More

    ನ್ಯಾಯಕೊಡಿಸುವ ಸರ್ಕಾರಿ ವಕೀಲರಿಗೇ ಅನ್ಯಾಯ!

    ಬೆಳಗಾವಿ: ಶೋಷಿತರ ಪರ ವಕಾಲತು ವಹಿಸಿ ನ್ಯಾಯಕೊಡಿಸುವ ಸರ್ಕಾರಿ ವಕೀಲರು 10 ತಿಂಗಳಿನಿಂದ ವೇತನಕ್ಕಾಗಿ ಕಚೇರಿ ಅಲೆಯುವಂತಾಗಿದೆ. ವೇತನಕ್ಕಾಗಿ ಕಾನೂನು ಇಲಾಖೆ ಅಧೀನ ಕಾರ್ಯದರ್ಶಿಗಳಿಗೆ, ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

    ರಾಜ್ಯದಲ್ಲಿ ಎಲ್ಲ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳೂ ಸೇರಿದಂತೆ ಸುಮಾರು 250ಕ್ಕೂ ಹೆಚ್ಚು ಸರ್ಕಾರಿ ವಕೀಲರಿದ್ದಾರೆ. ಆದರೆ, 10 ತಿಂಗಳಿಂದ ಅವರಿಗೆ ನೀಡಬೇಕಾದ ವೇತನವನ್ನು ಸರ್ಕಾರ ಹಲವು ತಾಂತ್ರಿಕ ಕಾರಣವೊಡ್ಡಿ ಪಾವತಿಸಿಲ್ಲ. ಖಜಾನೆ-2 ರಚನೆ ಆದ ಬಳಿಕ ಸರ್ಕಾರಿ ನೌಕರರಿಗೆ ವೇತನ ನೀಡುವಲ್ಲಿ ಉಂಟಾದ ಗೊಂದಲ ಅಷ್ಟಿಷ್ಟಲ್ಲ. ಆ ಪಟ್ಟಿಯಲ್ಲೀಗ ಸರ್ಕಾರಿ ವಕೀಲರೂ ಸೇರ್ಪಡೆಯಾಗಿದ್ದಾರೆ.

    ಕೆಲಸ ಹೋಗುವ ಭೀತಿ: ಸಂಬಳ ನೀಡಲು ಇಷ್ಟೇಕೆ ವಿಳಂಬ ಎಂದು ಪ್ರಶ್ನಿಸಿದರೆ?. ಎಲ್ಲಿ ತಮ್ಮ ಕೆಲಸಕ್ಕೆ ಕುತ್ತು ಬರುತ್ತದೆಯೋ ಎಂಬ ಆತಂಕ ಎದುರಿಸುತ್ತಿರುವ ವಕೀಲರು, ವೇತನ ಲಭಿಸದೆ ಕುಟುಂಬ ನಿರ್ವಹಣೆಗೆ ತೊಂದರೆಪಡುತ್ತಿದ್ದಾರೆ. ಆದರೂ, ನೇರವಾಗಿ ಸರ್ಕಾರದ ಉನ್ನತ ಅಧಿಕಾರಿಗಳಲ್ಲಿ ಈ ವಿಷಯ ಪ್ರಸ್ತಾಪಿಸದೆ ತೆರೆಮರೆಯಲ್ಲಿಯೇ ವೇತನ ಪಡೆಯಲು ಕಸರತ್ತು ನಡೆಸಿ ದ್ದಾರೆ. ಆದರೆ, ನಿತ್ಯ ಸರ್ಕಾರದ ಪರವಾಗಿ ಕಲಾಪಗಳಿಗೆ ಹಾಜರಾಗಿ ಕಾರ್ಯನಿರ್ವಹಿಸುವುದಂತೂ ತಪ್ಪಿಲ್ಲ.

    ತಾಂತ್ರಿಕ ಕಾರಣವೇನು?: ಖಜಾನೆ-2 ರಚನೆಯಾಗುವ ಮುನ್ನ ಸರ್ಕಾರಿ ವಕೀಲರಿಗೆ ಅವರ ನೇಮಕಾತಿ ಸಂದರ್ಭದಲ್ಲಿಯೇ 3 ವರ್ಷದ ಪೇ ಸ್ಲಿಪ್ ನೀಡಲಾಗುತ್ತಿತ್ತು. ಅಲ್ಲದೆ, ಕಾರ್ಯನಿರ್ವಹಿಸಿದ ಆಯಾ ತಿಂಗಳ ಹಾಜರಾತಿಯನ್ನು ಸಂಬಂಧಪಟ್ಟ ನ್ಯಾಯಾಧೀಶರು ನೀಡುತ್ತಿದ್ದರು. ಬಳಿಕ ವಕೀಲರಿಂದ ಸ್ಲಿಪ್ ಪಡೆದು ಚೆಕ್ ಮೂಲಕ ಸರ್ಕಾರ ವೇತನ ನೀಡುತ್ತಿತ್ತು. ಆದರೆ, ಖಜಾನೆ-2 ರಚನೆಯಾದ ಬಳಿಕ ಮೂರು ವರ್ಷ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವ ವಕೀಲರಿಗೆ ಜಿಲ್ಲಾಡಳಿತವೇ ವೇತನ ನೀಡುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಆದೇಶ ನೀಡಿದ್ದರು. ಆದರೆ, ವೇತನ ನೀಡಲು ಬೇಕಾಗುವಷ್ಟು ವಿಶೇಷ ಅನುದಾನವಿಲ್ಲ ಎಂಬ ಕಾರಣ ನೀಡಿ, ರಾಜ್ಯದ ಯಾವುದೇ ಜಿಲ್ಲಾಡಳಿತ ಈವರೆಗೂ ಸರ್ಕಾರಿ ವಕೀಲರಿಗೆ ವೇತನ ಪಾವತಿಸಿಲ್ಲ.

    8.5 ಕೋಟಿ ರೂ. ವೇತನ ಬಾಕಿ

    ಜಿಲ್ಲಾ ಸರ್ಕಾರಿ ವಕೀಲರಿಗೆ 35 ಸಾವಿರ ರಿಟೇನರ್ ಶುಲ್ಕ ಹಾಗೂ ಪ್ರಯಾಣದ ಭತ್ತೆಯಾಗಿ 5 ಸಾವಿರ ಸೇರಿ ಒಟ್ಟು 40 ಸಾವಿರ ರೂ. ವೇತನ ಇದೆ. ತಾಲೂಕು ಮಟ್ಟದ ನ್ಯಾಯಾಲಯಗಳಲ್ಲಿ ಕಾರ್ಯನಿರ್ವಹಿಸುವ ಅಪರ ಜಿಲ್ಲಾ ಸರ್ಕಾರಿ ವಕೀಲರಿಗೆ 30 ಸಾವಿರ ರಿಟೇನರ್ ಶುಲ್ಕ ಹಾಗೂ ಪ್ರಯಾಣದ ಭತ್ತೆಯಾಗಿ 5 ಸಾವಿರ ರೂ. ಸೇರಿ ಒಟ್ಟು 35 ಸಾವಿರ ರೂ. ವೇತನವಿದೆ. ಆದರೆ, ಸರ್ಕಾರ 2019ರ ಸೆಪ್ಟಂಬರ್ ತಿಂಗಳಿಂದ 250ಕ್ಕೂ ಹೆಚ್ಚು ವಕೀಲರ ವೇತನ ಸುಮಾರು 8.5 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ.

    ಕಳೆದ ಹತ್ತು ತಿಂಗಳಿನಿಂದ ಪಗಾರ್ ಇಲ್ಲದೆ ದುಡಿಯುತ್ತಿರುವ ಸರ್ಕಾರಿ ವಕೀಲರಿಗೆ ಕಾನೂನು ಇಲಾಖೆ ಆದಷ್ಟು ಬೇಗನೆ ವೇತನ ಪಾವತಿ ಮಾಡಲು ಕ್ರಮ ಕೈಗೊಳ್ಳಬೇಕು.
    | ವಿನಯ ಮಾಂಗಳೇಕರ್ ಸದಸ್ಯರು, ರಾಜ್ಯ ವಕೀಲರ ಪರಿಷತ್, ಬೆಳಗಾವಿ

    ರಾಜ್ಯದ ಹತ್ತು ಜಿಲ್ಲಾಧಿಕಾರಿ ಗಳು ಕಳುಹಿಸಿರುವ ದಾಖಲೆ ಗಳನ್ನು ಹಣಕಾಸು ಇಲಾಖೆಗೆ ವೇತನ ಬಟವಡೆ ಮಾಡಲು ಕಳುಹಿಸಲಾಗಿದೆ. ಇನ್ನುಳಿದ 20 ಜಿಲ್ಲಾಧಿಕಾರಿಗಳು ಅಗತ್ಯ ದಾಖಲೆ ಕಳುಹಿಸಿದರೆ, ಆದಷ್ಟು ಬೇಗನೆ ಸರ್ಕಾರಿ ವಕೀಲರಿಗೆ ವೇತನ ದೊರೆಯಲಿದೆ.
    | ಜೆ.ಸಿ. ಮಾಧುಸ್ವಾಮಿ ಕಾನೂನು ಸಚಿವ

    | ರವಿ ಗೋಸಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts