More

    ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ 124ನೇ ಜಯಂತಿ: ಕೊಡಗಿನ ವೀರನ ಸ್ಮರಣೆ ಹೊಸ ತಲೆಮಾರಿಗೆ ಇಂದಿಗೂ ಸ್ಫೂರ್ತಿ

    ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ 124ನೇ ಜಯಂತಿ: ಕೊಡಗಿನ ವೀರನ ಸ್ಮರಣೆ ಹೊಸ ತಲೆಮಾರಿಗೆ ಇಂದಿಗೂ ಸ್ಫೂರ್ತಿ| ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

    ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪನವರು ಭಾರತೀಯ ಸೇನೆಯ ಪ್ರಥಮ ಭಾರತೀಯ ಕಮಾಂಡರ್ ಇನ್ ಚೀಫ್ (ದಂಡನಾಯಕ) ಆಗಿದ್ದವರು. ಅವರು ಭಾರತ ಸ್ವತಂತ್ರ ರಾಷ್ಟ್ರವಾಗುವ ಮೊದಲು ಬ್ರಿಟಿಷ್ ಇಂಡಿಯನ್ ಆರ್ಮಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ 1949 ಜನವರಿ 15ರಿಂದ ಜನವರಿ 14, 1953ರ ತನಕ ಭಾರತೀಯ ಸೇನಾ ದಂಡನಾಯಕರಾಗಿ ಸೇವೆ ಸಲ್ಲಿಸಿದರು.

    ಜನವರಿ 28, 1899ರಲ್ಲಿ ಕಾರ್ಯಪ್ಪನವರು ಕರ್ನಾಟಕದ ಕೊಡಗಿನ ಒಂದು ಸಣ್ಣ ಗ್ರಾಮದಲ್ಲಿ ಜನಿಸಿದರು. ಅವರು ಕೃಷಿ ಕುಟುಂಬವೊಂದರಲ್ಲಿ ಹಿರಿಯ ಮಗನಾಗಿ ಜನಿಸಿದ್ದರು. ಅವರು 18ನೇ ವಯಸ್ಸಿನಲ್ಲಿ ಬ್ರಿಟಿಷ್ ಇಂಡಿಯನ್ ಆರ್ಮಿಗೆ ಸೇರ್ಪಡೆಯಾಗಿ, 1919ರಲ್ಲಿ ಸೆಕೆಂಡ್ ಲೆಫ್ಟಿನೆಂಟ್ ಪದವಿ ಪಡೆದರು. ಅವರು ಭಾರತೀಯ ಸೇನೆಯಲ್ಲಿ ವಿವಿಧ ರೆಜಿಮೆಂಟುಗಳಲ್ಲಿ ಸೇವೆ ಸಲ್ಲಿಸಿದ್ದು, 19ನೇ ಹೈದರಾಬಾದ್ ರೆಜಿಮೆಂಟ್, ಸೆಕೆಂಡ್ ರಾಯಲ್ ಲ್ಯಾನ್ಸರ್ಸ್ (ಗಾರ್ಡನರ್ಸ್ ಹಾರ್ಸ್) ಹಾಗೂ ಫಸ್ಟ್ ಇಂಡಿಯನ್ ಕ್ಯಾವಲ್ರಿ ಅವುಗಳಲ್ಲಿ ಕೆಲವು ರೆಜಿಮೆಂಟುಗಳಾಗಿದ್ದವು.

    ಬ್ರಿಟಿಷ್ ಭಾರತೀಯ ಸೇನೆಯಲ್ಲಿ ಕಾರ್ಯಪ್ಪನವರ ವೃತ್ತಿಜೀವನದ ಸಂದರ್ಭದಲ್ಲಿ ಅವರು ಹಲವು ಪ್ರಮುಖ ಘಟನೆಗಳು ಮತ್ತು ಯೋಜನೆಗಳಲ್ಲಿ ಭಾಗವಹಿಸಿದ್ದರು. ಅವರು ವಾಯುವ್ಯ ಫ್ರಾಂಟಿಯರ್‌ನಲ್ಲಿ ಮೂರನೇ ಆಂಗ್ಲೋ – ಅಫ್ಘಾನ್ ಯುದ್ಧ (1919-1921), ಹಾಗೂ ವಜೀರಿಸ್ತಾನ್ ಅಭಿಯಾನದಲ್ಲಿ (1919-1920) ಭಾಗವಹಿಸಿದ್ದರು. ಅವರು ಮೊದಲನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟಿಷ್ ಎಕ್ಸ್‌ಪೆಡಿಷನರಿ ಫೋರ್ಸ್ (ಬಿಇಎಫ್) ನಲ್ಲಿ ಭಾಗವಹಿಸಿದ್ದರು. 1920ರ ದಶಕದ ಆರಂಭದಲ್ಲಿ ಕಾರ್ಯಪ್ಪನವರು ಬ್ರಿಟಿಷ್ ಆರ್ಮಿ ಆಫ್ ದ ರೈನ್ (ಬಿಎಓಆರ್) ಭಾಗವಾಗಿದ್ದರು. ಅವರು 1924ರಲ್ಲಿ ಕ್ಯಾಪ್ಟನ್ ಹುದ್ದೆಗೆ ಭಡ್ತಿ ಪಡೆದರು. 1930ರಲ್ಲಿ ಕಾರ್ಯಪ್ಪನವರು ಮೇಜರ್ ಆದರು.

    ಎರಡನೇ ಮಹಾಯುದ್ಧದ ಅವಧಿಯಲ್ಲಿ ಕಾರ್ಯಪ್ಪನವರು ಬ್ರಿಟಿಷ್ ಇಂಡಿಯನ್ ಆರ್ಮಿಯಲ್ಲಿ ಬ್ರಿಗೇಡಿಯರ್ ಹುದ್ದೆಯಲ್ಲಿದ್ದರು. ಅವರು ಮುಂದೊತ್ತಿ ಬರುತ್ತಿದ್ದ ಜಪಾನ್ ಸೇನೆಯ ವಿರುದ್ಧದ ವಾಯುವ್ಯ ಫ್ರಾಂಟಿಯರ್ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬರ್ಮಾ ಅಭಿಯಾನದ ಸಂದರ್ಭದಲ್ಲಿ ಅವರು ಮೇಜರ್ ಜನರಲ್ ಆಗಿ ಕಾರ್ಯ ನಿರ್ವಹಿಸಿದ್ದರು. ಅವರನ್ನು ಭಾರತೀಯ 17ನೇ‌ ಇನ್‌ಫ್ಯಾಂಟ್ರಿ ಡಿವಿಷನ್ನಿನ ಕಮಾಂಡರ್ ಆಗಿ ನೇಮಿಸಲಾಯಿತು. ಯುದ್ಧದಲ್ಲಿ ಅವರ ಸೇವೆಯನ್ನು ಪರಿಗಣಿಸಿ ಅವರಿಗೆ ಆರ್ಡರ್ ಆಫ್ ದ ಬ್ರಿಟಿಷ್ ಎಂಪೈರ್ (ಒಬಿಇ) ಪುರಸ್ಕಾರ ನೀಡಿ ಗೌರವಿಸಲಾಯಿತು.

    ಭಾರತ 1947ರಲ್ಲಿ ಸ್ವಾತಂತ್ರ್ಯ ಗಳಿಸಿದ ಬಳಿಕ, ಕಾರ್ಯಪ್ಪನವರು ಭಾರತೀಯ ಸೇನೆಯ ಪ್ರಥಮ ಭಾರತೀಯ ಕಮಾಂಡರ್ ಇನ್ ಚೀಫ್ ಆಗಿ ನೇಮಕಗೊಂಡರು. ಅವರು ಭಾರತೀಯ ಸೇನೆಯ ಕೊನೆಯ ಬ್ರಿಟಿಷ್ ಕಮಾಂಡರ್ ಇನ್ ಚೀಫ್ ಆಗಿದ್ದ ಸರ್ ಫ್ರಾನ್ಸಿಸ್ ರಾಯ್ ಬುಚರ್ ಅವರಿಂದ ಅಧಿಕಾರ ಸ್ವೀಕರಿಸಿದರು. ಅವರು ಸೇನೆಯಿಂದ 1953ರಲ್ಲಿ ನಿವೃತ್ತಿ ಹೊಂದುವ ತನಕ ಈ ಹುದ್ದೆಯನ್ನು ನಿರ್ವಹಿಸಿದರು.

    ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರನ್ನು ಇಂದಿನ ಭಾರತೀಯ ಸೇನೆಯನ್ನು ರೂಪುಗೊಳಿಸುವುದರ ಹಿಂದಿದ್ದ ದೂರದೃಷ್ಟಿಯ ನಾಯಕ ಎಂಬುದಾಗಿ ಇಂದಿಗೂ ಸ್ಮರಿಸಲಾಗುತ್ತದೆ. ಭಾರತ ಸ್ವಾತಂತ್ರ್ಯ ಗಳಿಸಿದ ಬಳಿಕ ಹಲವಾರು ರಾಜರ ಆಡಳಿತದ ಪ್ರದೇಶಗಳು ಭಾರತಕ್ಕೆ ಸೇರ್ಪಡೆಯಾಗುವುದರ ಹಿಂದೆ ಕಾರ್ಯಪ್ಪನವರು ಮತ್ತು ಸೇನೆ ಪ್ರಮುಖ ಪಾತ್ರ ವಹಿಸಿದ್ದರು. ಆಯಾ ರಾಜ್ಯಗಳ ಸೇನೆಗಳನ್ನು ಭಾರತೀಯ ಸೇನೆಗೆ ಸೇರ್ಪಡೆಗೊಳಿಸುವುದರಲ್ಲೂ ಕಾರ್ಯಪ್ಪನವರ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು. ಅವರು ಭಾರತೀಯ ಸೇನೆಯ ಆಧುನೀಕರಣದ ಅಗತ್ಯವನ್ನು ಪ್ರತಿಪಾದಿಸಿದ್ದರು. ಕಾರ್ಯಪ್ಪನವರು ಭಾರತೀಯ ಸೈನಿಕರ ತರಬೇತಿ ಮತ್ತು ಆಯುಧಗಳ ಅಭಿವೃದ್ಧಿಗಾಗಿ ಶ್ರಮಿಸಿದ್ದರು.

    ಕಾರ್ಯಪ್ಪನವರು ಮೇ 15, 1993ರಂದು ತನ್ನ 94ನೇ ವಯಸ್ಸಿನಲ್ಲಿ ದೈವಾಧೀನರಾದರು. ಭಾರತೀಯ ಸೇನೆ ಮತ್ತು ಭಾರತಕ್ಕೆ ಅವರು ನೀಡಿದ ಕೊಡುಗೆಗಳನ್ನು ಗೌರವಿಸಿ, ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಅವರು ಕಾರ್ಯಪ್ಪನವರಿಗೆ ಜನವರಿ 5, 1986ರಂದು ಫೀಲ್ಡ್ ಮಾರ್ಷಲ್ ಪದವಿ ನೀಡಿ ಗೌರವಿಸಿದರು. 1986ರಲ್ಲಿ ಕಾರ್ಯಪ್ಪನವರಿಗೆ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಪದ್ಮ ವಿಭೂಷಣ ನೀಡಿ ಗೌರವಿಸಲಾಯಿತು. ಅವರನ್ನು ಭಾರತೀಯ ಸೇನೆಯ ಓರ್ವ ಅತ್ಯಂತ ಶ್ರೇಷ್ಠ ಮಿಲಿಟರಿ ನಾಯಕ ಎಂದೇ ಗುರುತಿಸಲಾಗುತ್ತಿದ್ದು, ಇಂದಿಗೂ ಅವರ ಸ್ಮರಣೆ ಹೊಸ ತಲೆಮಾರಿನ ಭಾರತೀಯ ಸೈನಿಕರಿಗೂ ಸ್ಫೂರ್ತಿ ನೀಡುತ್ತದೆ.

    ಹುಬ್ಬಳ್ಳಿಯ ಬಿವಿಬಿ ಕ್ಯಾಂಪಸ್​ನಲ್ಲಿ ನಿರ್ಮಾಣವಾಗಿರುವ ಹೈಟೆಕ್ ಒಳಾಂಗಣ ಕ್ರೀಡಾಂಗಣ ಉದ್ಘಾಟಿಸಿದ ಅಮಿತ್​ ಷಾ

    ಹುಡುಗಿಯ ಜೊತೆ ಆಟವಾಡಿದ್ದಕ್ಕೆ ನಾಯಿಯನ್ನೇ ಕೊಂದ ಕಾಲೇಜು ವಾರ್ಡನ್​! ಉಡುಪಿಯಲ್ಲಿ ಅಮಾನವೀಯ ಕೃತ್ಯ

    ಬೈಕ್​ಗೆ​ ಡಿಕ್ಕಿ ಹೊಡೆದು 10 ಕಿ.ಮೀ ಎಳೆದೊಯ್ದ ಕಾರು: ರಸ್ತೆಯಲ್ಲೆಲ್ಲ ರಕ್ತದ ಕಲೆ, ಯುವಕರಿಬ್ಬರ ದುರ್ಮರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts