More

    ಉದ್ದೇಶ ಸ್ಪಷ್ಟ, ಗುರಿ ನಿಶ್ಚಿತ

    ಹಣ ಸಂಪಾದನೆಗಾಗಿ ರಾಜಕೀಯಕ್ಕೆ ಬಂದಿಲ್ಲ   ಕೆ. ಅಣ್ಣಾಮಲೈ, ಮಾಜಿ ಪೊಲೀಸ್ ಅಧಿಕಾರಿ

    ಐಪಿಎಸ್ ಹುದ್ದೆ ತೊರೆದು, ಈಗ ರಾಜಕಾರಣ ಪ್ರವೇಶಿಸಿರುವ ಮಾಜಿ ಪೊಲೀಸ್ ಅಧಿಕಾರಿ ‘ಸಿಂಗಂ’ ಖ್ಯಾತಿಯ ಕೆ. ಅಣ್ಣಾಮಲೈ, ತಮಿಳುನಾಡು ರಾಜಕಾರಣದಲ್ಲಿ ವ್ಯಾಪಕ ಬದಲಾವಣೆ ತರುವ ಕನಸು ಹೊತ್ತಿದ್ದಾರೆ. ಬಿಜೆಪಿ ಸೇರಿರುವ ಉದ್ದೇಶ, ಮುಂದಿನ ಗುರಿ, ಆಶಯಗಳ ಬಗ್ಗೆ ವಿಜಯವಾಣಿ ದೆಹಲಿ ಪ್ರತಿನಿಧಿ ರಾಘವ ಶರ್ಮ ನಿಡ್ಲೆ ಜತೆ ಮಾತನಾಡಿದ್ದಾರೆ.

    ಉದ್ದೇಶ ಸ್ಪಷ್ಟ, ಗುರಿ ನಿಶ್ಚಿತ

    1 ರಾಜಕಾರಣಕ್ಕೇನೋ ಬಂದಿದ್ದೀರಿ. ಆದರೆ ಬಿಜೆಪಿಯನ್ನೇ ಆಯ್ಕೆ ಮಾಡಿಕೊಂಡಿದ್ದು ಏಕೆ?
    -ಬಿಜೆಪಿ ಹೊಸ ಚಿಂತನೆಯ, ವಿಭಿನ್ನ ದೃಷ್ಟಿಕೋನವುಳ್ಳ ಯುವಕರಿಗೆ ಪ್ರಾಧಾನ್ಯತೆ ನೀಡುತ್ತಿದೆ. ದೇಶಕ್ಕೆ ನವಚೈತನ್ಯ ತುಂಬಬೇಕು ಮತ್ತು ಹೊಸದಿಕ್ಕಿನಲ್ಲಿ ಸಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಲೇ ಇದ್ದಾರೆ. ಅವರ ಯೋಚನೆಗೆ ಪೂರಕವಾಗಿ ಕಾರ್ಯನಿರ್ವಹಿಸಲು ಇದುವೇ ಸೂಕ್ತ ಎಂದು ಬಿಜೆಪಿ ಸೇರಿದ್ದೇನೆ.

    2  ತಮಿಳುನಾಡಿನಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಪ್ರಬಲ ಅಡಿಪಾಯ ಹೊಂದಿದೆ? ಕಾಂಗ್ರೆಸ್ ಸೇರಬಹುದು ಎಂದು ಅನಿಸಲಿಲ್ಲವೇ?
    -ಬೇರೆ ಪಕ್ಷದ ಹೆಸರು ಹೇಳುವುದಿಲ್ಲ. ಬೇರೆ ಕಡೆ ಸಾಮಾನ್ಯರಿಗೆ, ಪ್ರತಿಭಾವಂತರಿಗೆ ಹೆಚ್ಚು ಅವಕಾಶ ಇಲ್ಲ ಎಂದು ನನಗನಿಸಿತು. ಅಲ್ಲಿ ಕುಟುಂಬ ರಾಜಕಾರಣ, ಸ್ವಜನಪಕ್ಷಪಾತದಿಂದಾಗಿ ಅನೇಕರು ಕಳೆದುಹೋಗುತ್ತಿರುವುದನ್ನು ನೋಡಿದ್ದೇನೆ. ಬಿಜೆಪಿಯಲ್ಲಿ ನನ್ನಂತಹ ಅನೇಕರಿಗೆ ಅವಕಾಶ ಸಿಕ್ಕಿದೆ ಮತ್ತು ಸಾಮಾಜಿಕ ಬದಲಾವಣೆಗೆ ಅವರದ್ದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ. ಹೀಗಾಗಿ, ಬಿಜೆಪಿ ನನ್ನ ಸಹಜ ಆಯ್ಕೆಯಾಯ್ತು.

    ಇದನ್ನೂ ಓದಿ: ಸಂಸತ್ತಿನ ಮುಂಗಾರು ಅಧಿವೇಶನ ಸೆ.14ರಿಂದ ಅ.1 ರ ತನಕ ನಡೆಸೋದಕ್ಕೆ ಶಿಫಾರಸು

    3 ಪೊಲೀಸ್ ಆಗಿದ್ದಾಗಲೂ ಸಾರ್ವಜನಿಕ ಸೇವೆ ಮಾಡಿದ್ದೀರಿ. ರಾಜಕಾರಣವೇ ಏಕೆ?
    -ನಾನು 9 ವರ್ಷ ಅಧಿಕಾರಶಾಹಿ ನೋಡಿದ್ದೇನೆ. ರಾಜಕಾರಣದಲ್ಲಿದ್ದುಕೊಂಡು, ನೀತಿ ನಿರೂಪಕನಾಗಿ ಸೇವೆ ಸಲ್ಲಿಸಬೇಕೆಂಬ ಆಶಯವಿದೆ. ಬದಲಾವಣೆ ತರಲು ಇಲ್ಲಿ ಸಾಕಷ್ಟು ಅವಕಾಶವಿದೆ. ನನ್ನ ಆಲೋಚನಾ ಲಹರಿಗೆ (ರಾಷ್ಟ್ರೀಯತೆ, ಭದ್ರತೆ, ದೇಶಪ್ರೇಮ) ಬಿಜೆಪಿ ತತ್ತ್ವಗಳು ಹೊಂದಾಣಿಕೆಯಾಗುತ್ತವೆ ಮತ್ತು ಈ ಪಕ್ಷದಲ್ಲಿ ಪ್ರತಿಭೆಗೆ ಬೆಲೆ ಇದೆ ಎಂದೇ ಬಂದಿದ್ದೇನೆ. ಸಾಮಾನ್ಯ ವ್ಯಕ್ತಿಗೂ ಗೌರವ ನೀಡುತ್ತಾರೆ. ಹಣಬಲ-ತೋಳ್ಬಲವೇ ಮುಖ್ಯವಲ್ಲ. ಸಾಮಾನ್ಯರು ಬಿಜೆಪಿಯಲ್ಲಿ ಅಧ್ಯಕ್ಷರಾಗಿದ್ದಾರೆ, ಪ್ರಧಾನಿಯಾಗಿರುವುದನ್ನೂ ನೋಡಿದ್ದೇವೆ. ನಾನೂ ಸಾಮಾನ್ಯ. ಇದಕ್ಕಿಂತ ಹೆಚ್ಚೇನು ಬೇಕು ನನಗೆ?
    4 ಅಧಿಕಾರಶಾಹಿ ಬೇರೆ, ರಾಜಕಾರಣವೇ ಬೇರೆ. ಪೊಲೀಸ್ ಆಗಿ ಭ್ರಷ್ಟಾಚಾರ, ದುಷ್ಕೃತ್ಯಗಳ ವಿರುದ್ಧ ಹೋರಾಟ ನಡೆಸಿದ ನೀವು, ಇಲ್ಲೂ ಭ್ರಷ್ಟಾಚಾರದ ಸಮಸ್ಯೆಗಳು ಎದುರಾದಾರೆ ಏನು ಮಾಡುತ್ತೀರಿ?
    -ಹಾಗಾಗುವುದಿಲ್ಲ ಎಂಬ ಭರವಸೆ ನನ್ನದು. ಬಿಜೆಪಿಯಲ್ಲಿ ಎಷ್ಟೋ ಮಂದಿ ಶುದ್ಧಹಸ್ತದಿಂದ, ವಿಶ್ವಾಸಾರ್ಹ ವ್ಯಕ್ತಿಗಳಿದ್ದಾರೆ. ಅವರೆಲ್ಲ ರಾಜಕಾರಣ ಮಾಡುತ್ತಿಲ್ಲವೇ? ಮುಖ್ಯವಾಗಿ ನಮ್ಮ ಉದ್ದೇಶ ಸ್ಪಷ್ಟವಿರಬೇಕು. ಹಣ, ಅಧಿಕಾರದಾಸೆಯಿಂದ ನಾನಿಲ್ಲಿ ಬಂದಿಲ್ಲ. ಯಾವುದೇ ಷರತ್ತು, ಬೇಡಿಕೆಗಳನ್ನಿಟ್ಟು ಪಕ್ಷ ಸೇರಿಲ್ಲ. ಸಾಮಾನ್ಯನಾಗಿದ್ದುಕೊಂಡು ಪಕ್ಷ ಕೊಟ್ಟ ಕೆಲಸ ಮಾಡುತ್ತೇನೆ. ಮುಂದಿನ ದಾರಿಯ ಬಗ್ಗೆ ಖಚಿತತೆ ಇರುವಾಗ ಯಾವುದೇ ಭಯ, ಸಂಕೋಚವಿಲ್ಲದೆ ಸೇವೆ ಸಲ್ಲಿಸುವುದಷ್ಟೇ ನನ್ನ ಕೆಲಸ.

    ಇದನ್ನೂ ಓದಿ: ಉಪ್ಪಿನಕಾಯಿ ಜಾರೂ ಹೋಯ್ತು, 81,000 ರೂಪಾಯಿನೂ ಹೋಯ್ತು!

    5 ತಮಿಳುನಾಡಿನ ಪ್ರಾದೇಶಿಕ ರಾಜಕಾರಣ ಮಧ್ಯೆ ಜನ ನಿಮ್ಮನ್ನು ಬೆಂಬಲಿಸಬಹುದು ಎಂದು ಏಕೆ ಅನಿಸುತ್ತದೆ?
    -ತಮಿಳುನಾಡಿನಲ್ಲಿ ಜನ ಬದಲಾವಣೆ ಬಯಸಿದ್ದಾರೆ. ಕುಟುಂಬಗಳ ಕೈಯಲ್ಲೇ ಅಧಿಕಾರವಿದ್ದು, ಜನರಿಗೆ ದಿಕ್ಕೇ ತೋಚದಂತಾಗಿದೆ. ಅಜ್ಜ, ಮಗ, ಮೊಮ್ಮಗನದ್ದೇ ಕಾರುಬಾರು. ಇದಕ್ಕೆ ಅಂತ್ಯ ಹಾಡಬೇಕು ಎಂದು ಅನೇಕರು ಬಯಸಿದ್ದಾರೆ. ಹೊಸ ನಾಯಕತ್ವ, ಪಕ್ಷದ ನಿರೀಕ್ಷೆಯಲ್ಲಿ ಜನರಿದ್ದಾರೆ. ಇದಕ್ಕೆಲ್ಲ ಕಾಲವೇ ಉತ್ತರ ಕೊಡಲಿದೆ. ಇಲ್ಲಿ ಶೇಕಡ 45ರಷ್ಟು ಮತದಾರರು 39 ವಯಸ್ಸಿಗಿಂತ ಕೆಳಗಿನವರು. ಕಳೆದೊಂದು ವರ್ಷದಿಂದ ತಮಿಳುನಾಡಿನಾದ್ಯಂತ ಪ್ರವಾಸ ಮಾಡಿದ್ದೇನೆ. ‘ವಿ ದ ಲೀಡರ್ಸ್’ ಎಂಬ ಸಾಮಾಜಿಕ ಸಂಸ್ಥೆ ನಡೆಸುತ್ತಿದ್ದೇನೆ ಮತ್ತು 7 ಸಾವಿರ ಸ್ವಯಂಸೇವಕರು ನನ್ನೊಂದಿಗೆ ಕೆಲಸ ಮಾಡುತ್ತಿದ್ದಾರೆ. ಹೀಗೆಯೇ ಅನೇಕ ಯುವಕರನ್ನು ಹೊಸತನದ ರಾಜಕಾರಣಕ್ಕೆ ಸೆಳೆಯುವುದು ನನ್ನ ಆಶಯ.

    6 ತಮಿಳುನಾಡಿನಲ್ಲಿ ಸಿನಿಮಾ ನಟರಾದ ರಜನಿಕಾಂತ್, ಕಮಲ್ ಹಾಸನ್ ರಾಜಕೀಯದಲ್ಲಿ ಅಷ್ಟೇನೂ ಯಶಸ್ಸು ಕಾಣುತ್ತಿಲ್ಲ. ಹೀಗಿರುವಾಗ, ಜನ ನಿಮ್ಮನ್ನು ಒಪ್ಪಬಹುದೇ?
    -ಅವರಿಬ್ಬರು ಸಿನಿಮಾ ಕ್ಷೇತ್ರದವರು. ರಜನಿಕಾಂತ್ ಬಗ್ಗೆ ನನಗೆ ಅಪಾರ ಗೌರವವಿದೆ. ವ್ಯವಸ್ಥೆ ಬದಲಾವಣೆಗೆ ಇಬ್ಬರೂ ಹೊರಟಿದ್ದಾರೆ. ಅವರು ವಿಫಲರಾಗಿದ್ದಾರೆ ಎಂದು ಹೇಳಲಾರೆ. ಅಂತಿಮವಾಗಿ ತಮಗೆ ಯಾರು ಬೇಕೆಂದು ಜನರೇ ಆಯ್ಕೆ ಮಾಡುತ್ತಾರೆ.

    ಇದನ್ನೂ ಓದಿ: ಧೋನಿಯನ್ನು ಹೊಗಳಿದ್ದಕ್ಕೆ ಸಕ್ಲೇನ್ ಮುಷ್ತಾಕ್ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸಿಟ್ಟಾಗಿದ್ದೇಕೆ?

    7 ಕರ್ನಾಟಕದಲ್ಲಿ ಜನ ಮೆಚ್ಚಿದ ಪೊಲೀಸ್ ಅಧಿಕಾರಿಯಾಗಿದ್ದವರು ನೀವು. ರಾಜ್ಯದಲ್ಲಿ ಇತ್ತೀಚೆಗೆ ಅನೇಕ ಗಲಭೆ, ಗದ್ದಲಗಳು ಸಂಭವಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ಅಣ್ಣಾಮಲೈ ಇರಬೇಕಿತ್ತು ಎಂಬ ಮಾತುಗಳು ಕೇಳುತ್ತಲೇ ಇರುತ್ತವೆ. ಈ ಬಗ್ಗೆ ಏನಂತಿರಿ?
    -ಕರ್ನಾಟಕದ ಜನರಿಗೆ ನಾನು ಯಾವತ್ತಿಗೂ ಆಭಾರಿ. ಸದಾ ಅವರನ್ನು ಪ್ರೀತಿಸುತ್ತೇನೆ. ಆದರೆ, ಬೆಂಗಳೂರಿನಂಥ ನಗರದಲ್ಲಿ ಗಲಭೆ ಸಂಭವಿಸಿದ್ದಕ್ಕೆ ಬೇಸರವಿದೆ. ಬೇರೆ ಅನೇಕ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಬಹಳ ಮುಂದುವರಿದಿದೆ. ಅದೇನೇ ಇರಲಿ, ಕರ್ನಾಟಕ ಪೊಲೀಸರ ಕಾರ್ಯಕ್ಷಮತೆ ಅದ್ಭುತ. ಆ ಬಗ್ಗೆ ಎರಡು ಮಾತಿಲ್ಲ. ಜನ (ಕೆಜೆ-ಡಿಜೆ ಹಳ್ಳಿ ಘಟನೆ) ಎಲ್ಲವನ್ನೂ ಗಮನಿಸುತ್ತಿದ್ದಾರೆ. ಚುನಾವಣೆಯಲ್ಲಿ ಉತ್ತರ ನೀಡುತ್ತಾರೆ.

    8 ಯಾವುದೇ ಕೋಮುಗಲಭೆ ನಡೆದಾಗ ರಾಜಕೀಯ ಪಕ್ಷಗಳು ಅದರಿಂದ ಲಾಭ ಗಳಿಸಲು ಯತ್ನಿಸುತ್ತವೆ. ಬಿಜೆಪಿಯೂ ಇದರಿಂದ ಹೊರತಾಗಿಲ್ಲ ಅಲ್ಲವೇ?
    -ನಮ್ಮ ಬದುಕೇ, ನಡೆಗಳೇ ಸಂದೇಶವಾಗಬೇಕು. ನಾನು ಪೊಲೀಸ್ ಅಧಿಕಾರಿಯಾಗಿ ಹೇಗೆ ಕೆಲಸ ಮಾಡಿದೆ ಎಂಬುದನ್ನು ನೀವೆಲ್ಲ ನೋಡಿದ್ದೀರಿ. ರಾಜಕಾರಣಿಯಾಗಿ ಹೇಗಿರುತ್ತೇನೆ ಎಂಬುದನ್ನೂ ನೋಡಬೇಕು. ಸಭ್ಯತೆಯ ರಾಜಕಾರಣ ಮಾಡುತ್ತೇನೋ ಅಥವಾ ಸೇಡಿನ ರಾಜಕಾರಣ ಮಾಡುತ್ತೇನೋ ನೀವೇ ನೋಡಿ. ಆಮೇಲೆ ನಿಮ್ಮ ಪ್ರಶ್ನೆಗೆ ಉತ್ತರಿಸುತ್ತೇನೆ.

    ಇದನ್ನೂ ಓದಿ: ಕೇರಳ ಸಚಿವಾಲಯದ ಬೆಂಕಿಯಲ್ಲಿ ಸುಟ್ಟು ಹೋದವೇ ಚಿನ್ನ ಕಳ್ಳ ಸಾಗಾಟದ ದಾಖಲೆಗಳು? ವಿಪಕ್ಷಗಳು ಹೇಳೋದೇನು?

    9 ಬಿಜೆಪಿ ಹಿಂದುತ್ವ ರಾಜಕಾರಣಕ್ಕೆ ಅಂಟಿಕೊಂಡಿದೆ ಎಂಬ ಆಪಾದನೆಯಿದೆ. ಈ ಬಗ್ಗೆ ನಿಮ್ಮ ಅನಿಸಿಕೆ?
    -ಇಲ್ಲಿ ಎಲ್ಲರನ್ನೂ ಸಮಾನರನ್ನಾಗಿ ಕಾಣಲಾಗುತ್ತದೆ. ಕೆಲ ಜನರಲ್ಲಿ ತಪು್ಪ ಕಲ್ಪನೆಗಳಿವೆ. ನಾನು ಪೊಲೀಸ್ ಅಧಿಕಾರಿಯಾಗಿದ್ದಾಗ ಎಲ್ಲ ಧರ್ವಿುಯರನ್ನೂ ಸಮಾನವಾಗಿ ಕಾಣುತ್ತಿದ್ದೆ. ಮುಂದೆಯೂ ಹೀಗೇ ಇರಲಿದ್ದೇನೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸೇರಿ ಎಲ್ಲ ಕಡೆ ಅನೇಕ ಸ್ನೇಹಿತರಿದ್ದಾರೆ. ಯಾವ ಧರ್ಮವನ್ನೂ ಪ್ರತ್ಯೇಕವಾಗಿ ನೋಡುವ ಸ್ವಭಾವ ನನ್ನಲ್ಲಿಲ್ಲ.

    10 ಹೊಸತಾಗಿ ರಾಜಕಾರಣಕ್ಕೆ ಪ್ರವೇಶಿಸುವಾಗ ಅನೇಕರು ಹಲವು ಕನಸುಗಳನ್ನಿಟ್ಟುಕೊಂಡು ಬರುತ್ತಾರೆ. ಅನಿಸಿಕೊಂಡಿದ್ದೆಲ್ಲವನ್ನೂ ರಾಜಕೀಯದಲ್ಲಿ ಸಾಧಿಸಲು ಸಾಧ್ಯವಿಲ್ಲ ಎನ್ನುವುದು ವಾಸ್ತವವೂ ಹೌದು. ಈ ಸವಾಲಿಗೆ ಮಾನಸಿಕವಾಗಿ ಸಿದ್ಧರಾಗಿದ್ದೀರಾ?
    -ನಾನು ಸಾಮಾನ್ಯ ಗ್ರಾಮವೊಂದರಲ್ಲಿ ಹುಟ್ಟಿ ಇಲ್ಲಿಗೆ ಬಂದು ನಿಂತಿದ್ದೇನೆ. ಹೆಚ್ಚೆಚ್ಚು ನಿರೀಕ್ಷೆಗಳನ್ನಿಟ್ಟುಕೊಂಡವನಲ್ಲ. ರಾಜಕೀಯವೂ ಹಾಗೇ ಎಂದು ಭಾವಿಸಿದ್ದೇನೆ. ಅಧಿಕಾರಕ್ಕಾಗಿ ಅಥವಾ ಹಣ ಸಂಪಾದನೆಗಾಗಿ ರಾಜಕೀಯ ಆಯ್ಕೆ ಮಾಡಿಕೊಂಡಿಲ್ಲ. ನಾನು ಇದ್ದ ಅಧಿಕಾರ ಬಿಟ್ಟು, ಸಾಮಾನ್ಯನಾಗಿ ಬಂದಿದ್ದೇನೆ, ಸಾಮಾನ್ಯನಾಗಿಯೇ ಮುಂದುವರಿಯುತ್ತೇನೆ. ಅವಕಾಶ ಸಿಕ್ಕಾಗ ಮಾತ್ರ, ಸಮಾಜಕ್ಕೆ ಪರಿಣಾಮ ಬೀರುವ ರೀತಿಯಲ್ಲಿ ಕೆಲಸ ಮಾಡಬಲ್ಲೆ ಎಂಬುದನ್ನು ಆತ್ಮವಿಶ್ವಾಸದಿಂದ ಹೇಳುತ್ತೇನೆ.

    VIDEO: ಡಿಜೆ ಹಳ್ಳಿ ಗಲಭೆ ಬಗ್ಗೆ ಬಿಜೆಪಿ ನಾಯಕ ಅಣ್ಣಾಮಲೈ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts