More

    ಪ್ರಧಾನಿ ಮೋದಿ, ಅಡ್ವಾನಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಪತ್ರಕರ್ತ ನಿಖಿಲ್​ ವಾಗ್ಲೆ ಕಾರಿನ ಮೇಲೆ ದಾಳಿ

    ಮುಂಬೈ: ಪ್ರಧಾನಿ ಮೋದಿ ಹಾಗೂ ಮಾಜಿ ಉಪಪ್ರಧಾನಿ ಎಲ್​.ಕೆ. ಅಡ್ವಾನಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಆರೋಪ ಹೊತ್ತಿರುವ ಪತ್ರಕರ್ತ ನಿಖಿಲ್​ ವಾಗ್ಲೆ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಪುಣೆಗೆ ತೆರಳುವಾಗ ವಾಗ್ಲೆ ಅವರ ಕಾರಿನ ಮೇಲೆ ದಾಳಿ ಮಾಡಿರುವ ಘಟನೆ ಶುಕ್ರವಾರ ನಡೆದಿದೆ.

    ದೇಶದ ಅತ್ಯುನ್ನತ ಗೌರವಗಳಲ್ಲಿ ಒಂದಾದ ಭಾರತ ರತ್ನವನ್ನು ಅಡ್ವಾನಿ ಅವರಿಗೆ ಘೋಷಿಸಿದ ಬೆನ್ನಲ್ಲೇ ಪ್ರಧಾನಿ ಮೋದಿ ಹಾಗೂ ಅಡ್ವಾಣಿ ವಿರುದ್ಧ ಮಾತನಾಡಿದ್ದಕ್ಕೆ ವಾಗ್ಲೆ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಶುಕ್ರವಾರ ವಾಹನದ ಮೇಲೆ ಬಿಜೆಪಿ ಕಾರ್ಯಕರ್ತರು ಗುಂಪಾಗಿ ದಾಳಿ ಮಾಡಿದ್ದು, ಕಾರಿನ ವಿಂಡ್‌ಸ್ಕ್ರೀನ್ ಮತ್ತು ಗಾಜುಗಳಿಗೆ ಹಾನಿ ಮಾಡಿದ್ದಾರೆ ಮತ್ತು ಇಡೀ ಕಾರಿನ ಮೇಲೆ ಶಾಯಿ ಎಸೆದಿರುವ ದೃಶ್ಯ ವೈರಲ್​ ಆಗಿರುವ ವಿಡಿಯೋಗಳಲ್ಲಿದೆ.

    ಈ ಘಟನೆಯ ಬಳಿಕ ಪೊಲೀಸರು ಮಧ್ಯಪ್ರವೇಶಿಸುವ ಮೊದಲು ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ (ಎಂವಿಎ) ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಸ್ವಲ್ಪ ಸಮಯದವರೆಗೆ ವಾಗ್ವಾದ ಸಹ ನಡೆಯಿತು. ಈ ಘಟನೆ ಬಳಿಕ ಸ್ಥಳದಲ್ಲೇ ವಾಗ್ಲೆ ತಮ್ಮ ಭಾಷಣ ಮಾಡಿದರು. ನನ್ನ ಮೇಲೆ ಹಲ್ಲೆ ಮಾಡಿದ ಎಲ್ಲರನ್ನು ನಾನು ಕ್ಷಮಿಸುತ್ತೇನೆ. ನನ್ನ ಮೇಲೆ ಆರು ಬಾರಿ ದಾಳಿ ಮಾಡಲಾಗಿತ್ತು ಮತ್ತು ಇದು ಏಳನೇಯದು ಎಂದರು.

    ಶಿವಾಜಿ ಮಹಾರಾಜರಿಂದ ಹಿಡಿದು ಶಾಹೂಜಿ ಮಹಾರಾಜ ಹಾಗೂ ಡಾ.ಬಾಬಾಸಾಹೇಬ್ ಅಂಬೇಡ್ಕರ್ ವರೆಗೆ ಎಲ್ಲವೂ ನಮ್ಮ ಸಂಪ್ರದಾಯ. ನಮ್ಮಲ್ಲಿ ಸಂತರ ಸಂಪ್ರದಾಯವಿದೆ ಎಂದ ವಾಗ್ಲೆ, ಮುಂಬರುವ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಎಂವಿಎಗೆ ಮತ ಹಾಕುವಂತೆ ಪ್ರೇಕ್ಷಕರನ್ನು ಕೇಳಿಕೊಂಡರು.

    ಈ ಘಟನೆಗೂ ಹಿಂದಿನ ದಿನ, ಪ್ರಧಾನಿ ಮತ್ತು ಅಡ್ವಾಣಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಬಿಜೆಪಿ ಮುಖಂಡ ಸುನೀಲ್ ದಿಯೋಧರ್ ಅವರು ವಾಗ್ಲೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವಿಶ್ರಂಬಾಗ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ (IPC) 153A (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 500 (ಮಾನನಷ್ಟ) ಮತ್ತು 505 (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮಾಡುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ವಾಗ್ಲೆ ಮೇಲಿನ ದಾಲಿಯ ಕುರಿತು ಪ್ರತಿಕ್ರಿಯಿಸಿದ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬಣದ ನಾಯಕಿ ಸುಪ್ರಿಯಾ ಸುಳೆ, ಸತ್ಯದ ಧ್ವನಿ ಮತ್ತು ಪತ್ರಿಕೋದ್ಯಮದ ದಾರಿದೀಪವಾದ ನಿಖಿಲ್ ವಾಗ್ಲೆ ಮೇಲಿನ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ. ಇದು ಕೇವಲ ವ್ಯಕ್ತಿಯ ಮೇಲಿನ ಹಲ್ಲೆಯಲ್ಲ ಆದರೆ, ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ. ಬಿಜೆಪಿ ಆಡಳಿತದಲ್ಲಿ ಮಹಾರಾಷ್ಟ್ರದಲ್ಲಿ ಹದಗೆಡುತ್ತಿರುವ ಕಾನೂನು ಮತ್ತು ಸುವ್ಯವಸ್ಥೆಯು ಇಂತಹ ಕೃತ್ಯಗಳನ್ನು ಮೌನವಾಗಿ ಸಕ್ರಿಯಗೊಳಿಸುತ್ತಿರುವುದು ಆತಂಕಕಾರಿಯಾಗಿದೆ ಮತ್ತು ಕಟ್ಟುನಿಟ್ಟಾದ ಹೊಣೆಗಾರಿಕೆ ಬೇಕಿದೆ ಎಂದಿದ್ದಾರೆ. (ಏಜೆನ್ಸೀಸ್​)

    ಮಾಜಿ ಉಪಪ್ರಧಾನಿ ಎಲ್​.ಕೆ. ಅಡ್ವಾಣಿಗೆ ಭಾರತ ರತ್ನ

    UPSC ಪಾಸ್​, ಪೊಲೀಸ್​ ಹೆಂಡ್ತಿ, ಅದ್ಧೂರಿ ಲೈಫ್​: ಆದ್ರೆ ಯಾರನ್ನೂ ಬಿಡಲ್ಲ ಕರ್ಮದ ಫಲ, ಯುವಕ ಜೈಲುಪಾಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts