More

    ಕಗ್ಗದ ಬೆಳಕು: ನಾಲ್ಕು ಶ್ರೇಷ್ಠ ವರಗಳು

    ಪರಿಮಿತಿಯನರಿತಾಶೆ, ಪರವಶತೆಯಳಿದ ಸುಖ |

    ವಿರತಿಯೊಡವೆರೆದ ಲೋಕೋದ್ಯೋಗಯುಕ್ತಿ ||

    ಪರಿಕಿಸುತ ಜೀವಿತವ ಸತ್ಯವನೆ ಪಿಡಿವ ಮತಿ |

    ವರಗಳೀ ನಾಲ್ಕೆ ವರ-ಮಂಕುತಿಮ್ಮ ||

    ‘ಮಿತಿಯನ್ನು ಅರಿತ ಆಸೆ, ಪರವಶತೆ ಅಳಿದ ಸುಖ, ವಿರಕ್ತಿಯಿಂದ ಕೂಡಿದ ಲೋಕ ಉದ್ಯೋಗದ ಯುಕ್ತಿ. ಜೀವಿತವನ್ನು ಪರೀಕ್ಷಿಸುತ್ತ ಸತ್ಯವನ್ನೇ ಹಿಡಿದು ನಡೆಯುವ ಮತಿ – ಈ ನಾಲ್ಕು ವರಗಳು ಶ್ರೇಷ್ಠವಾದವು’ ಎನ್ನುತ್ತದೆ ಈ ಕಗ್ಗ.

    ಕಗ್ಗದ ಬೆಳಕು: ನಾಲ್ಕು ಶ್ರೇಷ್ಠ ವರಗಳುಬದುಕಿನ ಏಳಿಗೆಗೆ ಪೂರಕವಾದ ವರಗಳು ಹಲವು. ಜೀವನವನ್ನು ಉದ್ಧರಿಸುವ ನಾಲ್ಕು ಶ್ರೇಷ್ಠವಾದ ವರಗಳಿವೆ. ಅವುಗಳನ್ನು ಪಡೆದು, ವಿವೇಚನೆಯೊಂದಿಗೆ ಅನುಸರಿಸಿದರೆ ಸಂತೃಪ್ತ ಜೀವಿತವು ನಮ್ಮದಾಗುತ್ತದೆ. ಮೊದಲನೆಯದ್ದು ತನ್ನ ಮಿತಿಯನ್ನರಿತು ವ್ಯವಹರಿಸುವ ಆಸೆ. ಆಸೆಯು ಜೀವ ಪ್ರೇರಕ. ಹತ್ತು ಹಲವು ಬೇಕುಗಳನ್ನು ಪೂರೈಸಿಕೊಳ್ಳುವ ಹೋರಾಟದಿಂದ ಜೀವನವು ಕ್ರಿಯಾಶೀಲವಾಗಿರುತ್ತದೆ. ಮನುಷ್ಯನ ಸಾಧನೆ, ಸಾರ್ಥಕತೆಯ ಹಿಂದೆ ಆಸೆಯ ಪ್ರಚೋದನೆ ಇರುತ್ತದೆ. ಹಾಗೆಂದು ಮನಸ್ಸಿಗೆ ತೋಚಿದ್ದನ್ನೆಲ್ಲ ವಿವೇಚಿಸದೆಯೇ ಬಯಸುವ, ಪಡೆಯಲು ಹವಣಿಸುವ ಯತ್ನದಿಂದ ಬಾಳಿಗೆ ಗೆಲುವಿಲ್ಲ. ತನ್ನ ಇತಿಮಿತಿಗಳನ್ನು ಅರಿತು ವ್ಯವಹರಿಸುವ ಆಸೆಯಿಂದ ಬದುಕು ಭಾರವಾಗಲಾರದು. ಸರಿಯಾದ ಪೂರ್ವಸಿದ್ಧತೆಯೊಂದಿಗೆ, ಉದ್ದೇಶ ಮತ್ತು ಪರಿಣಾಮವನ್ನು ವಿಮಶಿಸಿ ಆಸೆಗಳನ್ನು ಪೂರೈಸಿಕೊಳ್ಳುವುದು ಅತ್ಯಂತ ಮುಖ್ಯ. ಹಾಗಾಗಿ ಬದುಕು ಸ್ವಾರಸ್ಯಕರವಾಗಲು ಆಸೆಗಳು ಪರಿಮಿತಿಯಲ್ಲಿರಬೇಕು.

    ಪ್ರತಿಯೊಬ್ಬರೂ ಸುಖದ ಬದುಕನ್ನು ಬಯಸುವುದು, ಅದಕ್ಕಾಗಿ ಸತತವಾಗಿ ಶ್ರಮಿಸುವುದನ್ನು ಕಾಣುತ್ತೇವೆ. ಸಂತೃಪ್ತ ಕ್ಷಣಗಳಿಗಾಗಿ ಮಾಡುವ ಪ್ರಯತ್ನವು ವಿಕಾಸಕ್ಕೆ, ಜೀವನ ಸಾಫಲ್ಯತೆಗೆ ಕಾರಣವಾಗುತ್ತದೆ. ಆದರೆ ಈ ಸುಖದ ನೆರಳಿನಲ್ಲಿ ವಿಶ್ರಮಿಸಿದ ವ್ಯಕ್ತಿ ಮೈಮರೆತ ಸ್ಥಿತಿಗೆ ತಲುಪಬಾರದು. ಸುಖನಿದ್ರೆಯನ್ನು ಬಯಸುವ ಜೀವವು ನಿದ್ರಾವಶವಾಗಿಯೇ ಇದ್ದರೆ ಬದುಕಿನ ಗತಿಯೇನು? ಇಂದ್ರಿಯಸುಖಗಳಿಗೆ, ಆಕರ್ಷಣೆಗಳಿಗೆ ಮುಗಿಬೀಳುವ, ಆ ಅಮಲಿನಲ್ಲೇ ಕಳೆದುಹೋಗುವ ದೌರ್ಬಲ್ಯವು ಖಂಡಿತ ಸರಿಯಲ್ಲ. ಬದುಕಿಗೆ ಅಂಟಿಕೊಳ್ಳುವ ಬಾಂಧವ್ಯಗಳು ಹರುಷವುಕ್ಕಿಸುವುದು, ಪ್ರೀತಿ, ಸ್ನೇಹಗಳ ರೂಪದಲ್ಲಿ ಹೃದಯಕ್ಕಿಳಿಯುವುದು ಸಹಜ. ಇಂದ್ರಿಯಗಳನ್ನು ತಣಿಸುವ, ತನ್ನನ್ನು ತಾನು ಮರೆಯುವ ಸ್ಥಿತಿಯಿಂದ ಬಾಳು ಮುಗ್ಗರಿಸಿದಂತಾಗುತ್ತದೆ. ಆದುದರಿಂದ ಕ್ಷಣಿಕ ಸುಖಗಳಲ್ಲಿ ಪರವಶರಾಗದೆ ದೃಢಮನಸ್ಕರಾಗಿರುವುವು ಇನ್ನೊಂದು ಶ್ರೇಷ್ಠ ವರ.

    ವಿರಕ್ತಭಾವವೂ ಜೀವನದ ಉದ್ಧಾರಕ್ಕೆ ಅಗತ್ಯ. ಲೋಕಜೀವನದಲ್ಲಿ ಅವೆಷ್ಟೋ ಅನುಭವಗಳಿಗೆ ಒಳಪಡಬೇಕಾಗುತ್ತದೆ. ಪರಸ್ಪರ ಅವಲಂಬಿತವಾದ, ಹಲವು ಕರ್ತವ್ಯಗಳನ್ನು ನಿಭಾಯಿಸಲೇಬೇಕಾದ ಜೀವಿತದಲ್ಲಿ ನನ್ನದು, ನನ್ನಿಂದ ಎನ್ನುವ ಎನ್ನುವ ಮೋಹ, ಅಹಂಕಾರ ಮೂಡುವುದುಂಟು. ನಿಷ್ಠೆಯಿಂದ ಕರ್ತವ್ಯಗಳನ್ನು ಮಾಡುವುದರ ಜೊತೆಗೆ ಫಲಾಪೇಕ್ಷೆಯೂ ಇರುತ್ತದೆ. ಲೋಕವ್ಯವಹಾರದಲ್ಲಿ ತೀವ್ರ ಅನುರಕ್ತಿ, ಅತ್ಯಾಸಕ್ತಿ ಬೆಳೆಸಿಕೊಂಡಾಗ ನಿರೀಕ್ಷೆಗಳು ಅಧಿಕವಾಗುತ್ತವೆ. ಎಲ್ಲ ಹೊರೆಯೂ ತನ್ನ ಮೇಲೆಯೇ ಇದೆ ಎಂಬ ಭಾವದಲ್ಲಿ ನಿಟ್ಟುಸಿರಿಡುತ್ತ, ಹುಸಿ ನಿರೀಕ್ಷೆಗಳಿಗೆ ಹತಾಶರಾಗುತ್ತ ಬದುಕುವಂತಾಗುತ್ತದೆ. ನಮಗೆ ನಾವು ಪ್ರಾಮಾಣಿಕರಾಗಿ ಬಾಳುವುದು ರೂಢಿಯಾದಾಗ ವಿಶ್ವದ ಆಗುಹೋಗುಗಳು ಅರ್ಥವಾಗುತ್ತದೆ. ವಿರಕ್ತಿಯನ್ನು ಒತ್ತಾಯದಿಂದಲೋ, ಒತ್ತಡದಿಂದಲೋ ಅನುಸರಿಸಲು ಸಾಧ್ಯವಿಲ್ಲ. ಅದು ಸಹಜವಾಗಿ ಹುಟ್ಟಬೇಕು. ಜೀವನವನ್ನು ನಿರಂತರವಾಗಿ ಪರಿಶೀಲಿಸುತ್ತ, ಸತತ ಅಂತರ್ವೀಕ್ಷಣೆಯ ಮೂಲಕ ಮನಸ್ಸಿನ ಓಟವನ್ನು ಗಮನಿಸುವ ಶಕ್ತಿಯು ಜೀವನಕ್ಕೆ ಅಮೂಲ್ಯ ವರವೇ ಆಗಿದೆ. ಸ್ವವಿಮರ್ಶೆಯ ಶಕ್ತಿ ವೃದ್ಧಿಸಿದರೆ ಸತ್ಯಾಸತ್ಯತೆಗಳನ್ನು ನಿರ್ಣಯಿಸುವ ಜಾಣ್ಮೆ ಬೆಳೆಯುತ್ತದೆ. ಮತಿಯ ಬೆಳಕನ್ನು ಹಿಡಿದು ನಡೆದರೆ ದ್ವಂದ್ವಗಳನ್ನು ಮೀರಲು, ಭಾವೋದ್ವೇಗಕ್ಕೆ ಒಳಗಾಗದಿರಲು, ಧರ್ಮಸಂಕಟದಿಂದ ಮುಕ್ತರಾಗಲು ಸಾಧ್ಯ. ಈ ರೀತಿ ನಾಲ್ಕು ಶ್ರೇಷ್ಠ ವರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಜೀವನವು ಅರ್ಥಪೂರ್ಣವಾಗುತ್ತದೆ.

    ದೆಹಲಿಯಲ್ಲಿ 5 ಮಂದಿಗಿಂತ ಹೆಚ್ಚು ಸೇರುವಂತಿಲ್ಲ: ಸಿಎಂ ಕೇಜ್ರಿವಾಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts