More

    ಜನಪ್ರತಿನಿಧಿಗಳಲ್ಲಿ ಮೂಡಲಿ ಸಾಹಿತ್ಯ ಪ್ರಜ್ಞೆ: ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ.ನಾ. ಮೊಗಸಾಲೆ

    ವಿಜಯವಾಣಿ ಸುದ್ದಿಜಾಲ ಉಡುಪಿ

    ರಾಜ್ಯದ ಇತರ ಭಾಗಗಳಿಗೆ ಹೋಲಿಸಿದರೆ ಕರಾವಳಿಯ ಜನಪ್ರತಿನಿಧಿಗಳಲ್ಲಿ ಸಾಹಿತ್ಯದ ಕಾಳಜಿ ಕಡಿಮೆ. ಇದರಿಂದ ಸಾಂಸ್ಕೃತಿಕ ನಿರ್ವಾತ ಸೃಷ್ಟಿಯಾಗಿದೆ. ಇಂಥ ಪರಿಸ್ಥಿತಿಯಲ್ಲಿ ಕನ್ನಡ ಕಾವ್ಯ ಪ್ರಪಂಚ ಹೊಸತನ ಹಾಗೂ ಹೊಸದಾರಿ ಕಂಡುಕೊಳ್ಳಬೇಕು ಎಂದು ಕಾಂತಾವರ ಕನ್ನಡ ಸಂಘದ ಅಧ್ಯಕ್ಷ, ಸಾಹಿತಿ ಡಾ. ನಾ.ಮೊಗಸಾಲೆ ಹೇಳಿದರು.

    ಮಂಗಳವಾರ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆಶ್ರಯದಲ್ಲಿ ನಡೆದ ಡಾ.ಯು.ಪಿ.ಉಪಾಧ್ಯಾಯ ಮತ್ತು ಡಾ.ಸುಶೀಲಾ ಪಿ.ಉಪಾಧ್ಯಾಯ ಪ್ರಶಸ್ತಿ ಹಾಗೂ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎದೆನೆಲದ ಕಾವು ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

    ಖ್ಯಾತ ಸಾಹಿತಿಗಳ ಹೆಸರಿನಲ್ಲಿ 22 ಸಾಂಸ್ಕೃತಿಕ ಟ್ರಸ್ಟ್‌ಗಳಿವೆ. ಕರಾವಳಿಯಲ್ಲಿ ಅಂಥ ಟ್ರಸ್ಟ್‌ಗಳಿಲ್ಲದಿರುವುದು ಖೇದಕರ ಸಂಗತಿ. ಇವೆಲ್ಲವೂ 20 ಅಥವಾ 30 ವರ್ಷ ಹಿಂದೆ ಸ್ಥಾಪಿಸಲ್ಪಟ್ಟಿದ್ದು, ಅನೇಕ ಟ್ರಸ್ಟ್‌ಗಳಿಗೆ ಸರ್ಕಾರ ಕೋಟಿ ಲೆಕ್ಕದಲ್ಲಿ ಅನುದಾನ ನೀಡುತ್ತವೆ. ಆದರೆ ಬೇಂದ್ರೆ ಹೆಸರಿನ ಟ್ರಸ್ಟ್‌ಗೆ ಹಣವೇ ಇಲ್ಲ. ಹೀಗೆ ಸರ್ಕಾರವೂ ಸಾಹಿತ್ಯ ವಲಯದ ಬಗ್ಗೆ ತಾರತಮ್ಯ ನೀತಿ ಹೊಂದಿದೆ ಎಂದು ಹೇಳಿದರು.

    ಉಜಿರೆ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನ ಸಂಶೋಧಕ ಡಾ. ಎಸ್.ಆರ್.ವಿಘ್ನರಾಜ್ ಅವರಿಗೆ ಉಪಾಧ್ಯಾಯ ಪ್ರಶಸ್ತಿ ಹಾಗೂ ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಉಪನ್ಯಾಸಕ ಡಾ.ರತ್ನಾಕರ ಸಿ.ಕುನುಗೋಡು ಅವರಿಗೆ ಕಡೆಂಗೋಡ್ಲು ಪ್ರಶಸ್ತಿ ಪ್ರದಾನ ಮಾಡಲಾಯಿತು.

    ವಿಮರ್ಶಕ ಪ್ರೊ.ಮುರಳೀಧರ ಉಪಾಧ್ಯ ಅಧ್ಯಕ್ಷತೆ ವಹಿಸಿದ್ದರು. ಉಜಿರೆ ಎಸ್‌ಡಿಎಂ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಬಿ.ಪಿ.ಸಂಪತ್ ಕುಮಾರ್ ಹಾಗೂ ಎಂಜಿಎಂ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪುತ್ತಿ ವಸಂತ ಕುಮಾರ್ ಅಭಿನಂದನ ಭಾಷಣ ಮಾಡಿದರು. ವಿಶ್ರಾಂತ ಪ್ರಾಧ್ಯಾಪಕ ಡಾ. ನರಸಿಂಹ ಮೂರ್ತಿ ಆರ್. ಉಪನ್ಯಾಸ ನೀಡಿದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಉಪಸ್ಥಿತರಿದ್ದರು.

    ಸಂಶೋಧನ ಕೇಂದ್ರ ಆಡಳಿತಾಧಿಕಾರಿ ಡಾ. ಬಿ.ಜಗದೀಶ್ ಶೆಟ್ಟಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ರಾಘವೇಂದ್ರ ತುಂಗ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts