More

    ಕೈಲಾಸವಾಸಿಗೆ ವಿಶೇಷ ಪೂಜೆ, ಅಭಿಷೇಕ

    ಬೆಳಗಾವಿ: ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಸೇರಿ ಜಿಲ್ಲೆಯ ವಿವಿಧ ದೇವಸ್ಥಾನ, ಮಠ-ಮಂದಿರಗಳು ಶುಕ್ರವಾರ ಹೂವು, ಹಸಿರು ತೋರಣಗಳಿಂದ ಕಂಗೊಳಿಸಿದವು. ಸಾವಿರಾರು ಭಕ್ತರು ಜಗದೊಡೆಯನ ದೇಗುಲಗಳಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದರು.

    ಜಿಲ್ಲೆಯ ವಿವಿಧ ಶಿವಾಲಯ, ದೇವಸ್ಥಾನ, ಮಠ-ಮಂದಿರಗಳಲ್ಲಿ ಗುರುವಾರ ರಾತ್ರಿ 12 ಗಂಟೆಯಿಂದಲೇ ಕ್ಷೀರಾಭಿಷೇಕ, ಬಿಲ್ವಪತ್ರೆ, ನಾನಾತರಹದ ಹೂಗಳನ್ನು ಶಿವನಿಗೆ ಅರ್ಪಿಸಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಅಲ್ಲದೆ, ಅಲ್ಲಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳೂ ಜರುಗಿದವು.

    ದಕ್ಷಿಣ ಕಾಶಿ ಖ್ಯಾತಿಯ ಬೆಳಗಾವಿ ನಗರದ ಕಪಿಲೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ನಿಮಿತ್ತ ಕಪಿಲೇಶ್ವರ ದರ್ಶನಕ್ಕಾಗಿ ಭಕ್ತ ಸಾಗರವೇ ಹರಿದು ಬಂದಿತ್ತು. 12 ಜ್ಯೋತಿರ್ಲಿಂಗಗಳ ದರ್ಶನ ಪಡೆದುಕೊಂಡ ಬಳಿಕ ಕಪಿಲೇಶ್ವರನ ದರ್ಶನ ಪಡೆದಾಗ ಮಾತ್ರ ತೀರ್ಥಯಾತ್ರೆ ಪೂರ್ಣಗೊಳ್ಳುತ್ತದೆ ಎಂಬ ನಂಬಿಕೆಯಿದೆ. ಮಹಾ ಶಿವರಾತ್ರಿ ದಿನ ಬಹಳಷ್ಟು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಕಪಿಲೇಶ್ವರ ದೇವರ ದರ್ಶನ ಪಡೆದು ಪುನೀತರಾದರು.

    ವಿವಿಧ ಶಿವ ದೇವಾಲಯಗಳಲ್ಲಿ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಮಹಾಶಿವರಾತ್ರಿ ಅಂಗವಾಗಿ ಕಪಿಲೇಶ್ವರ ದೇವಸ್ಥಾನದಲ್ಲಿ ಶಿವಶೀಲಾ ಚರಿತ್ರೆಯ ದೃಶ್ಯ ನಿರ್ಮಿಸಲಾಗಿದ್ದು, ದೇವಸ್ಥಾನದ ಮೆರಗು ಇನ್ನಷ್ಟು ಹೆಚ್ಚಿಸಿದೆ ಎಂದು ಭಕ್ತರು ಸಂತಸ ವ್ಯಕ್ತಪಡಿಸಿದರು.

    ವೀರಭದ್ರೇಶ್ವರ ಜಾತ್ರೆ

    ಮಹಾಶಿವರಾತ್ರಿಯನ್ನು ಅತ್ಯಂತ ಭಕ್ತಿ, ಭಾವ, ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಅದೇ ರೀತಿ ಶುಕ್ರವಾರ ನಗರದ ಪೊಲೀಸ್ ಹೆಡ್ ಕ್ವಾಟರ್ಸ್‌ನಲ್ಲಿರುವ ವೀರಭದ್ರೇಶ್ವರ ದೇವರ ಮೂರ್ತಿಗೆ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು. ವೀರಭದ್ರೇಶ್ವರ ದೇವಸ್ಥಾನದಲ್ಲಿ ಜಾತ್ರಾಮಹೋತ್ಸವ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿದವು. ಸಂಜೆ ರಥೋತ್ಸವ ನಡೆಯಿತು.

    ಜೆಎನ್‌ಎಂಸಿಯಲ್ಲಿ ಹಿಮದ ಶಿವಲಿಂಗ ದರ್ಶನ

    ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಜೆಎನ್‌ಎಂಸಿ ಆವರಣದ ಶಿವಾಲಯ ಮಂದಿರದಲ್ಲಿ ಮಹಾ ಶಿವರಾತ್ರಿ ನಿಮಿತ್ತ ವಿಶೇಷ ಪೂಜೆ, ಮಹಾರುದ್ರಾಭಿಷೇಕ ನಡೆಯಿತು. ಈ ವೇಳೆ ಶಿವನಿಗೆ ಡ್ರೈ ಫ್ರೂಟ್ಸ್ ಗಳಿಂದ ಅಲಂಕಾರ ಮಾಡಲಾಗಿತ್ತು. ಅಲ್ಲದೆ, ಮಂಜುಗಡ್ಡೆಯ ಶಿವಲಿಂಗ ಸ್ಥಾಪಿಸಿದ್ದು ವಿಶೇಷವಾಗಿತ್ತು.

    ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ದೇಶಾದ್ಯಂತ ಶಾಂತಿ, ನೆಮ್ಮದಿ ಮೂಡಲಿ ಎಂದು ಸಾವಿರಾರು ಭಕ್ತರು ಆಗಮಿಸಿ ಶ್ರೀ ವೀರಭದ್ರೇಶ್ವರನ ದರ್ಶನ ಪಡೆದು ಪ್ರಾರ್ಥಿಸಿದ್ದಾರೆ. ಅದೇ ರೀತಿ ನಾನು ಕೂಡ ದೇವಸ್ಥಾನಕ್ಕೆ ಆಗಮಿಸಿ ಶ್ರೀ ವೀರಭದ್ರೇಶ್ವರನ ದರ್ಶನ ಪಡೆದು ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದೇನೆ.
    | ಸುರೇಶ ಅಂಗಡಿ, ರೈಲ್ವೆ ಖಾತೆ ರಾಜ್ಯ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts