More

    ಜೂನಿಯರ್ ಹಾಕಿ ವಿಶ್ವಕಪ್‌ನಲ್ಲಿ ಇಂದು ಭಾರತ-ಬೆಲ್ಜಿಯಂ ಕ್ವಾರ್ಟರ್‌ಫೈನಲ್

    ಭುವನೇಶ್ವರ: ಮೊದಲ ಪಂದ್ಯದಲ್ಲೇ ಆಘಾತ ಎದುರಿಸಿದರೂ ಬಳಿಕ ಪುಟಿದೆದ್ದಿರುವ ಹಾಲಿ ಚಾಂಪಿಯನ್ ಹಾಗೂ ಆತಿಥೇಯ ಭಾರತ ತಂಡ ಜೂನಿಯರ್ ಪುರುಷರ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಯುರೋಪ್‌ನ ಬಲಿಷ್ಠ ತಂಡವಾದ ಬೆಲ್ಜಿಯಂ ವಿರುದ್ಧ ಕ್ವಾರ್ಟರ್​ಫೈನಲ್ ಪಂದ್ಯ ಆಡಲಿದೆ. ಆಕ್ರಮಣ ಮತ್ತು ಡ್ರಾೃಗ್ ಫ್ಲಿಕಿಂಗ್ ಶಕ್ತಿಯಿಂದ ವಿವೇಕ್ ಸಾಗರ್ ಪ್ರಸಾದ್ ಪಡೆ ಉಪಾಂತ್ಯಕ್ಕೇರುವ ಹುರುಪಿನಲ್ಲಿದೆ.

    ಟೂರ್ನಿಯ ಫೇವರಿಟ್ ತಂಡಗಳಲ್ಲಿ ಒಂದಾಗಿ ಅಭಿಯಾನ ಆರಂಭಿಸಿದ್ದ ಭಾರತ ತಂಡ ಮೊದಲ ಪಂದ್ಯದಲ್ಲೇ ಫ್ರಾನ್ಸ್‌ಗೆ 4-5ರಿಂದ ಶರಣಾಗಿತ್ತು. ಆದರೆ ಈ ಸೋಲಿನಿಂದ ಧೃತಿಗೆಡದ ತಂಡ ಬಳಿಕ ಕೆನಡ ವಿರುದ್ಧ 13-1ರಿಂದ ಗೆದ್ದರೆ, ಪೋಲೆಂಡ್ ತಂಡವನ್ನು 8-2ರಿಂದ ಮಣಿಸಿತ್ತು. ಈ ಮೂಲಕ ಬಿ ಗುಂಪಿನ 2ನೇ ತಂಡವಾಗಿ ನಾಕೌಟ್ ಹಂತಕ್ಕೇರಿತ್ತು.

    3ನೇ ಬಾರಿ ಪ್ರಶಸ್ತಿ ಗೆಲ್ಲುವತ್ತ ಕಣ್ಣಿಟ್ಟಿರುವ ಭಾರತ ತಂಡ ಇನ್ನು ಯಾವುದೇ ಎಡವಟ್ಟು ಮಾಡಿಕೊಳ್ಳಲು ಅವಕಾಶವಿಲ್ಲ. ಬೆಲ್ಜಿಯಂ ವಿರುದ್ಧದ ಪಂದ್ಯ ಕಳೆದ ಆವೃತ್ತಿಯ ಫೈನಲ್ ಪಂದ್ಯದ ಮರುಮುಖಾಮುಖಿ ಆಗಿರಲಿದೆ. 2016ರಲ್ಲಿ ಲಖನೌದಲ್ಲಿ ನಡೆದ ಟೂರ್ನಿಯ ಫೈನಲ್‌ನಲ್ಲಿ ಭಾರತ 2-1ರಿಂದ ಬೆಲ್ಜಿಯಂಗೆ ಸೋಲುಣಿಸಿತ್ತು. ಕಳಿಂಗಾ ಕ್ರೀಡಾಂಗಣದಲ್ಲೂ ಇದೀಗ ಅದೇ ಫಲಿತಾಂಶ ಪುನರಾವರ್ತಿಸುವ ಹಂಬಲ ಭಾರತ ತಂಡದ್ದಾಗಿದೆ.

    ಉತ್ತಮ್ ಸಿಂಗ್, ಅರೈಜೀತ್ ಸಿಂಗ್, ಸುದೀಪ್ ಚಿರ್ಮಕೊ ಮತ್ತು ಮಣಿಂದರ್ ಸಿಂಗ್ ಭಾರತದ ಮುನ್ಪಡೆಯನ್ನು ಮುನ್ನಡೆಸಲಿದ್ದಾರೆ. ಪೆನಾಲ್ಟಿ ಕಾರ್ನರ್ ತಜ್ಞರಾದ ಉಪನಾಯಕ ಸಂಜಯ್ ಕುಮಾರ್, ಶರ್ದಾನಂದ ತಿವಾರಿ ಮತ್ತು ಅಭಿಷೇಕ್ ಲಾಕ್ರಾ ಕೂಡ ಗೋಲಿನ ಬೇಟೆ ಮುಂದುವರಿಸುವ ತವಕದಲ್ಲಿದ್ದಾರೆ. ಸಂಜಯ್ ಇದುವರೆಗೆ ಟೂರ್ನಿಯಲ್ಲಿ 2 ಹ್ಯಾಟ್ರಿಕ್ ಸಹಿತ 8 ಗೋಲು ಸಿಡಿಸಿದ್ದಾರೆ.

    ಮಿಡ್ ಫೀಲ್ಡ್ ವಿಭಾಗದಲ್ಲಿ ನಾಯಕ ವಿವೇಕ್ ಸಾಗರ್ ಪ್ರಸಾದ್ ತಂಡದ ಪ್ರಮುಖ ಬಲವಾಗಿದ್ದಾರೆ. ಟೋಕಿಯೊ ಒಲಿಂಪಿಕ್ಸ್ ಕಂಚು ವಿಜೇತ ತಂಡದ ಭಾಗವಾಗಿದ್ದ ವಿವೇಕ್, ಅನುಭವ ಸಾಕಷ್ಟು ನೆರವಾಗಿದೆ. ಸೀನಿಯರ್ ವಿಭಾಗದಲ್ಲಿ ಬೆಲ್ಜಿಯಂ ತಂಡ ಹಾಲಿ ವಿಶ್ವ ಚಾಂಪಿಯನ್ ಮತ್ತು ಒಲಿಂಪಿಕ್ಸ್ ಚಾಂಪಿಯನ್ ಆಗಿದ್ದರೂ, ಜೂನಿಯರ್ ವಿಭಾಗದಲ್ಲಿ ಇದುವರೆಗೆ ವಿಶ್ವಕಪ್ ಜಯಿಸಿಲ್ಲ. ಆದರೆ ಈ ಬಾರಿ ಹಿರಿಯರ ತಂಡದ ಸಾಧನೆಯನ್ನು ಪುನರಾವರ್ತಿಸುವ ತವಕವನ್ನು ಕಿರಿಯರು ಹೊಂದಿದ್ದಾರೆ.

    ಇಂದಿನ ಕ್ವಾರ್ಟರ್​ಫೈನಲ್ಸ್
    *ಜರ್ಮನಿ-ಸ್ಪೇನ್
    ಆರಂಭ: ಬೆಳಗ್ಗೆ 10.30
    *ನೆದರ್ಲೆಂಡ್ಸ್-ಅರ್ಜೆಂಟೀನಾ
    ಆರಂಭ: ಮಧ್ಯಾಹ್ನ 1.30
    *ಫ್ರಾನ್ಸ್-ಮಲೇಷ್ಯಾ
    ಆರಂಭ: ಸಂಜೆ 4.30
    *ಭಾರತ-ಬೆಲ್ಜಿಯಂ
    ಆರಂಭ: ರಾತ್ರಿ 7.30
    *ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    7ನೇ ಬಾರಿ ಪ್ರತಿಷ್ಠಿತ ಬ್ಯಾಲನ್ ಡಿಓರ್ ಪ್ರಶಸ್ತಿ ಜಯಿಸಿದ ಲಿಯೋನೆಲ್ ಮೆಸ್ಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts