More

    ಬಜ್ಪೆ- ಮೂಡುಬಿದಿರೆ ರಾಜ್ಯ ಹೆದ್ದಾರಿ ಅಪಾಯಕಾರಿ

    ಮೂಲ್ಕಿ: ಮೂಲ್ಕಿಯಿಂದ ಪ್ರಾರಂಭಗೊಳ್ಳುವ ಬಜ್ಪೆ- ಮೂಡುಬಿದಿರೆ ರಾಜ್ಯ ಹೆದ್ದಾರಿಯ ಆರಂಭದಲ್ಲಿಯೇ ಬೃಹತ್ ಹೊಂಡಗಳು ಮೂಡಿದ್ದು, ಪ್ರಯಾಣಿಕರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

    ವಿಜಯ ಸನ್ನಿಧಿ ಎದುರು ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ಸಂಪರ್ಕ ರಸ್ತೆಯಲ್ಲಿಯೂ ಹೊಂಡ ಏರ್ಪಟ್ಟಿದ್ದು, ವಾಹನ ಸವಾರರಿಗೆ ಅಪಾಯಕಾರಿಯಾಗಿದ್ದರೂ ಹೆದ್ದಾರಿ ಇಲಾಖೆ ಕಣ್ಣುಮುಚ್ಚಿ ಕುಳಿತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಮೂಲ್ಕಿಯಿಂದ ಪ್ರಾರಂಭಗೊಳ್ಳುವ ರಸ್ತೆಯ ಹೊಂಡ ಗುಂಡಿಗಳು ಕಾರ್ನಾಡು, ಗಾಂಧಿ ಮೈದಾನ, ಗೇರುಕಟ್ಟೆ, ಕೆಂಚನಕೆರೆ ಅಂಗರಗುಡ್ಡೆ ಹೀಗೇ ಮುಂದುವರಿಯುತ್ತಿದ್ದರೂ ಅಧಿಕಾರಿ ವರ್ಗ ಮೈಮರೆತಿದೆ.

    ಸುಪ್ರಿತಾ ತಂಡದ ಸೇವೆ

    ಕೆಂಚನಕೆರೆ ನಿವಾಸಿ ಸುಪ್ರಿತಾ ಮತ್ತು ಯುವ ತಂಡ ಹಾಗೂ ಸ್ಥಳೀಯ ದಾನಿಗಳ ನೆರವಿನಿಂದ ಕಳೆದ ವರ್ಷ ರಸ್ತೆ ಗುಂಡಿಗೆ ಕಾಂಕ್ರೀಟ್ ಮಿಶ್ರಣ ತುಂಬುವ ಸೇವೆ ನೀಡಿತ್ತು. ಆದರೆ ಅಧಿಕಾರಿ ವರ್ಗ ಸಹಕಾರ ನೀಡದ ಪರಿಣಾಮ ತಂಡ ಯೋಜನೆ ಕೈಬಿಟ್ಟಿತ್ತು. ಆದರೂ ಅವರು ಹಾಕಿದ ಕಾಂಕ್ರೀಟ್ ಒಂದು ವರ್ಷಕ್ಕೂ ಅಧಿಕ ಸೇವೆ ನೀಡಿದೆ. ಈ ಬಾರಿ ಮತ್ತೆ ಗುಂಡಿಗಳು ಉದ್ಭವಿಸಿದ್ದು, ಜನಸಾಮಾನ್ಯರಿಗೆ ಸಮಸ್ಯೆಯಾಗುತ್ತಿದೆ.

    ವೃದ್ಧರಿಗೆ ಸಮಸ್ಯೆ

    ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಗಾಗಿ ಮನೆಯೊಳಗೆ ವಿಶ್ರಮಿಸುತ್ತಿದ್ದ ವೃದ್ಧರು ಇದೀಗ ಬ್ಯಾಂಕ್ ಮತ್ತು ಕಚೇರಿಗಳಲ್ಲಿ ತುಂಬಿದ್ದಾರೆ. ಇವರು ರಸ್ತೆ ದಾಟುವ ಸಂದರ್ಭ ಗುಂಡಿಯ ಆಳ ತಿಳಿಯದೆ ಬೀಳುವುದು, ಇನ್ನು ರಸ್ತೆ ಬದಿಯಲ್ಲಿ ಬರುವಾಗ ವಾಹನಗಳು ಹೋಗುವ ಸಂದರ್ಭ ರಸ್ತೆ ಗುಂಡಿಯ ಕೆಸರು ರಾಚುವುದು ದಿನ ನಿತ್ಯದ ಗೋಳಾಗಿ ಪರಿಣಮಿಸಿದೆ.

    ಗುಂಡಿ ತಪ್ಪಿಸಲು ಎರ್ರಾಬಿರಿಯಾಗಿ ಚಲಿಸುವ ವಾಹನಗಳು ಈ ನಡುವೆ ವೃದ್ಧರನ್ನು ಕೈಹಿಡಿದು ತರುವಾಗ ಕೆಸರು ನೀರು ಮೈಮೇಲೆ ಹಾರುವುದು ಬಹಳ ದೊಡ್ಡ ಸಮಸ್ಯೆಯಾಗಿದೆ.
    – ಸುದೇಶ್ ಸಾಲ್ಯಾನ್ ಪ್ರಯಾಣಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts