More

    ಸಂಪರ್ಕ ರಸ್ತೆಯಿಲ್ಲದೆ ಬೋಂದೆಲ್ ಕಜೆಗುರಿ ನಿವಾಸಿಗಳು ಕಂಗಾಲು

    ಧನಂಜಯ ಗುರುಪುರ
    ಮಂಗಳೂರು ನಗರ ಪಾಲಿಕೆಯ 19ನೇ ಪಚ್ಚನಾಡಿ ವಾರ್ಡ್‌ನ ಬೋಂದೆಲ್‌ಗೆ ಹತ್ತಿರದ ಕಜೆಗುರಿ ಎಂಬಲ್ಲಿ, ಮುಖ್ಯ ರಸ್ತೆಗೆ ಹತ್ತಿರದಲ್ಲಿ ಸೂಕ್ತ ಒಳರಸ್ತೆ ಇಲ್ಲದೆ ಕೆಲವು ಕುಟುಂಬಗಳು ವರ್ಷಗಳಿಂದ ನಿತ್ಯ ಕಷ್ಟ ಅನುಭವಿಸುವಂತಾಗಿದೆ.

    ಬೋಂದೆಲ್ ಸರ್ಕಲ್ ಎದುರಿರುವ ಅರಸು ಮುಂಡಿತ್ತಾಯ ದೈವಸ್ಥಾನದ ದ್ವಾರದ ಒಳಗಡೆ ಉತ್ತಮ ರಸ್ತೆ ಇದ್ದರೂ, ಗುಡ್ಡದ ಕೆಳಗಡೆ ವಾಸಿಸುತ್ತಿರುವ ನಾಗೇಶ್ ದೇವಾಡಿಗ ಹಾಗೂ ಇತರ ಮೂರು ಕುಟುಂಬಗಳಿಗೆ ಮನೆ ಸಂಪರ್ಕಿಸುವ ರಸ್ತೆಯೇ ಇಲ್ಲ. ಮನೆಯಲ್ಲಿರುವ 8ಕ್ಕಿಂತ ಹೆಚ್ಚು ಮಂದಿ ಹಿರಿಯ ನಾಗರಿಕರ ಸಹಿತ ಮಕ್ಕಳು ಮುಖ್ಯ ರಸ್ತೆಯಿಂದ ಅರ್ಧ ಕಿ.ಮೀ. ಗುಡ್ಡದ ಇಳಿಜಾರಿನ ಕಡಿದಾದ ತಿರುವು ಕಾಲುದಾರಿಯಲ್ಲಿ ಸಾಗಿ, ತೋಡು ದಾಟಿ ಮನೆ ಸೇರಬೇಕಾಗುತ್ತದೆ. ರಾತ್ರಿ ಹೊತ್ತಲ್ಲಿ ಈ ಪ್ರದೇಶ ಕಗ್ಗತ್ತಲಾಗಿರುತ್ತದೆ.

    ಈ ಕುಟುಂಬಗಳಿಗೆ ಅನುಕೂಲವಾಗುವಂತೆ ಇಳಿಜಾರು ಪ್ರದೇಶಕ್ಕೆ ಮಣ್ಣು ತುಂಬಿಸಿ ರಸ್ತೆ ನಿರ್ಮಿಸಬಹುದು ಅಥವಾ ಮೇಲ್ಭಾಗದ ಮತ್ತೊಂದು ಗುಡ್ಡದಲ್ಲಿ ರಸ್ತೆ ನಿರ್ಮಿಸಲು ಸಾಧ್ಯವಿದೆ. ಆದರೆ ಇಲ್ಲಿ ಒಂದು ಕಡೆ ಖಾಸಗಿ ಜಾಗವಿದ್ದರೆ, ಮತ್ತೊಂದು ಕಡೆ ಎನ್‌ಎಂಪಿಟಿ ಜಾಗವಿದೆ. ಸುಮಾರು 60 ವರ್ಷಗಳ ಹಿಂದೆ ನಾಗೇಶ್ ದೇವಾಡಿಗ ಅವರ ತಂದೆ ಮುಂಡಪ್ಪ ಅವರಲ್ಲಿದ್ದ 6 ಎಕರೆ ಜಾಗದಲ್ಲಿ 5 ಎಕರೆಯನ್ನು ಎನ್‌ಎಂಪಿಟಿ ವಶಪಡಿಸಿಕೊಂಡಿತ್ತು. ದೇವಾಡಿಗ ಕುಟುಂಬಕ್ಕೆ ರಸ್ತೆ ನಿರ್ಮಿಸಿದರೆ, ಇಲ್ಲಿಂದ ಮುಂದಕ್ಕಿರುವ ಜನವಸತಿ ಪ್ರದೇಶದವರಿಗೂ ಅನುಕೂಲವಾಗಲಿದೆ.

    ನನ್ನ ತಂದೆಯವರು ಒಂದು ಉತ್ತಮ ಕೆಲಸಕ್ಕಾಗಿ ಎನ್‌ಎಂಪಿಟಿಗೆ ಜಾಗ ಕೊಟ್ಟಿದ್ದರು. ಆಗ ಜಾಗ ಮಾರಾಟದ ಸಂದರ್ಭ ರಸ್ತೆಗೆ ಜಾಗ ಮೀಸಲಿಡುವ ಕಾನೂನು ಇರಲಿಲ್ಲ. ಹಾಗಾಗಿ ಈಗ ಎನ್‌ಎಂಪಿಟಿ ಸಂಸ್ಥೆಗೆ ಹೊಂದಿಕೊಂಡಿರುವ ಜಾಗದಲ್ಲಿ ಮಾನವೀಯ ನೆಲೆಯಲ್ಲಿ ರಸ್ತೆ ನಿರ್ಮಿಸಲು ಅವಕಾಶ ನೀಡಬೇಕು. ರಸ್ತೆ ನಿರ್ಮಾಣ ದುಬಾರಿಯಾಗಿದ್ದರೂ, ಸ್ಥಳೀಯ ಜನಪ್ರತಿನಿಧಿಗಳು ಮನಸ್ಸು ಮಾಡಿದರೆ ಕಷ್ಟವೇನಲ್ಲ. ವರ್ಷಗಳಿಂದ ನಮ್ಮ ಮಕ್ಕಳು, ಹಿರಿಯರು ಗುಡ್ಡದ ಇಳಿಜಾರಿನಲ್ಲಿರುವ ಅರ್ಧ ಕಿಲೋ ಮೀಟರ್ ಅಂಕುಡೊಂಕಾದ ಕಾಲುದಾರಿಯಲ್ಲಿ ಇಳಿದು ಮೇಲೇರುವಂತಾಗಿದೆ. ಅನಾರೋಗ್ಯ ಅಥವಾ ತುರ್ತು ಸಂದರ್ಭ ನಮ್ಮ ಕಷ್ಟ ದೇವರಿಗೆ ಪ್ರೀತಿ.
    – ನಾಗೇಶ್ ದೇವಾಡಿಗ ಸ್ಥಳೀಯ ನಿವಾಸಿ

    ಒಂದು ಕಡೆಯಲ್ಲಿ ಖಾಸಗಿ ಜಾಗವಿದ್ದು, ರಸ್ತೆ ನಿರ್ಮಾಣ ಸಮಸ್ಯೆಯಾಗಿದೆ. ಮತ್ತೊಂದು ಕಡೆ ಗುಡ್ಡದಲ್ಲಿ ಸುಮಾರು ಒಂದೂವರೆ ಕಿ.ಮೀ. ಅಂತರದಲ್ಲಿ ರಸ್ತೆ ನಿರ್ಮಿಸಲು ಸಾಧ್ಯವಿದೆಯಾದರೂ, ಆ ಜಾಗ ಎನ್‌ಎಂಪಿಟಿಗೆ ಸೇರಿದ್ದಾಗಿದೆ. ಇಲ್ಲಿನ ಕುಟುಂಬಿಕರ ಕಷ್ಟ ಹತ್ತಿರದಿಂದ ಅರಿತಿರುವ ನಾನು, ವೈಯಕ್ತಿಕ ನೆಲೆಯಲ್ಲೂ ಇಲ್ಲೊಂದು ರಸ್ತೆ ನಿರ್ಮಿಸಲು ಪ್ರಯತ್ನಿಸುತ್ತಿದ್ದೇನೆ. ಈ ನಿಟ್ಟಿನಲ್ಲಿ ಶಾಸಕ ಡಾ. ಭರತ್ ಶೆಟ್ಟಿ ಅವರೊಂದಿಗೆ ಮತ್ತೊಮ್ಮೆ ಮಾತುಕತೆ ನಡೆಸುವೆ. ಎನ್‌ಎಂಪಿಟಿಗೆ ಪತ್ರ ಬರೆದು ರಸ್ತೆ ನಿರ್ಮಾಣಕ್ಕೆ ಅವಕಾಶ ಕೋರಲಾಗುವುದು.
    – ಸಂಗೀತಾ ಆರ್. ನಾಯಕ್ ಕಾರ್ಪೊರೇಟರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts