More

    ಕೈಮಗ್ಗ ನೇಕಾರರ ಪರಿಸ್ಥಿತಿ ಆತ್ಮಾವಲೋಕನ ಅಗತ್ಯ- ಸಚಿವ ಎಚ್.ಕೆ.ಪಾಟೀಲ

    ಗದಗ: ಕೈಮಗ್ಗದ ನೇಕಾರಿಕೆಯಲ್ಲಿ ಸಿಹಿ-ಕಹಿ ಅನುಭವ ಅನುಭವಿಸಿದಂತಹ ನೇಕಾರರು ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಸಂಭ್ರಮ ಮಾಡುವಂತಹ ಸ್ಥಿತಿಯಲ್ಲಿ ಇಲ್ಲ. ಈ ಕುರಿತು ಆತ್ಮಾವಲೋಕನ ಮಾಡುವದು ಅಗತ್ಯವಾಗಿದೆ ಎಂದು ರಾಜ್ಯದ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ಅಭಿಪ್ರಾಯಪಟ್ಟರು.

    ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸೋಮವಾರ ಜರುಗಿದ ಕೇಂದ್ರ ಸರ್ಕಾರದ ಜವಳಿ ಮಂತ್ರಾಲಯ ಅಭಿವೃದ್ಧಿ ಆಯುಕ್ತರವರ ಕಚೇರಿ(ಕೈಮಗ್ಗ) ನೇಕಾರರ ಸೇವಾ ಕೇಂದ್ರ ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಜರುಗಿದ 9ನೇ ಅಂತರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಒಂದಾನೊಂದು ಕಾಲದಲ್ಲಿ ಕೈಮಗ್ಗ ನೇಕಾರಿಕೆ ಉತ್ತುಂಗದಲ್ಲಿದ್ದಂತಹ ಸಂದರ್ಭದಲ್ಲಿ ನೇಕಾರಿಕೆ ವೃತ್ತಿ ಒಕ್ಕುಲುತನ ನಂತರ ಹೆಚ್ಚಿನ ಉದ್ಯೋಗವಕಾಶ ನೀಡಿತ್ತು. ಆದರೆ ದುರದೃಷ್ಟಕರದ ಸಂಗತಿ ಎಂದರೆ ಆಧುನಿಕ ದಿನಮಾನಗಳಲ್ಲಿ ತಾಂತ್ರಿಕತೆ ಬೆಳೆದಂತೆ ಕೈಮಗ್ಗ ನೇಕಾರಿಕೆ ಅಳುವಿನಂಚಿನಲ್ಲಿದ್ದು ಕೈಮಗ್ಗ ನೇಕಾರಿಕೆ ವೃತ್ತಿಯನ್ನು ಅವಲಂಭಿಸಿದಂತಹ ನೇಕಾರರು ಬಡತನದಲ್ಲಿ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಕೈಮಗ್ಗದಲ್ಲಿ ನೈಪುಣ್ಯತೆ ಹೊಂದಿದಂತಹ ಬೆರಳಣಿಕೆಯಷ್ಟು ಜನ ಇಂದಿಗೂ ಸಹ ಅದನ್ನೇ ಅವಲಂಭಿಸಿದ್ದಾರೆ. ವೃತ್ತಿ ನೈಪುಣ್ಯತೆಯೊಂದಿಗೆ ಆಧುನಿಕ, ತಾಂತ್ರಿಕ ಯಂತ್ರೋಪಕರಣಗಳ ಬಳಕೆ ಮಾಡುವದರ ಮೂಲಕ ವೃತ್ತಿಯಲ್ಲಿ ನಿರಂತರವಾಗಿ ಮುಂದೆ ಸಾಗಬೇಕಿದೆ. ರಾಜ್ಯದಲ್ಲಿ ಅಂದಾಜು ಇಪ್ಪತ್ತನಾಲ್ಕು ಸಾವಿರದಷ್ಟು ಇದ್ದಂತಹ ಕೈಮಗ್ಗಗಳ ಸಂಖ್ಯೆ ಇಂದು ಕೇವಲ ಎರಡು ಸಾವಿರಕ್ಕೆ ಬಂದಿರುವದು ಎಲ್ಲರೂ ಚಿಂತಿಸಬೇಕಾದಂತಹ ಸಂಗತಿಯಾಗಿದೆ ಎಂದರು.

    ನೇಕಾರರ ಶ್ರೇಯೋಭಿವೃದ್ಧಿಗಾಗಿ ಜಾರಿಗೆ ತರಲಾದ ಅನೇಕ ಯೋಜನೆಗಳು ಯಶಸ್ವಿಯಾಗುತ್ತಿಲ್ಲ. ಕೈಮಗ್ಗ ನೇಕಾರರ ಧ್ವನಿಯಾಗಿ ಹೋರಾಟ ಮಾಡುವವರಿಗೆ ಧ್ವನಿ ಕೂಡುವುದಿಲ್ಲ. ಅವರ ಶ್ರೇಯೋಭಿವೃದ್ಧಿಗಾಗಿ ಏನೇ ಯೋಜನೆಗಳನ್ನು ಜಾರಿಗೆ ತಂದರು ಅವರ ಆರ್ಥಿಕ ಸ್ಥಿತಿ ಸುಧಾರಿಸಲು ಸಾಧ್ಯವಾಗುತ್ತಿಲ್ಲ. ಆದಾಗ್ಯೂ ಕೂಡ ಇಂತಹ ಪರಿಸ್ಥಿತಿಯಲ್ಲಿಯೂ ನೇಕಾರಿಕೆ ಮುಂದುವರೆಸುತ್ತಿರುವದು ಸಂತಸದ ಸಂಗತಿಯಾಗಿದೆ. ರೈತರಿಗೆ ಯೋಗಿ, ತ್ಯಾಗಿ ಎನ್ನುತ್ತೇವೆ. ಅದೇ ರೀತಿ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಕೂಡ ನೇಕಾರಿಕೆ ವೃತ್ತಿಯನ್ನು ಮಾಡುತ್ತಿರುವ ನೇಕಾರರಿಗೆ ಸಚಿವರು ಸಲಾಂ ಎಂದರು.

    ಬೆಟಗೇರಿಯಲ್ಲಿನ ಕೆ.ಹೆಚ್.ಟಿ.ಐ.ನಲ್ಲಿ ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿಗಳಿಂದ ಅಧ್ಯಯನ ಜೊತೆಗೆ ಉದ್ಯೋಗವಕಾಶಗಳ ಸೃಷ್ಟಿಗೆ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸುವ ಕಾರ್ಯವಾಗಬೇಕು. ಇಂದು ಸೀರೆ ತೊಡುವವರ ಸಂಖ್ಯೆ ಕಡಿಮೆಯಾದರೂ ಕೂಡಾ ಕೈಮಗ್ಗದಿಂದ ಸೀರೆಯ ಜೊತೆಗೆ ಕಿಟಕಿ ಪರದೆ ಹಾಗೂ ಬೆಡಶೀಟ್‍ಗಳಿಗೆ ತುಂಬಾ ಬೇಡಿಕೆ ಇದ್ದು ಈ ಕುರಿತು ಚಿಂತನೆ ನಡೆಸಲು ಸಲಹೇ ನೀಡಿದ ಅವರು ಕೈಮಗ್ಗ ನೇಕಾರರ ಸಂಖ್ಯೆ ಕಡಿಮೆ ಇದ್ದು ಅವರ ಹಾಗೂ ಅವರ ವೃತ್ತಿ ಸುಧಾರಣೆಗೆ ಉತ್ತೇಜನೆ ನೀಡುವ ಕಾರ್ಯಮಾಡಬೇಕಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.

    ವಿಧಾನ ಪರಿಷತ ಸದಸ್ಯರಾದ ಎಸ್.ವಿ.ಸಂಕನೂರ ಮಾತನಾಡಿ ಸಮಾಜಕ್ಕೆ ನೇಕಾರರ ಕೊಡುಗೆ ಅಪಾರವಾಗಿದೆ. ಒಂದು ಕಾಲದಲ್ಲಿ ಭಾರತವು ಕೈಮಗ್ಗದ ತವರುರಾಗಿತ್ತು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಿಸಾನ ಸಮ್ಮಾನ ಯೋಜನೆ ಜಾರಿಗೊಳಿಸಿದರೆ, ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ರಾಜ್ಯ ಸರರ್ಕಾರ ನೇಕಾರ ಸಮ್ಮಾನ ಯೋಜನೆ ಜಾರಿಗೊಳಿಸುವದರ ಮೂಲಕ ನೇಕಾರರಿಗೆ ಸಹಕಾರಿಯಾಗಿತ್ತು. 2015 ರಿಂದ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು ಆಚರಣೆಗೆ ತರಲಾಗಿದೆ. ಸರಕಾರದಿಂದ ನೇಕಾರರಿಗೆ ಸಾಧ್ಯವಾದಷ್ಟು ಸೌಲಭ್ಯಗಳನ್ನು ಒದಗಿಸಲು ಕೋರಿದರು. ನೇಕಾರರು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣ ನೀಡುವಂತೆ ತಿಳಿಸಿದರು.

    ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್, ನೇಕಾರ ಸೇವಾ ಕೇಂದ್ರದ ತಾಂತ್ರಿಕ ಅಧೀಕ್ಷಕರಾದ ಮೋಹನ, ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಹೆಚ್.ಬಿ.ಪಾಟೀಲ, ಸಹಾಯಕ ನಿರ್ದೇಶಕ ಮಂಜುನಾಥ ಅಮ್ರದ, ವಿವಿಧ ತಾಲೂಕುಗಳಿಂದ ಆಗಮಿಸಿದ ನೇಕಾರರು ಉಪಸ್ಥಿತರಿದ್ದರು. ಕೈಮಗ್ಗ ಮತ್ತು ಜವಳಿ ಇಲಾಖೆ ಅಪರ ನಿರ್ದೇಶಕರಾದ ಎಸ್.ಪ್ರಕಾಶ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಇದೇ ಸಂದರ್ಭದಲ್ಲಿ ಕೈಮಗ್ಗ ನೇಕಾರರಾದ ತಿಪ್ಪಣ್ಣ ಕೊಂಗತಿ, ಲಕ್ಷ್ಮಣ ಗುರುಲಿಂಗಪ್ಪ ಕಾಳೂರ, ಶರಣಪ್ಪ ಹುಣಚೇರಿ, ಈರಪ್ಪ ಸಂಕನೂರ, ಧರ್ಮಣ್ಣಾ ಬುಳ್ಳಾ, ಮಲ್ಲಪ್ಪ ಚಾವಡಿ, ದೇವೆಂದ್ರಪ್ಪ ಹೊಟ್ಟಿ, ವೆಂಕಟೇಶ ತಟ್ಟೆ ಅವರುಗಳನ್ನು ಸಚಿವರು ಹಾಗೂ ಗಣ್ಯರು ಸನ್ಮಾನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts