More

    ಕಗ್ಗದ ಬೆಳಕು | ಸಮಷ್ಟಿಯ ಬಾಳಿನಿಂದ ಆತ್ಮೋನ್ನತಿ

    ಕಗ್ಗದ ಬೆಳಕು | ಸಮಷ್ಟಿಯ ಬಾಳಿನಿಂದ ಆತ್ಮೋನ್ನತಿಪ್ರತ್ಯೇಕ ಸುಖವ, ನೀಂ ಪ್ರತ್ಯೇಕ ಸಂಪದವ- |
    ನತ್ಯಾಶೆಯಿಂದರಸಿ ಮಿಕ್ಕೆಲ್ಲ ಜಗವ- ||
    ನೊತ್ತಟ್ಟಿಗಿಡುವೆನೆನೆ, ನಷ್ಟವಾರಿಗೊ ಮರುಳೆ? |
    ಬತ್ತುವುದು ನಿನ್ನಾತ್ಮ – ಮಂಕುತಿಮ್ಮ ||

    ‘ಎಲೈ ಮರುಳಾ! ನೀನು ಅತಿಯಾಸೆಯಿಂದ ಪ್ರತ್ಯೇಕ ಸುಖ, ಸಂಪತ್ತನ್ನು ಅರಸುತ್ತ, ಉಳಿದೆಲ್ಲ ಜಗತ್ತನ್ನು ಬದಿಗೊತ್ತುವೆನೆಂದು ಯೋಚಿಸಿದರೆ ನಷ್ಟವಾಗುವುದಾದರೂ ಯಾರಿಗೆ ? ನಿನ್ನಾತ್ಮವೇ ಬತ್ತಿಹೋಗುತ್ತದೆ’ ಎನ್ನುತ್ತದೆ ಈ ಕಗ್ಗ.

    ಜಗತ್ತು ಸುಂದರ ವರ್ಣಚಿತ್ರದಂತೆ. ಅದರಲ್ಲಿನ ಪ್ರತಿ ಗೆರೆಗಳು, ಬಣ್ಣಗಳು ಪರಸ್ಪರ ಪೂರಕವಾಗಿರುತ್ತವೆ. ಹಾಗೆಯೇ ಪರಸ್ಪರ ಸಂಬಂಧವುಳ್ಳ ಜಗತ್ತಿನಲ್ಲಿ ಬಾಳುತ್ತಿದ್ದೇವೆ. ಇಲ್ಲಿ ಯಾರೂ ಯಾರ ಅವಲಂಬನೆಯೂ ಇಲ್ಲದೆ ಒಂಟಿಯಾಗಿ ಜೀವಿಸಲಸಾಧ್ಯ. ಮನುಷ್ಯರ ನಡುವೆ ಮಾತ್ರವಲ್ಲದೆ ಪ್ರಕೃತಿಯಲ್ಲಿರುವ ಜೀವ – ನಿರ್ಜೀವ ವಸ್ತುಗಳ ಮಧ್ಯೆಯೂ ಅವ್ಯಕ್ತ ಸಂಬಂಧ ಏರ್ಪಟ್ಟಿರುತ್ತದೆ.

    ಎಲ್ಲರೊಡನೆ ಇದ್ದರೂ ಮನುಷ್ಯ ಮಾತ್ರ ಪ್ರತ್ಯೇಕತೆಯನ್ನು ಸ್ಥಾಪಿಸಲು ಬಯಸುತ್ತಾನೆ. ಅಪಾರ ಬುದ್ಧಿಶಕ್ತಿಯುಳ್ಳ ಮನುಷ್ಯ ಅದನ್ನು ತನ್ನ ಆಂತರಿಕ ವಿಕಾಸಕ್ಕಾಗಿ ಬಳಸದೆ, ಬಹಿರಂಗದ ಕ್ಷಣಿಕ ಸುಖ-ಸಂಪತ್ತನ್ನು ಹೊಂದಲು ಉಪಯೋಗಿಸುತ್ತಾನೆ. ತನ್ಮೂಲಕ ತಾನೇ ಶ್ರೇಷ್ಠ ಎಂದು ಸ್ಥಾಪಿಸಲು ಹವಣಿಸುತ್ತಾನೆ. ಸಾಮಾನ್ಯವಾಗಿ ಎಲ್ಲರಲ್ಲೂ ಇರುವ ಈ ಆತ್ಮಪ್ರತಿಷ್ಠೆಯ ನಿಲುವು ತೀವ್ರಗೊಂಡರೆ ವ್ಯಕ್ತಿ ಪರಮ ಸ್ವಾರ್ಥಿಯಾಗುತ್ತಾನೆ. ಇತರರ ಕಷ್ಟಗಳಿಗೆ ಸ್ಪಂದಿಸಲಾರದಷ್ಟು ವ್ಯವಹಾರಸ್ಥನಾಗುತ್ತಾನೆ. ಅತಿಯಾಸೆಗೆ ವಶನಾಗುತ್ತಾನೆ. ಆಸೆಗಳ ಸಾಕಾರಕ್ಕೆ ಹೇಯ ಕೃತ್ಯ ಎಸಗಲು ಹಿಂಜರಿಯದಷ್ಟು ದುಷ್ಟನಾಗುತ್ತಾನೆ. ಒಂದೇ ತಾಯಿಯ ಮಕ್ಕಳಾಗಿದ್ದರೂ ಬಲಾಢ್ಯನು ಬಾಂಧವ್ಯಗಳನ್ನು ಲೆಕ್ಕಿಸದೆ ಕಸಿದುಕೊಳ್ಳುವ ಧಾರ್ಷ್ಯr ತೋರುವುದಿದೆ; ಅಂದಮೇಲೆ ಉಳಿದ ಸಂಬಂಧಗಳೆಲ್ಲ ಪ್ರಯೋಜನವೇ ಉದ್ದೇಶವಾಗಿ ಏರ್ಪಡುವುದರಲ್ಲಿ ಆಶ್ಚರ್ಯವಿಲ್ಲ. ಆದರೆ ಇದರಿಂದ ವ್ಯಕ್ತಿ ಆತ್ಮಸಾಕ್ಷಿಯ ಎದುರು ಕುಬ್ಜನಾಗುತ್ತಾನೆ.
    ಒಂದುಗೂಡಿ ಬಾಳಲು ಎಲ್ಲರಲ್ಲೂ ಸಾಮರಸ್ಯ ಗುಣವಿರಬೇಕು. ಆದರೆ ಸಮಾಜದಿಂದ ಪಡೆಯುವದರಲ್ಲಷ್ಟೇ ಲಕ್ಷ್ಯವಿರುವ ಮತ್ತು ಸಾಮಾಜಿಕವಾಗಿ ತನ್ನ ಹೊಣೆಗಾರಿಕೆಯ ಬಗೆಗೆ ಕುರುಡಾಗಿರುವ ವ್ಯಕ್ತಿ ಸಮಾಜಕ್ಕೆ ಹೊರೆಯೇ ಸರಿ. ಸಮೂಹದೊಳಗಿದ್ದರೂ ಆತ ಒಂಟಿ. ಜೀವನದಲ್ಲಿ ತಾನೊಬ್ಬನೇ ಸಂಪತ್ತು-ಸಮೃದ್ಧಿ ಅನುಭವಿಸುತ್ತೇನೆ, ಸಮಾಜದ ಸಂಪರ್ಕ ಬೇಡವೆಂಬ ನಿಲುವು ಸಾಧುವಲ್ಲ. ಶ್ರೀಮಂತಿಕೆ ಮತ್ತು ಅಧಿಕಾರದ ಮದದಲ್ಲಿರುವ ಕೆಲವರು ಹಾಗೆ ಬಾಳುವುದಿದೆ. ಇತರರ ಕಷ್ಟಗಳಿಗೆ ಒಂದಿನಿತೂ ಸ್ಪಂದಿಸದೆ ಬದುಕುತ್ತಾರೆ. ಆದರೆ ಎಷ್ಟೇ ಸಂಪತ್ತಿದ್ದರೂ ಅನ್ನವನ್ನಾಗಲಿ, ಬಟ್ಟೆಯನ್ನಾಗಲಿ, ಭವ್ಯ ಸೌಧವನ್ನಾಗಲಿ ಸ್ವಯಂ ನಿರ್ವಿುಸಿಕೊಳ್ಳಲಾರರು. ಹಣ ಕೊಟ್ಟು ಆರೋಗ್ಯ, ನೆಮ್ಮದಿಗಳನ್ನು ಪಡೆಯಲಾರರು. ಹಾಗಾಗಿ ಸಮಾಜದಲ್ಲಿ ಪ್ರತಿಯೊಬ್ಬರೂ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಇತರರನ್ನು ಅವಲಂಬಿಸಿದ್ದಾರೆ. ಮನುಷ್ಯನು ಮಾನಸಿಕವಾಗಿ ಸ್ವಸ್ಥವಾಗಿರಬೇಕಾದರೆ ಇತರರೊಡನೆ ಬೆರೆತು ಬಾಳುವುದು ಆವಶ್ಯಕ. ಬೇಸರದ ಹೊತ್ತಲ್ಲಿ ‘ತನಗೆ ಯಾರೂ ಬೇಡ’ ಎಂದು ಒಂಟಿಯಾಗಿರಲಿಚ್ಛಿಸಿದವರ ಮನದಲ್ಲೂ ನಿರೀಕ್ಷೆಗಳಿರುತ್ತವೆ.

    ಜಗತ್ತನ್ನು ನಿರ್ಲಕ್ಷಿಸಿ ತನ್ನ ಸುಖಕ್ಕಷ್ಟೇ ಆದ್ಯತೆ ನೀಡುವವನು ಒಂಟಿತನದಿಂದ ನರಳಬೇಕಾಗುತ್ತದೆ. ಸಮಸ್ಯೆ ಎದುರಾದಾಗ ಅಭದ್ರತೆ ಕಾಡುತ್ತದೆ. ಲೋಕಸಂಪರ್ಕದಿಂದ ಸಿಗುವ ಸಂಸ್ಕಾರವೂ ಇಲ್ಲವಾಗುತ್ತದೆ. ಹೀಗೆ ಸ್ವಹಿತವನ್ನಷ್ಟೇ ಸಾಧಿಸಲು ಹೊರಟರೆ ವ್ಯಕ್ತಿ ಅಪಾರ ನಷ್ಟ ಅನುಭವಿಸುತ್ತಾನೆ. ಪೂರ್ಣತ್ವ ಪಡೆಯುವ ಉದ್ದೇಶದಿಂದ ಮನುಷ್ಯಜನ್ಮ ಪಡೆದು ಬಂದಿರುವ ಆತ್ಮ ಸತ್ಕರ್ಮದ ಬಲವಿಲ್ಲದೆ ಸೊರಗುತ್ತಾನೆ. ಜತೆಗೆ ಲೌಕಿಕದ ಕ್ಲೇಶದೊಳಗೆ ಸಿಲುಕಿ ಮುಂದೆ ಸಾಗಲಾಗದೆ ತಡವರಿಸುತ್ತಾನೆ. ವೈಯಕ್ತಿಕ, ಸಾಮಾಜಿಕ ಪ್ರಗತಿಗಳು ಪರಸ್ಪರ ಪೂರಕ ಎಂದರಿವಾದರೆ ಆತ್ಮೋನ್ನತಿ ಸಾಧ್ಯ.
    (ಲೇಖಕರು ಉಪನ್ಯಾಸಕರು, ಕವಯಿತ್ರಿ)

    ಕೇರಳದ ಬಂಗಾರಿ ಬೆಂಗಳೂರಿನಲ್ಲಿ ಅರೆಸ್ಟ್​: ಸ್ವಪ್ನಾ ಸುರೇಶ್ ಎನ್​ಐಎ ಕಸ್ಟಡಿಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts