More

    ಸಮಾಜ, ಸಮುದಾಯದ ಋಣ ತೀರಿಸಿ

    ಕೆ.ಆರ್.ನಗರ: ಸಮಾಜದ ಹೆಸರಿನಲ್ಲಿ ಪದವಿ, ಹುದ್ದೆ ಮತ್ತು ಅಧಿಕಾರ ಪಡೆದವರು ಉತ್ತಮವಾಗಿ ಸೇವೆ ಸಲ್ಲಿಸಿ ಸಮಾಜ ಮತ್ತು ಸಮುದಾಯದ ಋಣ ತೀರಿಸಬೇಕು ಎಂದು ಎಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
    ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ತಾಲೂಕು ನಾಯಕರ ಸಂಘ ಮತ್ತು ತಾಲೂಕು ನಾಯಕ ನೌಕರರ ಸಂಘದಿಂದ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಪ್ರತಿಯೊಬ್ಬರೂ ಸಮಾಜಕ್ಕಾಗಿ ಏನಾದರೂ ಕೊಡುಗೆ ನೀಡಬೇಕೆಂಬ ಭಾವನೆ ಬೆಳೆಸಿಕೊಳ್ಳಬೇಕು. ಉನ್ನತ ಉದ್ಯೋಗಕ್ಕೆ ಸೇರಿದ ನಂತರ ಸಮುದಾಯದ ಬಂಧುಗಳಿಗೆ ಆಯಾ ಇಲಾಖೆಗೆ ಸಂಬಂಧಿಸಿದ ಸವಲತ್ತುಗಳನ್ನು ಕಲ್ಪಿಸಿಕೊಡಬೇಕು. ಬಡ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.
    ನಾಯಕ ಸಮುದಾಯ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದೆ. ಆದರೆ ನಮ್ಮಿಂದ ಸಹಾಯ ಪಡೆದವರು ನಮಗೆ ಸಹಾಯ ಮಾಡುವುದಿಲ್ಲ. ಹಿಂದಿನ ದಿನಗಳಲ್ಲಿ ಕೊಟ್ಟಿದ್ದನ್ನು ನೆನೆದು ಹಿಂದಿರುಗಿಸುವ ಕಾಲವಿತ್ತು. ಈಗ ಅದು ಇಲ್ಲವಾಗಿದೆ. ಆದ್ದರಿಂದ ನಮಗೆ ಸಿಗಬೇಕಾದ ಸವಲತ್ತುಗಳು ಮತ್ತು ಸೌಲಭ್ಯವನ್ನು ಹೋರಾಟದ ಮೂಲಕ ಪಡೆದುಕೊಳ್ಳಬೇಕಿದೆ. ಆಗ ಮಾತ್ರ ನಮ್ಮ ಸಮುದಾಯ ಅಭಿವೃದ್ಧಿ ಹೊಂದಲು ಸಾದ್ಯ ಎಂದು ಕರೆ ನೀಡಿದರು.
    ಜಿಪಂ ಸದಸ್ಯ ಡಿ.ರವಿಶಂಕರ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಶಾಲಾ ಹಂತದಲ್ಲಿಯೇ ನಿಶ್ಚಿತ ಗುರಿ ಇಟ್ಟುಕೊಂಡು ಆ ದಿಕ್ಕಿನೆಡೆಗೆ ಸಾಗಲು ಸತತ ಅಭ್ಯಾಸ ನಡೆಸಬೇಕು. ಆಗ ಮಾತ್ರ ಗುರಿ ಸಾಧಿಸಲು ಸಾಧ್ಯ. ನಾಯಕ ಸಂಘವು ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ಆಯೋಜಿಸಿ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬುತ್ತಿರುವುದು ಶ್ಲಾಘನೀಯ ಎಂದರು.
    ಉನ್ನತ ಹುದ್ದೆ ಅಲಂಕರಿಸಿ ಸೇವೆ ಸಲ್ಲಿಸುತ್ತಿರುವ ಸಮಯದಾಯದ ತಹಸೀಲ್ದಾರ್ ಎಂ.ಮಂಜುಳಾ, ಮಡಿಕೇರಿ ಜಿಪಂ ಲೆಕ್ಕ ಅಧೀಕ್ಷಕರಾಗಿ ಬಡ್ತಿ ಪಡೆದಿರುವ ಜೆ.ಪ್ರಕಾಶ್, ಪುರಸಭಾ ಸದಸ್ಯ ಶಿವುಕುಮಾರ್ , ನಿವೃತ್ತ ನೌಕರರು ಹಾಗೂ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
    ನಿವೃತ್ತ ಬಿಇಒ ಬೆಟ್ಟನಾಯಕ, ತಾಲೂಕು ನಾಯಕರ ಸಂಘದ ಅಧ್ಯಕ್ಷ ನರಸಿಂಹನಾಯಕ, ಬಿಜೆಪಿ ಮುಖಂಡ ಅಪ್ಪಣ್ಣ, ತಾಪಂ ಸದಸ್ಯೆ ಸಿದ್ದಮ್ಮ, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಕೆ.ಜೆ.ಶ್ರೀಧರನಾಯಕ, ಯೋಜನಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕುಮಾರ್, ನಾಯಕ ನೌಕರರ ಸಂಘದ ಅಧ್ಯಕ್ಷ ಸಿದ್ದೇಶ್ವರ್ ಪ್ರಸಾದ್, ಪದಾಧಿಕಾರಿಗಳಾದ ತುಳಿಸಿರಾಮನಾಯಕ, ದಾಸಪ್ಪ, ಕಿರಣ್ ಇನ್ನಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts