More

    ಶ್ರದ್ಧಾಭಕ್ತಿಗೆ ಒಲಿಯುವ ಕಾಡ್ಲಯ್ಯಪ್ಪ

    ಗೋಣಿಕೊಪ್ಪ: ಸುಂದರ ಪರಿಸರದ ನಡುವೆ ನೆಲೆ ನಿಂತಿರುವ ದೇವರು ಕಾಡ್ಲಯ್ಯಪ್ಪ ಭಕ್ತರ ಕೋರಿಕೆಗಳನ್ನು ಈಡೇರಿಸುವ ಮೂಲಕ ಶಕ್ತಿದೈವ ಎಂದೇ ಪ್ರಸಿದ್ಧಿ ಪಡೆದಿದ್ದಾನೆ. ಪೊನ್ನಂಪೇಟೆ ತಾಲೂಕಿನ ಅರ್ವತೊಕ್ಲು ಗ್ರಾಮದಲ್ಲಿ ಈ ದೇವಾಲಯವಿದ್ದು, ಪ್ರತಿ ವರ್ಷ ವಾರ್ಷಿಕ ಉತ್ಸವದೊಂದಿಗೆ ವಾರದ ಪೂಜೆ ನಡೆಯಲಿದೆ.

    ದೇವಾಲಯದ ಇತಿಹಾಸ: ಶತಮಾನದ ಹಿಂದೆ ಕಾಡ್ಯಮಾಡ ಅಪ್ಪಯ್ಯ ಮತ್ತು ಅಮ್ಮಕೊಡವ ಅಚ್ಚೀಯಂಡ ಮಂದಮ್ಮ ನೆರೆಹೊರೆಯವರಾಗಿದ್ದು, ಇಬ್ಬರೂ ಆತ್ಮೀಯರಾಗಿದ್ದರು. ಇವರ ಮನೆಗೆ ಅವರು ಬರುವುದು, ಅವರ ಮನೆಗೆ ಇವರು ಹೋಗಿ ಬರುವುದು ಸಾಮಾನ್ಯವಾಗಿತ್ತು. ಹೀಗಿರುವಾಗ ಒಂದು ದಿನ ಇಬ್ಬರು ಹೊರಗೆ ಹೋಗಿದ್ದು, ಅಪ್ಪಯ್ಯ ಅವರನ್ನು ಮಂದಮ್ಮ ಮನೆಗೆ ಬಿಟ್ಟು ಹಿಂದಿರುಗುವಾಗ ರಾತ್ರಿ 7ರಿಂದ 7.30ರ ಸಮಯದಲ್ಲಿ ದಾರಿಯಲ್ಲಿ ಕೋಳಿ ಕೂಗಿದ ಸದ್ದು ಕೇಳಿ ಬರುತ್ತದೆ. ಇದರಿಂದ ಗಾಬರಿಗೊಂಡ ಮಂದಮ್ಮ ಅಪ್ಪಯ್ಯ ಅವರ ಮನೆಗೆ ಬಂದು ವಿಷಯ ತಿಳಿಸುತ್ತಾರೆ.

    ನಂತರ ಇಬ್ಬರೂ ಆ ಜಾಗಕ್ಕೆ ಬಂದಾಗ ಮತ್ತೆ ಕೋಳಿ ಕೂಗುವ ಸದ್ದು ಕೇಳುತ್ತದೆ. ಅಂದು ಇಬ್ಬರೂ ತಮ್ಮ ಮನೆಗೆ ತೆರಳಿ ಮಾರನೇ ದಿನ ಬೆಳಗ್ಗೆ ಗ್ರಾಮಸ್ಥರಿಗೆ ಸುದ್ದಿ ಮುಟ್ಟಿಸುತ್ತಾರೆ. ಆ ಬಳಿಕ ಅಂದು ರಾತ್ರಿ ಎಲ್ಲರೂ ಸೇರಿ ಬೇಟೆಗೆ ಹೋಗುವಂತೆ ತೀರ್ಮಾನಿಸಲಾಗಿ, ಸುಮಾರು 20-25 ಜನರ ತಂಡ ಬೇಟೆಗೆ ಕಾಡಿಗೆ ತೆರಳಿದಾಗ ಎಲ್ಲರಿಗೂ ಕೋಳಿ ಕೂಗುವ ಸದ್ದು ಕೇಳಿಸುತ್ತದೆ. ಇದೇ ಸಂದರ್ಭದಲ್ಲಿ ಮಂದಮ್ಮ ಅವರ ಮೈಮೇಲೆ ದೇವರು ಆವಾಹನೆಗೊಂಡು ತಾನು ಇಂತಹ ದೇವರು, ನನಗೆ ಇಲ್ಲಿ ನೆಲೆ ಬೇಕು, ಪೂಜೆ ಬೇಕು ಎಂದು ಹೇಳುತ್ತದೆ.

    ಈ ಘಟನೆಯ ನಂತರ ಮಂದಮ್ಮ ದೇವರ ಪೂಜಾರಿಯಾಗಿ, ಅಪ್ಪಯ್ಯ ದೇವತಕ್ಕರಾಗಿ ದೇವಾಲಯ ನಿರ್ಮಾಣಕ್ಕೆ ಮುಂದಾಗುತ್ತಾರೆ. ಅಂದಿನಿಂದ ಈವರೆಗೂ ಕಾಡ್ಯಮಾಡ ಕುಟುಂಬದವರು ದೇವತಕ್ಕರಾಗಿ, ಅಚ್ಚೀಯಂಡ ಕುಟುಂಬಸ್ಥರು ಪೂಜಾರಿ ಆಗಿ ದೇವರ ಸೇವೆ ಮುಂದುವರಿಸುತ್ತಿದ್ದಾರೆ.

    15 ದಿನಕ್ಕೆ ಮೊದಲು ಹಬ್ಬದ ಕಟ್ಟು: ಮಾರ್ಚ್‌ನಲ್ಲಿ ವಾರ್ಷಿಕ ಹಬ್ಬ ನಡೆಯುತ್ತದೆ. ಹಬ್ಬಕ್ಕೆ 15 ದಿನಗಳ ಮೊದಲು ಗ್ರಾಮದಲ್ಲಿ ಹಬ್ಬ ಕಟ್ಟು ಬೀಳುತ್ತದೆ. ಈ ಸಂದರ್ಭದಲ್ಲಿ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಗ್ರಾಮಸ್ಥರು ಪಾಲಿಸುತ್ತಾರೆ. ಹಸಿ ಮರ ಕಡಿಯದಂತೆ, ಅಡುಗೆಗೆ ಒಗ್ಗರಣೆ ಹಾಕದಂತೆ, ಮೀನು-ಮಾಂಸ ಮಾಡದಂತೆ, ಪ್ರಾಣಿ ಹತ್ಯೆ ಮಾಡದಂತೆ, ಬೇರೆಯವರನ್ನು ತೆಗಳದಂತೆ, ಊರಿನೊಳಗೆ ತೆಂಗಿನಕಾಯಿ ಒಡೆಯದಂತೆ ಗ್ರಾಮಸ್ಥರು ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಾರೆ.

    ಇದರೊಂದಿಗೆ ಕೋಲ ಕಟ್ಟುವವರೂ ಶುದ್ಧ ಮುದ್ರಿಕೆಯಲ್ಲಿ ಇರಬೇಕು. ತನ್ನ ಮನೆ ಬಿಟ್ಟು ಬೇರೆ ಮನೆಯಲ್ಲಿ ಊಟ ಮಾಡುವಂತಿಲ್ಲ, ಹಾಸಿಗೆಯಲ್ಲಿ ಮಲಗುವಂತಿಲ್ಲ. ಬದಲಾಗಿ ನೆಲದಲ್ಲಿ ಮಲಗಬೇಕು. 14 ನೇ ದಿನ ಮನೆ ದೇವರಿಗೆ ಪೂಜೆ ಸಲ್ಲಿಸಿ ಕಾಡ್ಯಮಾಡ ಮನೆಗೆ ಬರುತ್ತಾರೆ. ಅಲ್ಲಿ ಸ್ನಾನ ಮಾಡಿ ಮಡಿ ಬಟ್ಟೆ ಹಾಕಿಕೊಂಡು ನೆತ್ತಿ ಪಟ್ಟು ಮತ್ತು ಕಟ್ಟಿ ಬಳೆ ತೊಟ್ಟು ನಂತರ ದೇವಾಲಯಕ್ಕೆ ಬರುವ ವಾಡಿಕೆಯನ್ನು ಹಿಂದಿನಿಂದಲೂ ಪಾಲಿಸಲಾಗುತ್ತದೆ.
    ಇನ್ನು ಊರಿನವರು ರಾತ್ರಿ ಮನೆ ಮನೆಗೆ ಕಳಿ ಹೋಗುತ್ತಾರೆ. ಮಾರನೇ ದಿನ ದೇವಾಲಯದಲ್ಲಿ ಕೊಂಡಕ್ಕೆ ಬೆಂಕಿ ಹಾಕುತ್ತಾರೆ.

    ನಂತರ ದೇವರ ಕೋಲ ಪ್ರಾರಂಭವಾಗುತ್ತದೆ. ಹಬ್ಬದ ದಿನದಂದು ಕದಿನಿ ಕುತ್ತಿ ಬೊಡಿ ಎಂದು ಎರಡು ಸುತ್ತು ಗುಂಡು ಹೊಡೆಯುವ ಮೂಲಕ ಗ್ರಾಮಸ್ಥರಿಗೆ ದೇವರ ಕಟ್ಟು ಬಿಚ್ಚುವ ಸೂಚನೆ ನೀಡಲಾಗುತ್ತದೆ. ಈ ಸಂದರ್ಭ ತೆಂಗು, ಬಾಳೆ, ಬೆಲ್ಲದಿಂದ ತಯಾರಿಸಿದ ಅವುಲ್ ಎಂಬ ಪ್ರಸಾದವನ್ನು ಭಕ್ತರಿಗೆ ನೀಡಲಾಗುತ್ತದೆ. ನಂತರ ಪ್ರತಿ ಮನೆಯಲ್ಲಿ ಮಾಂಸ ಸೇವನೆ ಮಾಡಲು ಅವಕಾಶ ನೀಡವುದು ಇಲ್ಲಿನ ವಿಶೇಷತೆಯಾಗಿದೆ.

    ದೇವರ ಉತ್ಸವ: ಅಯ್ಯಪ್ಪ ತೆರೆಯೊಂದಿಗೆ ಕುಕ್ಕೆಮುಡಿ, ಪೊಲಂದೆರೆ ತೆರೆ ನಡೆಯುತ್ತದೆ. ಪ್ರತಿ ಶನಿವಾರ ಮತ್ತು ಭಾನುವಾರ ಬೆಳಗ್ಗೆ ದೇವರ ಪೂಜೆ ನಡೆಯುತ್ತದೆ. ಇದರೊಂದಿಗೆ ಕಾವೇರಿ ಸಂಕ್ರಮಣ ಮತ್ತು ಹುತ್ತರಿ ಹಬ್ಬದ ದಿನದಂದು ವಿಶೇಷ ಪೂಜೆ ನೆರವೇರಲಿದೆ. ಈ ಸಂದರ್ಭ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗೆ ದೇವರಿಗೆ ಹರಕೆ ಕಟ್ಟಿಕೊಳ್ಳುತ್ತಾರೆ. ನಂತರ ಹಬ್ಬದ ಸಂದರ್ಭದಲ್ಲಿ ಹರಕೆ ತೀರಿಸುತ್ತಾರೆ. ಸಾಮಾನ್ಯವಾಗಿ ಬೆಳ್ಳಿಯ ವಸ್ತುಗಳನ್ನು ಹರಕೆ ರೀತಿಯಲ್ಲಿ ಒಪ್ಪಿಸುತ್ತಾರೆ. ದೇವರ ಉತ್ಸವಕ್ಕೆ ದೂರದ ಊರುಗಳಿಂದಲೂ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಎರಡು ದಿನಗಳ ಕಾಲ ದೇವರ ಉತ್ಸವ ನಡೆಯುತ್ತದೆ. ಈ ವರ್ಷ ಮಾರ್ಚ್ 16 ಮತ್ತು 17 ರಂದು ದೇವರ ಉತ್ಸವ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts