More

    ಕದ್ರಿ ಪಾರ್ಕ್ ಸಮಗ್ರ ಅಭಿವೃದ್ಧಿಗೆ ಯೋಜನೆ, ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಸೂಚನೆ

    ಮಂಗಳೂರು: ಕದ್ರಿ ಉದ್ಯಾನವನದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತೋಟಗಾರಿಕೆ ಇಲಾಖೆ, ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳಿಗೆ ಸೂಚಿಸಿದರು.

    ಕದ್ರಿ ಉದ್ಯಾನವನದಲ್ಲಿ ಶುಕ್ರವಾರ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಉದ್ಯಾನವನದೊಳಗಿರುವ ಗಂಗನಪಳ್ಳದಲ್ಲಿ ಸುಮಾರು 30 ಲಕ್ಷ ಲೀಟರ್ ನೀರು ಸಂಗ್ರಹಿಸಬಹುದು. ಅದನ್ನು ಶುಚಿಗೊಳಿಸಿ ಪ್ಲಾಸ್ಟಿಕ್ ಅಳವಡಿಸಿ ನೀರು ಸಂಗ್ರಹಿಸಿ, ಗಿಡಗಳಿಗೆ ಬಳಸಬಹುದು. ಪ್ರಸ್ತುತ ಬಳಸಿದ ನೀರು ಶುದ್ಧವಾಗಿ ಪಾರ್ಕ್‌ಗೆ ಪೂರೈಕೆಯಾಗುತ್ತಿದ್ದು, ಅದನ್ನು ಸಂಗ್ರಹಿಸಿಡಲು ವ್ಯವಸ್ಥೆಯಾಗಲಿದೆ ಎಂದರು.

    ಉದ್ಯಾನವನದೊಳಗಿರುವ ಕಾರಂಜಿ ದಶಕದಿಂದ ಸ್ಥಗಿತಗೊಂಡಿದೆ. ಅದನ್ನು ಸರಿಪಡಿಸಿ ಆಕರ್ಷಣೀಯಗೊಳಿಸಲು ಯೋಜನೆ ರೂಪಿಸಲು ಸೂಚಿಸಿದರು. ಮುಡಾ ಪಾರ್ಕ್ ಸೆಸ್ ಸಂಗ್ರಹಿಸುತ್ತಿದ್ದು, ಅದನ್ನು ಉದ್ಯಾನವನದ ಅಭಿವೃದ್ಧಿಗೆ ಬಳಸುವಂತೆ ಜಿಲ್ಲಾಧಿಕಾರಿ ಸಲಹೆ ನೀಡಿದರು.

    ಲೇಸರ್ ಶೋ ನಿರ್ವಹಣೆಗೆ ಟೆಂಡರ್: ಲೇಸರ್ ಶೋ ನಿರ್ವಹಣೆಗೆ ಖಾಸಗಿ ಸಂಸ್ಥೆಗೆ ಟೆಂಡರ್ ನೀಡುವಂತೆ ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ, ಸ್ಕೇಟಿಂಗ್ ಮೈದಾನ ಅಭಿವೃದ್ಧಿಗೆ ಯೋಜನೆ ರೂಪಿಸುವಂತೆಯೂ ಸೂಚಿಸಿದರು. ಉದ್ಯಾನದಲ್ಲಿ ಹೆಚ್ಚು ವಿದ್ಯುತ್ ಬಳಕೆ ಅಗತ್ಯವಿಲ್ಲ. ಪುಟಾಣಿ ರೈಲು ತೋಟಗಾರಿಕೆ ಇಲಾಖೆಗೆ ಸೇರಿದ ಜಾಗದಲ್ಲಿ ಓಡುತ್ತಿದ್ದು, ಇದರ ನಿರ್ವಹಣೆ ಸಮಾಜ ಕಲ್ಯಾಣ ಇಲಾಖೆ ನೋಡಿಕೊಳ್ಳುತ್ತಿದೆ. ಎರಡೆರಡು ಇಲಾಖೆಗೆ ಹಂಚುವ ಬದಲು ಒಂದೇ ಇಲಾಖೆಗೆ ವಹಿಸಿ ಕೊಡುವುದು ಸೂಕ್ತ ಎಂದರು.
    ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಚ್.ಆರ್.ನಾಯ್ಕ, ಹಿರಿಯ ಸಹಾಯಕ ನಿರ್ದೇಶಕಿ ಜಾನಕಿ, ಸಾಮಾಜಿಕ ಕಾರ್ಯಕರ್ತ ಜಿ.ಕೆ.ಭಟ್ ಮೊದಲಾದವರು ಉಪಸ್ಥಿತರಿದ್ದರು.

    ಜಿಂಕೆ ಪಾರ್ಕ್ ಹೆಸರಿಗಷ್ಟೇ: ಇಲ್ಲಿನ ಜಿಂಕೆ ಪಾರ್ಕ್ ಹೆಸರಿಗಷ್ಟೇ ಇದ್ದು, ಒಂದು ಜಿಂಕೆಯೂ ಇಲ್ಲ. ಆದ್ದರಿಂದ ನಾಲ್ಕು ಜಿಂಕೆಗಳನ್ನು ಇಲ್ಲಿಡಲು ವ್ಯವಸ್ಥೆ ಮಾಡಬೇಕು. ವೀಕ್ಷಣೆಗೆ ಬರುವ ಪ್ರವಾಸಿಗರ ಮನಸ್ಸಿಗೂ ಇದರಿಂದ ಹಿತವಾಗಲಿದೆ. ಇಲ್ಲಿರುವ ಎರಡು ಪಾರ್ಕ್‌ಗಳು ಜೋಡಣೆಯಾದರೆ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಅಕ್ಷಿ ಶ್ರೀಧರ್ ಹೇಳಿದರು. ಕದ್ರಿ ಉದ್ಯಾನವನದೊಳಗಿರುವ ಜಿಮ್ ಸಲಕರಣೆ ನಿರ್ವಹಣೆ ಇಲ್ಲದೆ ಸೊರಗಿದೆ. ಅದನ್ನು ಯಾವುದಾದರೂ ಸಿಎಸ್‌ಆರ್ ಫಂಡ್ ಉಪಯೋಗಿಸಿ ಸರಿಪಡಿಸಲು ಜಿಲ್ಲಾಧಿಕಾರಿ ತೋಟಗಾರಿಕೆ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.

    ಸಂತೆ ಆಯೋಜಿಸಲು ಸಲಹೆ: ಕದ್ರಿ ಉದ್ಯಾನವನದಲ್ಲಿ ರೈತರು ಬೆಳೆದ ಹಣ್ಣು, ತರಕಾರಿಗಳನ್ನು ಮಾರಾಟ ಮಾಡಲು ತಿಂಗಳಿಗೊಂದು ಬಾರಿ ಸಂತೆ ಆಯೋಜಿಸಬಹುದು. ಪಾರ್ಕ್ ನಿರ್ವಹಣೆಗೆ ಬೇಕಾದ ಆದಾಯ ಈ ಮೂಲಕ ಪಡೆಯಬಹುದು. ಎಲ್ಲವನ್ನೂ ಇಲಾಖೆ ಅನುದಾನದಿಂದ ಮಾಡಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts