More

    ಕಟೀಲಿನ ಕಂಬೊಲಿ ಕೊರಗ ಕುಟುಂಬದ ಕನಸು ನನಸು

    ನಿಶಾಂತ್ ಶೆಟ್ಟಿ ಕಿಲೆಂಜೂರು ಕಟೀಲು

    125 ವರ್ಷಗಳಿಗಿಂತಲೂ ಹೆಚ್ಚು ಕಾಲ ಕಟೀಲು ಸಮೀಪದಲ್ಲಿ ಮನೆ ಕಟ್ಟಿ ವಾಸಿಸುತ್ತಿರುವ ಬಡ ಕುಟುಂಬಕ್ಕೆ ಕೊನೆಗೂ ಹಕ್ಕುಪತ್ರ ಸಿಕ್ಕಿದೆ.

    ಕಟೀಲು- ಉಲ್ಲಂಜೆ ಕಿನ್ನಿಗೋಳಿ ಹೆದ್ದಾರಿ ಸಮೀಪ ಕಳೆದ 125 ವರ್ಷದ ಹಿಂದೆ ವಾಸವಿದ್ದ ಕಂಬೊಲಿ ಕೊರಗ ಕುಟುಂಬ ತನ್ನ ಅಜ್ಜ ಅಜ್ಜಿ ಪಾರ ಕೊರಗ ಮತ್ತು ಸೀಗೆ ಕೊರಗರ ಕಾಲದಿಂದ ವಾಸಿಸುತ್ತಿದ್ದು, ನಂತರ ನಾದನೆ ಕೊರಗ, ಚಪರಾ ಕೊರಗ ಹೀಗೆ ಇವರ ಕುಟುಂಬ ಹಲವು ವರ್ಗಳಿಂದ ಇದೇ ಸ್ಥಳದಲ್ಲಿ ಮನೆ ನಿರ್ಮಿಸಿ ವಾಸಿಸುತ್ತಾ ಬಂದಿದೆ. ಸರ್ಕಾರಿ ಜಮೀನಿನಲ್ಲಿ ಅಂದಿನಿಂದ ವಾಸಿಸುತ್ತಿದ್ದ ಈ ಕುಟುಂಬಕ್ಕೆ ಹಕ್ಕುಪತ್ರ ಎಂಬುವುದು ಕನಸಾಗಿಯೇ ಉಳಿದಿತ್ತು. ಕಳೆದ 75 ವರ್ಷಗಳಲ್ಲಿ ಹಲವು ಸರ್ಕಾರ, ಹಲವು ಜನಪ್ರತಿನಿಧಿಗಳು ಹಲವು ಅಧಿಕಾರಿಗಳು ಬಂದು ಹೋದರೂ ಈ ಬಡ ಕುಟುಂಬಕ್ಕೆ ಹಕ್ಕುಪತ್ರ ಕನಸಾಗಿಯೇ ಉಳಿದಿತ್ತು. ಹಿರಿಯರ ಕಾಲದಿಂದಲೂ ಸಂಬಂಧಪಟ್ಟ ಅಧಿಕಾರಿಗಳ ಬಳಿ ತಿರುಗಿದ್ದೇ ಬಂತು. ಈ ಬಾರಿ ಮಾತ್ರ ತಮ್ಮ ಪ್ರಯತ್ನ ಮಾತ್ರ ವ್ಯರ್ಥವಾಗಿಲ್ಲ. ಅಧಿಕಾರಿಗಳು, ಸ್ಥಳಿಯ ಜನಪ್ರತಿನಿಧಿಗಳ ಜತೆ ಪ್ರಯತ್ನಪಟ್ಟರು. ಶಾಸಕ ಉಮಾನಾಥ ಕೋಟ್ಯಾನ್ ಗಮನಕ್ಕೆ ತಂದರು. ಹಕ್ಕುಪತ್ರ ವಿತರಣೆಗೆ ಇದ್ದ ತೊಡಕುಗಳನ್ನು ನಿವಾರಿಸಿ ಹಕ್ಕುಪತ್ರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಮನೆಗೆ ತೆರಳಿ ಹಕ್ಕುಪತ್ರನೀಡಿದ ಶಾಸಕ: ಯಾವುದೇ ಸರ್ಕಾರಿ ಸಭೆ ಸಮಾರಂಭಗಳಲ್ಲಿ ಹಕ್ಕುಪತ್ರ ವಿತರಿಸುತ್ತಿದ್ದ ಶಾಸಕ ಉಮಾನಾಥ ಕೋಟ್ಯಾನ್, ಕಂಬೊಲಿ ಅವರ ಮನೆಗೇ ತೆರಳಿ ಹಕ್ಕುಪತ್ರ ನೀಡಿ, ದಂಪತಿಯನ್ನು ಸನ್ಮಾನಿಸಿದ್ದು ವಿಶೇಷವಾಗಿತ್ತು.

    ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಮೂಲ್ಕಿ ಮೂಡುಬಿದಿರೆ ಕ್ಷೇತ್ರದಲ್ಲಿ ನೂರಾರು ಹಕ್ಕುಪತ್ರ ವಿತರಿಸಲಾಗಿದ್ದು, ಈಗ ಕಂಬೊಲಿ ಅವರಿಗೆ ಮನೆಗೆ ತೆರಳಿ ಹಕ್ಕುಪತ್ರ ನೀಡಿದ್ದು ಸಂತೋಷ ತಂದಿದೆ. ಇವರ ಮನೆ ದುರಸ್ತಿಗೆ ಪಟ್ಟಣ ಪಂಚಾಯಿತಿ ಮೂಲಕ 50 ಸಾವಿರ ರೂಪಾಯಿ ಒದಗಿಸಲಾಗುವುದು.
    – ಉಮಾನಾಥ ಕೋಟ್ಯಾನ್, ಶಾಸಕ

    ಹಲವು ವರ್ಷಗಳಿಂದ ಹಕ್ಕುಪತ್ರಕ್ಕಾಗಿ ಕಷ್ಟಪಟ್ಟಿದ್ದೇನೆ. ಆದರೆ ಬೇರೆ ಬೇರೆ ಸಮಸ್ಯೆಗಳನ್ನು ಮುಂದಿಟ್ಟು ಅಧಿಕಾರಿಗಳು ಹಕ್ಕುಪತ್ರ ನೀಡಿಲ್ಲ. ಆದರೆ ಈ ಬಾರಿ ಶಾಸಕರ, ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಸಹಕಾರದಿಂದ ಹಕ್ಕು ಪತ್ರ ಸಿಕ್ಕಿದ್ದು ಸಂತೋಷ ತಂದಿದೆ.
    – ಕಂಬೊಲಿ ಕೊರಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts