More

    ಕಾಗೋಡು ಹೋರಾಟ ಗೇಣಿ ರೈತರ ಸ್ವಾಭಿಮಾನದ ಪ್ರತೀಕ: ಡಿ.ಮಂಜುನಾಥ್

    ಸಾಗರ: ಭೂಮಿ ಹೊಂದಿರುವುದು ಎಂದರೆ ಅದೊಂದು ಸ್ವಾಭಿಮಾನದ ಸಂಕೇತ. ಭೂಮಿ ಬದುಕಿನ ಮೂಲಭೂತ ಹಕ್ಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್ ಹೇಳಿದರು.
    ಇಲ್ಲಿನ ರಾಮನಗರದ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಂಗಳವಾರ ಆಯೋಜಿಸಿದ್ದ ಕಾಗೋಡು ಹೋರಾಟ ಚಿಂತನ ಮಂಥನ ದತ್ತಿ ಉಪನ್ಯಾಸ ಉದ್ಘಾಟಿಸಿ ಮಾತನಾಡಿದರು.
    ಕಾಗೋಡು ಚಳವಳಿ ಈ ಮಣ್ಣಿನ ಹೋರಾಟವನ್ನು ವಿಶ್ವಕ್ಕೆ ಪರಿಚಯಿಸಿದೆ. ಸಾಮಾಜಿಕ ಸುಧಾರಣೆಗೆ ಸಾಹಿತ್ಯ ಅತಿ ಮುಖ್ಯ. ಸಾಹಿತ್ಯದಿಂದ ಬೇರೆ ವಿಷಯಗಳ ಮೇಲೂ ಬೆಳಕು ಚೆಲ್ಲಲು ಸಾಧ್ಯ. ಸ್ವಾತಂತ್ರ್ಯ ನಂತರದಲ್ಲಿ ನಡೆದ ಕಾಗೋಡು ಹೋರಾಟ ಭೂಮಿಗಾಗಿ ನಡೆದ ಚಳವಳಿಯಾಗಿದ್ದರೂ ಗೇಣಿ ರೈತರ ಸ್ವಾಭಿಮಾನದ ಪ್ರತೀಕವಾಗಿ ಅದು ರೂಪುಗೊಂಡಿತ್ತು. ಡಾ. ಎಚ್.ಗಣಪತಿಯಪ್ಪ ಮುಂಚೂಣಿಯಲ್ಲಿ ಹೋರಾಟವನ್ನು ಮುನ್ನಡೆಸಿದ್ದಾರೆ. ಇಂದು ಭೂಸುಧಾರಣೆ ಕಾಯ್ದೆ ಬಂದು 50 ವರ್ಷ ಕಳೆದಿದೆ. ನಾವು ನಡೆದು ಬಂದ ಹಾದಿಯನ್ನು ಸದಾ ಅವಲೋಕಿಸಿಕೊಳ್ಳಬೇಕು. ಭೂಮಿಯನ್ನು ವ್ಯವಸ್ಥಿತವಾಗಿ ಕೃಷಿ ಉಪಯೋಗಕ್ಕೆ ಬಳಸುವ ಮನೋಪ್ರವೃತ್ತಿ ಬೆಳೆಯಬೇಕು ಎಂದರು.
    ‘ಭೂಮಿ ಈ ಹೊತ್ತಿನ ಆತಂಕ’ ಕುರಿತು ಚಿಂತಕ ಶಿವಾನಂದ ಕುಗ್ವೆ ಮಾತನಾಡಿ, ಕೃಷಿಗಾಗಿ ಬಳಕೆಯಾಗಬೇಕಾದ ಭೂಮಿ ಇಂದು ಮಾರಾಟದ ಸರಕಾಗುತ್ತಿದೆ. ಉಳ್ಳವರ ಬಳಿ ಭೂಮಿ ಸಂಗ್ರಹವಾಗುತ್ತಿರುವುದು ಅತ್ಯಂತ ಆತಂಕಕಾರಿ ಸಂಗತಿ. ತುಂಡು ಭೂಮಿಗಾಗಿ ನಡೆದ ಹೋರಾಟ ಕಾಗೋಡು ಚಳವಳಿಯಾದರೂ ಅದು ಭೂರಹಿತರಿಗೆ ಧ್ವನಿಯಾಗಿ ರೂಪುಗೊಂಡಿದ್ದು ಇಂದು ಇತಿಹಾಸ ಎಂದು ತಿಳಿಸಿದರು.
    ಪ್ರಜಾತಂತ್ರ ವ್ಯವಸ್ಥೆಯಲ್ಲಿ ಹೋರಾಟದಿಂದ ಪಡೆದ ಹಕ್ಕಿನ ಮೂಲ ಚಿಂತನೆಯೇ ಬದಲಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ. ನಮ್ಮ ಯುವ ಜನರಿಗೆ ಹಿಂದೆ ನಡೆದ ಭೂಮಿ ಹಕ್ಕಿನ ಚಳವಳಿಯ ಮಹತ್ವ ಪರಿಚಯಿಸುವಲ್ಲಿ ನಾವೂ ಹಿಂದೆ ಬಿದ್ದಿದ್ದೇವೆ. ಇನ್ನಾದರೂ ಭೂಮಿ ಮಹತ್ವ ಪರಿಚಯಿಸುವ ಕೆಲಸ ಆಗಬೇಕು ಎಂದರು.
    ಸಾಹಿತಿ ಡಿ.ಎಚ್.ಸೂರ್ಯಪ್ರಕಾಶ್, ಪ್ರಾಚಾರ್ಯ ಬಿ.ಟಿ.ಶೇಖರಪ್ಪ, ಕಸಾಪ ತಾಲೂಕು ಅಧ್ಯಕ್ಷ ವಿ.ಟಿ.ಸ್ವಾಮಿ, ಪ್ರಮುಖರಾದ ವಿ.ಎಂ.ರಘು, ಉಮೇಶ್ ಹಿರೇನೆಲ್ಲೂರು, ಕಸ್ತೂರಿ ಸಾಗರ್, ಅಣ್ಣಪ್ಪ, ರಮೇಶ್ ಮಣ್ಣೂರು, ಡಾ. ಪ್ರಸನ್ನ, ಶಶಿಧರ್, ಎಲ್.ಬಿ.ರಮೇಶ್, ಎನ್.ಎಂ.ಭಾಗೀರಥಿ ಇತರರಿದ್ದರು.

    ಸರ್ವರಿಗೂ ಸಮಪಾಲು ಸಮ ಬಾಳು ಎಂಬ ಉದ್ದೇಶದೊಂದಿಗೆ ಡಾ. ಎಚ್.ಗಣಪತಿಯಪ್ಪ ಸೇರಿ ಅನೇಕ ಹಿರಿಯರು ಹೋರಾಟಕ್ಕೆ ತಮ್ಮದೆ ಕೊಡುಗೆ ನೀಡಿದ್ದಾರೆ. ಹಿರಿಯರ ಹೋರಾಟದಿಂದ ಉಳಿಸಿಕೊಂಡ ಭೂಮಿಯನ್ನು ಕಳೆದುಕೊಳ್ಳಬಾರದು. ಭೂಮಿಯನ್ನು ಮಾರಾಟದ ವಸ್ತುವಾಗಿ ನೋಡದೆ ಅದನ್ನು ಕೃಷಿ ಮಾಡಿ ರಕ್ಷಿಸಿಕೊಳ್ಳಬೇಕು.
    ಶಿವಾನಂದ ಕುಗ್ವೆ, ಚಿಂತಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts