೆ ಕಟ್ಟೆಗಳನ್ನು ನಿರ್ಮಿಸಿದ್ದಾರೆ. ಕುಂದೂರು ಬೆಟ್ಟದಲ್ಲಿ ಗಿಡಗಳನ್ನು ನೆಟ್ಟು ನೀರೆರೆದು ಪೋಷಿಸಿದ್ದಾರೆ. ಅರಣ್ಯ ಇಲಾಖೆ ಮಾಡುವ ಕೆಲಸವನ್ನು ಇವರು ಮಾಡಿರುವುದನ್ನು ನೋಡಿದಾಗ ಅಚ್ಚರಿ ಉಂಟಾಗುತ್ತದೆ. ಇವರ ಸಾಧನೆಗೆ ಸಂದ ಕೆವಿಎಸ್ ಪ್ರಶಸ್ತಿ, ಬಸವ ಪ್ರಶಸ್ತಿ, ರಾಜ್ಯಪ್ರಶಸ್ತಿಯ ಹಣವನ್ನು ಸಹ ಸಮಾಜಮುಖಿ ಕೆಲಸಗಳಿಗೆ ಉಪಯೋಗಿಸಿದ್ದಾರೆ. ಇಂತಹ ಸಾಧನೆ ಮಾಡಿರುವ ಗೌಡರ ಹೆಸರಿನಲ್ಲಿ ರಾಜ್ಯ ಪ್ರಶಸ್ತಿ ಸ್ಥಾಪಿಸಬೇಕು ಎಂದರು.
    ಜಿಲ್ಲಾಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ, ಮಾಜಿ ಅಧ್ಯಕ್ಷ ಎಂ.ವಿ.ಧರಣೇಂದ್ರಯ್ಯ, ಉಪನ್ಯಾಸಕರಾದ ಹನುಮಂತಯ್ಯ, ಲಿಂಗೇಗೌಡ, ವಕೀಲ ಗುರುಪ್ರಸಾದ್, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಶಿವಲಿಂಗೇಗೌಡ, ಮಾಗನೂರು ಶಿವಕುಮಾರ್ ಮಾತನಾಡಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಧನಂಜಯ ದರಸಗುಪ್ಪೆ, ಹುಸ್ಕೂರು ಕೃಷ್ಣೇಗೌಡ, ಹರ್ಷ ವಿ.ಪಣ್ಣೆದೊಡ್ಡಿ, ಸಂಘಟನಾ ಕಾರ್ಯದರ್ಶಿ ಭಾಸ್ಕರ್, ಮಂಡ್ಯ ತಾಲೂಕು ಕಸಾಪ ಅಧ್ಯಕ್ಷ ಮಂಜು ಮುತ್ತೇಗೆರೆ, ನಗರ ಕಸಾಪ ಅಧ್ಯಕ್ಷೆ ಸುಜಾತಾ ಕೃಷ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts