More

    ಕಳಸ ತಾಲೂಕು ಮೂಲ ಸೌಲಭ್ಯ ವಂಚಿತ

    ಚಿಕ್ಕಮಗಳೂರು: ಕಳಸ ತಾಲೂಕಿನಲ್ಲಿ ವಿವಿಧ ಇಲಾಖೆಗಳ ಕಚೇರಿಗಳು ಕಾರ್ಯಾರಂಭ ಮಾಡದೆ ನಿಷ್ಕ್ರಿಯವಾಗಿವೆ. ಹೀಗಾಗಿ ಕಳಸ ತಾಲೂಕು ಸೌಲಭ್ಯಗಳಿಂದ ವಂಚಿತವಾಗಿದೆ ಎಂದು ಪ್ರಜಾಪ್ರಭುತ್ವ ಉಳಿಸಿ ಆಂದೋಲನ ವೇದಿಕೆ ಸಂಚಾಲಕ ನಾಗೇಶ್ ಆಂಗೀರಸ ಅಸಮಾಧಾನ ವ್ಯಕ್ತಪಡಿಸಿದರು.

    ಕಳಸ ತಾಲೂಕನ್ನು ಸದೃಢಗೊಳಿಸಲು ಸೃಜನಶೀಲ ಸಂಘಟನೆಗಳು, ವ್ಯಕ್ತಿಗಳನ್ನು ಒಳಗೊಂಡ ವೇದಿಕೆ ನಿರ್ಮಿಸಲು ನಮ್ಮ ಸಂಘಟನೆ ಮುಂದಾಗಿದೆ. ತಾಲೂಕಿನ 6 ಗ್ರಾಪಂಗಳ ಪೈಕಿ 4ರಲ್ಲಿ ಪಿಡಿಒಗಳೇ ಇಲ್ಲ. ಶಾಸಕರು, ಸಂಸದರು, ಡಿಸಿ, ಎಸ್ಪಿ ಇಲ್ಲಿಗೆ ಭೇಟಿ ನೀಡುವುದೇ ವಿರಳ. ಜಿಲ್ಲಾಧಿಕಾರಿ ಇತ್ತೀಚೆಗೆ ಜನಸಂಪರ್ಕ ಸಭೆ ನಡೆಸಿ ಇನ್ನು ಮುಂದೆ ಎಲ್ಲ ಇಲಾಖೆಗಳ ಅಧಿಕಾರಿಗಳು ವಾರಕ್ಕೊಮ್ಮೆ ಕಳಸ ತಾಲೂಕು ಕೇಂದ್ರದಲ್ಲೇ ಕಾರ್ಯರ್ನಿಹಿಸಲಿದ್ದಾರೆ ಎಂದಿದ್ದರು. ಆದರೆ ಭರವಸೆ ಹುಸಿಯಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
    ಈ ಹಿಂದೆ ಭ್ರಷ್ಟಾಚಾರ ಆರೋಪ ಹೊತ್ತ ನೌಕರರಿಗೇ ಮುಂಬಡ್ತಿ ನೀಡಿ ಕಳಸ ತಾಲೂಕು ಕಚೇರಿಗೆ ನಿಯೋಜಿಸಲಾಗಿದೆ. ಇತರೆ ಠಾಣೆಯಲ್ಲಿ ಲೋಪ ಎಸಗಿದ ಸಿಬ್ಬಂದಿಯನ್ನು ಕುದುರೆಮುಖ ಪೊಲೀಸ್ ಠಾಣೆಗೆ ನಿಯೋಜಿಸಲಾಗಿದೆ ಎಂದು ಆರೋಪಿಸಿದರು.
    ರೆಸಾರ್ಟ್ ಮಾಫಿಯಾ, ಮರ ಕಳ್ಳಸಾಗಣೆ, ಕಳ್ಳಬೇಟೆ, ಸರ್ಕಾರಿ ಭೂಮಿ ಒತ್ತುವರಿ, ನಕಲಿ ಭೂದಾಖಲೆ ಸೃಷ್ಟಿ ಮತ್ತತರ ಅನೇಕ ಅಕ್ರಮ ಚಟುವಟಿಕೆಗಳು ಕಳಸ ತಾಲೂಕಿನ ಬೆಳವಣಿಗೆಗೆ ಕಂಟಕವಾಗಿವೆ. ಬೇಸಿಗೆ ಕಾಲದಲ್ಲಿ ರೆಸಾರ್ಟ್ ಮಾಲೀಕರು ಪ್ರವಾಸಿಗರನ್ನು ಆಕರ್ಷಿಸಲು ಫೈರ್ ಕ್ಯಾಂಪ್, ಚಾರಣ ಮತ್ತಿತರೆ ಹೆಸರಲ್ಲಿ ಅನಧಿಕೃತ ಚಟುವಟಿಕೆ ನಡೆಸುತ್ತಾರೆ. ಬಲ್ಲಾಳರಾಯನ ದುರ್ಗದಿಂದ ಚಾರ್ಮಾಡಿ ಘಾಟಿವರೆಗೆ ಇಂತಹ ಚಟುವಟಿಕೆಗಳಿಂದ ಕಾಡು ಪ್ರಾಣಿಗಳ ಸಹಜ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಕಾಡ್ಗಿಚ್ಚಿನಂತಹ ಅನಾಹುತಗಳಿಗೆ ಕಾರಣವಾಗಲಿದೆ. ಕುಡಿಯುವ ನೀರಿನ ಹಾಹಾಕಾರ ಉಂಟಾಗಲಿದೆ. ಸರ್ಕಾರ ಕೂಡಲೇ ಎಚ್ಚೆತ್ತು ಇಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts