More

    ತುಳಸಿಗೇರಿಯ ಜಾತ್ರೆ ಸಂಭ್ರಮಕ್ಕೆ ಕೋವಿಡ್ ಅಡ್ಡಿ

    ಕಲಾದಗಿ: ಸಮೀಪದ ತುಳಸಿಗೇರಿಯ ಹನುಮಂತ ದೇವರ ಕಾರ್ತಿಕೋತ್ಸವದ ಜಾತ್ರೋತ್ಸವದ ಸಂಭ್ರಮಕ್ಕೆ ಈ ಬಾರಿಯೂ ಕೋವಿಡ್ ಅಡ್ಡಿಯಾಗಿದ್ದು, ಅಸಂಖ್ಯಾತ ಭಕ್ತರ, ಅಂಗಡಿಕಾರರ ಬೇಸರಕ್ಕೆ ಕಾರಣವಾಗಿದೆ.

    ಕೋವಿಡ್ ಮಹಾಮಾರಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಡಿ.18 ರಿಂದ 25 ರವರೆಗೆ ನಡೆಯಲಿರುವ ಜಾತ್ರೋತ್ಸವದಲ್ಲಿ ಯಾವುದೇ ರೀತಿಯ ಅಂಗಡಿ-ಮುಂಗಟ್ಟುಗಳನ್ನು ಹಾಕದಂತೆ ಹಾಗೂ ಮನರಂಜನೆ ಕಾರ್ಯಕ್ರಮಗಳನ್ನು ಆಯೋಜಿಸದಂತೆ ದೇವಾಯಲಯ ಆಡಳಿತಾಧಿಕಾರಿ, ಬಾಗಲಕೋಟೆ ತಹಸೀಲ್ದಾರ್ ಜಿ.ಎಸ್.ಹಿರೇಮಠ ಆದೇಶ ಹೊರಡಿಸಿದ್ದಾರೆ. ದೇವರ ದರ್ಶನಕ್ಕೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

    ಕಟ್ಟುನಿಟ್ಟಿನಲ್ಲಿ ಜಾರಿ
    ಭಕ್ತರಿಗೆ ಕೋವಿಡ್ ಮಾರ್ಗಸೂಚಿಯ ಪಾಲನೆ ಕಡ್ಡಾಯಗೊಳಿಸಲಾಗಿದೆ. ದೇವಾಲಯದ ಮಹಾದ್ವಾರದಲ್ಲಿ ದೇವರ ದರ್ಶನಕ್ಕೆ ಬರುವವರ ಕೈಗಳಿಗೆ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುವುದು. ಪರಸ್ಪರ ಅಂತರದಲ್ಲಿ ದೇವರ ದರ್ಶನ, ಮಾಸ್ಕ್ ಧಾರಣೆಯನ್ನು ಕಡ್ಡಾಯಗೊಳಿಸಲಾಗಿದ್ದು, ಇವೆಲ್ಲವನ್ನು ಪಾಲನೆ ಮಾಡುವುದರ ಮೂಲಕ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕೆಂದು ದೇವಾಲಯದ ಆಡಳಿತಾಧಿಕಾರಿ ಬಾಗಲಕೋಟೆ ತಹಸೀಲ್ದಾರ್ ಜಿ.ಎಸ್.ಹಿರೇಮಠ ಭಕ್ತರಲ್ಲಿ ಕೋರಿದ್ದಾರೆ.

    ಅದೇ ಸಮಾಧಾನ
    ಕಳೆದ ಬಾರಿ ಇದೇ ಕೋವಿಡ್ ಹಾವಳಿಯಿಂದಾಗಿ ಇಡೀ ಜಾತ್ರೋತ್ಸವವನ್ನೇ ನಿಷೇಧಿಸಿ, ದೇವರ ದರ್ಶನಕ್ಕೆ ಭಕ್ತರನ್ನು ನಿರ್ಬಂಧಿಸಲಾಗಿತ್ತು. ಆದರೆ, ಈ ಬಾರಿ ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿಕೊಟ್ಟಿರುವುದು ಅನೇಕರ ಸಮಾಧಾನಕ್ಕೆ ಕಾರಣವಾಗಿದೆ. ಆದರೂ ಜಾತ್ರೆಯಲ್ಲಿ ಅಂಗಡಿಗಳೇ ಇರದಿರುವುದು ಅಷ್ಟೆ ಅಸಮಾಧಾನಕ್ಕೂ ಕಾರಣವಾಗಿದೆ.

    ಅಂಗಡಿಕಾರರಿಗೆ ನೋವು
    ಜಾತ್ರೋತ್ಸವದ ದಿನಗಳಲ್ಲಿ ಅಂಗಡಿಗಳನ್ನು ಹಾಕಿ ಒಂದಿಷ್ಟು ದುಡಿಮೆ ಮಾಡಿಕೊಳ್ಳಬೇಕೆಂಬ ಅಂಗಡಿಕಾರರ ಕನಸಿಗೆ ಈ ವರ್ಷವೂ ಕೋವಿಡ್ ತಣ್ಣೀರೆರಚಿರುವುದು ಅಂಗಡಿಕಾರರ ನೋವಿಗೆ ಕಾರಣವಾಗಿದೆ. ಕಳೆದ ವರ್ಷವೂ ಅಂಗಡಿಗಳನ್ನು ಹಾಕದೆ ಆರ್ಥಿಕ ತೊಂದರೆಗೊಳಗಾಗಿದ್ದ ಅಂಗಡಿಕಾರರು, ಈ ಬಾರಿಯಾದರು ಅಂಗಡಿಗಳನ್ನು ಹಾಕಿ ಒಂದಿಷ್ಟು ಬದುಕು ಕಟ್ಟಿಕೊಳ್ಳಬೇಕೆಂಬ ಆಸೆಯಲ್ಲಿದ್ದರು. ಆದರೆ, ಮತ್ತೆ ಕೋವಿಡ್ ಭೂತ ಅವರ ಆಸೆಗೆ ಅಡ್ಡಿಯಾಗಿರುವುದು ವಿಪರ್ಯಾಸ.

    ನಾಳೆಯಿಂದ ಕಾರ್ತಿಕ ಮಹೋತ್ಸವ
    ಡಿ.18 ರ ಬೆಳಗಿನಜಾವ ದೇವರಿಗೆ ಅಭಿಷೇಕ, ಬೆಳಗ್ಗೆ 8 ಗಂಟೆಗೆ ಕಲಶಾರೋಹಣ, ಮಧ್ಯರಾತ್ರಿಯಿಂದ ಬೆಳಗಿನಜಾವದವರೆಗೂ ದೇವಾಲಯದಲ್ಲಿ ಕಾರ್ತಿಕ ದೀಪೋತ್ಸವ ನಡೆಯಲಿದೆ. 19 ರಂದು ಸಂಜೆ 4 ಗಂಟೆಗೆ ಹರಿಶೆವಿಗೆ, ಗೋಪಾಳ ತುಂಬಿಸುವುದು, ರಾತ್ರಿ 10 ಗಂಟೆಯಿಂದ ವಿವಿಧೆಡೆಗಳಿಂದ ಆಗಮಿಸುವ ಭಕ್ತರಿಂದ ಕೀರ್ತನೆ ಭಜನೆ, ಪಲ್ಲಕ್ಕಿ ಮಹೋತ್ಸವಕ್ಕೆ ಚಾಲನೆ, ಹಿರಿಯರ ಕಟ್ಟೆಗಳಿಗೆ ಭೇಟಿ ಜರುಗುವುದು. 20 ರಂದು ಸೋಮವಾರ ಬೆಳಗ್ಗೆ 11 ಗಂಟೆಯಿಂದ ಗ್ರಾಮದ ಕೊತ್ತಲೇಶ್ವರ ಗುಡಿಯಿಂದ ವೈಶಿಷ್ಟೃ ಪೂರ್ಣವಾದ ಪಲ್ಲಕ್ಕಿ ಮಹೋತ್ಸವ ಆರಂಭಗೊಂಡು ‘ಮನೆಸ್ವಾಮಿ’ ದೇವಸ್ಥಾನದಲ್ಲಿ ಸಮಾಪನಗೊಳ್ಳುವುದರೊಂದಿಗೆ ಕಾರ್ತಿಕೋತ್ಸವ ಸಂಪನ್ನವಾಗಲಿದೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts