More

    ಕಂಬಳ ಋತು ಸಿದ್ಧತೆ ಆರಂಭ: ನ.27ರಿಂದ ಮಾ.26ರವರೆಗೆ 17 ಕೂಟ ನಿಗದಿಪಡಿಸಿದ ಸಮಿತಿ

    ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಕಂಬಳ ಸಿದ್ಧತೆ ಭರದಿಂದ ಸಾಗುತ್ತಿದೆ. ಕುದಿ ಕಂಬಳಗಳು ಅಲ್ಲಲ್ಲಿ ನಡೆಯುತ್ತಿದ್ದು, ಈಗ ಕರೆಗಳ ದುರಸ್ತಿ ಕೆಲಸಗಳಿಗೂ ಚಾಲನೆ ನೀಡಲಾಗಿದೆ.

    ಮಂಗಳವಾರ ಜಿಲ್ಲಾ ಕಂಬಳ ಸಮಿತಿಯು 2021-22ನೇ ಸಾಲಿನ ಕಂಬಳ ವೇಳಾಪಟ್ಟಿಯನ್ನೂ ಪ್ರಕಟಿಸಿದೆ. ಮಂಗಳೂರಿನಲ್ಲಿ ಸಭೆ ಸೇರಿದ ಕಂಬಳ ಪ್ರಮುಖರು ಸ್ಥಳೀಯ ಸಮಿತಿಗಳ ಮುಖ್ಯಸ್ಥರೊಡನೆ ಸಮಾಲೋಚನೆ ನಡೆಸಿ, ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ಕಂಬಳ ನಡೆಸಲು ದಿನಾಂಕ ನಿಗದಿ ಮಾಡಿದ್ದಾರೆ. ಇದರಂತೆ ನ.27ರಿಂದ 2020ರ ಮಾರ್ಚ್ 26ರ ವರೆಗೆ ಒಟ್ಟು 17 ಕಂಬಳ ಕೂಟಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಮೊದಲ ಕಂಬಳ ಮೂಡುಬಿದಿರೆಯಲ್ಲಿ ಹಾಗೂ ಕೊನೆಯ ಕಂಬಳ ವೇಣೂರಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.
    ವೇಳಾಪಟ್ಟಿ ಪ್ರಕಟಗೊಂಡಿದ್ದರೂ, ಕೆಲವು ಕಂಬಳಗಳ ದಿನಾಂಕಗಳು ಬದಲಾಗುವ ಸಾಧ್ಯತೆಗಳಿವೆ ಎಂದು ಸಮಿತಿ ಅಧ್ಯಕ್ಷ ಪಿ.ಆರ್.ಶೆಟ್ಟಿ ತಿಳಿಸಿದ್ದಾರೆ.

    ಪಿಲಿಕುಳ ಕಂಬಳ ನಿರೀಕ್ಷೆ: ಪಿಲಿಕುಳ ಕಂಬಳ ನಡೆಯದೆ ಹಲವು ವರ್ಷಗಳೇ ಆಗಿವೆ. ಈ ಬಾರಿ ನಡೆಸಬೇಕೆಂಬ ಆಸಕ್ತಿ, ಸಚಿವರು, ಜಿಲ್ಲಾಡಳಿತಕ್ಕಿದೆ. ಆದರೆ ಕರೆ ಸಿದ್ಧಪಡಿಸುವ ಕೆಲಸ ಇನ್ನೂ ಆರಂಭಗೊಂಡಿಲ್ಲ. ಹೊಸದಾಗಿ ರಚನೆಯಾಗಿರುವ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಜತೆ ಮಾತುಕತೆ ನಡೆಸಿದ ಬಳಿಕ ಜಿಲ್ಲಾಡಳಿತದ ಜತೆ ಸಮಾಲೋಚನೆ ನಡೆಸಿ ದಿನಾಂಕ ಅಂತಿಮಗೊಳಿಸುವ ಸಾಧ್ಯತೆ ಇದೆ. ಡಿಸೆಂಬರ್‌ನಲ್ಲಿ ಆಯೋಜನೆಗೊಳ್ಳಬಹುದು ಎಂಬ ನಿರೀಕ್ಷೆಗಳಿವೆ.
    ಇನ್ನೊಂದೆಡೆ ತಲಪಾಡಿ ಸೂರ್ಯಚಂದ್ರ ಜೋಡುಕರೆ ಕಂಬಳ ಇತಿಹಾಸದ ಪುಟಗಳಿಗೆ ಸೇರುತ್ತಿದೆ. ಜಮೀನು ತಕರಾರಿನಿಂದಾಗಿ ಇಲ್ಲಿ ಈ ವರ್ಷವೂ ಕಂಬಳ ನಡೆಯುತ್ತಿಲ್ಲ. ಕಾಸರಗೋಡಿನ ಪೈವಳಿಕೆ ಕಂಬಳಕ್ಕೆ ದಿನಾಂಕ ನಿಗದಿಯಾಗಿದ್ದರೂ, ಕೇರಳದ ಕೋವಿಡ್-19 ಸ್ಥಿತಿಗತಿಯನ್ನು ಅವಲಂಬಿಸಿದೆ.

    ಸಮಿತಿ ಮಹಾಸಭೆ: ಅಕ್ಟೋಬರ್ ಅಂತ್ಯದಲ್ಲಿ ಅಥವಾ ನವೆಂಬರ್ ಮೊದಲ ವಾರದಲ್ಲಿ ಕಂಬಳ ಸಮಿತಿಯ ಮಹಾಸಭೆ ನಡೆಯಲಿದೆ. ಈ ವೇಳೆ ಹೊಸದಾಗಿ ಕಂಬಳ ಸಮಿತಿ ರಚನೆಯಾಗುವ ಅಥವಾ ಹಾಲಿ ಸಮಿತಿಯನ್ನೇ ಮುಂದುವರಿಸುವ ಕುರಿತು ನಿರ್ಣಯವಾಗಲಿದೆ. ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಕಂಬಳ ಶಿಸ್ತು ಸಮಿತಿಯ ರೂಪುರೇಷೆಯೂ ಇದೇ ವೇಳೆ ಅಂತಿಮಗೊಳ್ಳಲಿದೆ.

    ಸಿಎಂ ಕರೆಸುವ ಯತ್ನ: ಮೂಡುಬಿದಿರೆ ಅಥವಾ ಮಿಯ್ಯರು ಕಂಬಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕರೆಸುವ ಪ್ರಯತ್ನ ನಡೆಯುತ್ತಿದೆ. ಹಿಂದೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಹಿನ್ನೆಲೆಯಲ್ಲಿ ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿರುವ ಸುನೀಲ್ ಕುಮಾರ್ ಅವರು ಮಿಯ್ಯರು ಕಂಬಳಕ್ಕೆ ಸಿಎಂರನ್ನು ಆಹ್ವಾನಿಸಲು ಉತ್ಸುಕರಾಗಿದ್ದಾರೆ.

    ಬೋಳಿಯಾರು, ಪಣಪಿಲ ಮುಂದಿನ ವರ್ಷಕ್ಕೆ ರೆಡಿ:
    ಮಂಗಳೂರು ತಾಲೂಕಿನ ಬೋಳಿಯಾರು ಮತ್ತು ಮೂಡುಬಿದಿರೆ ತಾಲೂಕಿನ ಪಣಪಿಲ ಎಂಬಲ್ಲಿ ಮುಂದಿನ ಕಂಬಳ ಋತುವಿನಲ್ಲಿ (2022-23) ಅಧಿಕೃತವಾಗಿ ಜೋಡುಕರೆ ಕಂಬಳಗಳು ನಡೆಯುವ ಸಾಧ್ಯತೆ ಇದೆ. ಬೋಳಿಯಾರಿನಲ್ಲಿ ಸಂತೋಷ್ ಕುಮಾರ್ ರೈ ಅವರ ನೇತೃತ್ವದಲ್ಲಿ ಕರೆ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ಈಗಾಗಲೇ ಒಂದು ಕರೆ ಸಿದ್ಧಗೊಂಡಿದೆ. ಸುಮಾರು 137 ಮೀಟರ್ ಉದ್ದದ ಕರೆ ಇದು. ಪಣಪಿಲದಲ್ಲಿ ಖಾಸಗಿ ಜಾಗದಲ್ಲಿ ಈಗಾಗಲೇ ಕಂಬಳ ನಡೆಯುತ್ತಿದ್ದು, ಮುಂದೆ ಸರ್ಕಾರಿ ಜಾಗದಲ್ಲಿ ನಡೆಸುವ ಉದ್ದೇಶವಿದೆ. ಇದಕ್ಕೆ ಜಾಗವನ್ನೂ ಗುರುತಿಸಲಾಗಿದೆ. ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದಲ್ಲಿ ಈ ಸಂಬಂಧ ಪ್ರಯತ್ನಗಳು ಮುಂದುವರಿದಿವೆ ತೀರ್ಪುಗಾರ ವಿಜಯಕುಮಾರ್ ಜೈನ್ ಕಂಗಿನಮನೆ ತಿಳಿಸಿದ್ದಾರೆ.

    ಸಮಿತಿ ಸದಸ್ಯರೊಂದಿಗೆ ಚರ್ಚಿಸಿ ಈ ಬಾರಿ ಕಂಬಳ ಆಯೋಜಿಸುವ ನಿಟ್ಟಿನಲ್ಲಿ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಒಟ್ಟು 17 ಕಂಬಳ ಕೂಟ ಆಯೋಜನೆಗೊಳ್ಳಲಿದ್ದು, ಅನಿರೀಕ್ಷಿತ ಬದಲಾವಣೆ ಹೊರತುಪಡಿಸಿ ಇದೇ ಅಂತಿಮ ಎನ್ನಬಹುದು.
    ಪಿ.ಆರ್.ಶೆಟ್ಟಿ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ

    ಕಂಬಳ ವೇಳಾಪಟ್ಟಿ:
    ನ.27 ಮೂಡುಬಿದಿರೆ
    ಡಿ.11 ಹೊಕ್ಕಾಡಿ
    ಡಿ.18 ಮಂಗಳೂರು
    ಡಿ.26 ಮೂಲ್ಕಿ
    ಜ.1 ಕಕ್ಕೆಪದವು
    ಜ.8 ಅಡ್ವೆ ನಂದಿಕೂರು
    ಜ.16 ಮಿಯ್ಯರು
    ಜ.22 ಪುತ್ತೂರು
    ಜ.29 ಐಕಳ
    ಫೆ.5 ಬಾರಾಡಿ
    ಫೆ.12 ಜೆಪ್ಪು
    ಫೆ.19 ವಾಮಂಜೂರು
    ಫೆ.26 ಪೈವಳಿಕೆ
    ಮಾ.5 ಕಟಪಾಡಿ
    ಮಾ.12 ಉಪ್ಪಿನಂಗಡಿ
    ಮಾ.19 ಬಂಗಾಡಿ
    ಮಾ.26 ವೇಣೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts