More

    ಮನಪಾ-ಟ್ರಾಫಿಕ್ ಪೊಲೀಸ್ ಜಂಟಿ ಕಾರ್ಯಾಚರಣೆ

    ಮಂಗಳೂರು: ನಗರಕ್ಕೆ ಸಂಬಂಧಿಸಿದ ಟ್ರಾಫಿಕ್ ವಿಚಾರಗಳ ಕುರಿತು ನಿರಂತರವಾಗಿ ಸಲಹೆ ಹಾಗೂ ಕಾರ್ಯಾಚರಣೆಗೆ ಪೂರಕವಾಗಿ ತಂಡ ಮತ್ತು ವಾಹನವನ್ನು ಮಂಗಳೂರು ಮಹಾನಗರಪಾಲಿಕೆ ಒದಗಿಸುವುದು ಸೂಕ್ತ ಎಂದು ಮಂಗಳೂರು ಡಿಸಿಪಿ(ಅಪರಾಧ ಮತ್ತು ಸಂಚಾರ) ವಿನಯ್‌ಗಾಂವ್ಕರ್ ಸಲಹೆ ನೀಡಿದರು. ಮಂಗಳೂರು ಮೇಯರ್ ದಿವಾಕರ್ ಅಧ್ಯಕ್ಷತೆಯಲ್ಲಿ ಮಂಗಳವಾರ ಮಂಗಳೂರಿನ ಸಂಚಾರಿ ಸಮಸ್ಯೆಗಳ ಕುರಿತು ನಡೆಸಲಾದ ಸಭೆಯಲ್ಲಿ ಮಾತನಾಡಿದರು.

    ಟ್ರಾಫಿಕ್ ತಜ್ಞರು ಅಗತ್ಯ: ಬೆಂಗಳೂರಿನಲ್ಲಿ ಸಂಚಾರಿ ಸಮಸ್ಯೆಗಳು, ಯೋಜನೆಗಳ ಬಗ್ಗೆ ಸಲಹೆ ನೀಡುವುದಕ್ಕೆ ಬಿಬಿಎಂಪಿಯಲ್ಲಿ ಟ್ರಾಫಿಕ್ ಇಂಜಿನಿಯರಿಂಗ್ ತಜ್ಞರಿದ್ದಾರೆ. ಯಾವುದೇ ಪಾರ್ಕಿಂಗ್ ರೆನ್, ವೃತ್ತ ಹಾಗೂ ಜಂಕ್ಷನ್ ಸುಧಾರಣೆ, ಫುಟ್‌ಪಾತ್ ಇತ್ಯಾದಿ ವಿಚಾರಗಳು ಬಂದಾಗ ಅವರಿಂದ ಸಲಹೆ ಪಡೆದುಕೊಳ್ಳಲಾಗುತ್ತದೆ. ಅದೇ ಮಾದರಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯಲ್ಲೂ ತಜ್ಞರಿದ್ದರೆ ಉತ್ತಮ. ಅಲ್ಲದೆ ಮನಪಾ, ಸ್ಮಾರ್ಟ್‌ಸಿಟಿ ಹಾಗೂ ಸಂಚಾರಿ ಪೊಲೀಸರ ಸಲಹಾ ಸಮಿತಿ ಸಭೆಯನ್ನು ಆಗಾಗ ನಡೆಸುವ ಮೂಲಕ ಹೊಂದಾಣಿಕೆಯಿಂದ ಅನೇಕ ಸಮಸ್ಯೆಗಳನ್ನು ಇತ್ಯರ್ಥಪಡಿಸಬಹುದು ಎಂದರು.

    ಜಂಟಿ ಸಮೀಕ್ಷೆ: ಅತಿಕ್ರಮಣ ತೆರವು ಮಾಡುವುದಕ್ಕೆ ನಾವು ಸಿದ್ಧರಿದ್ದೇವೆ. ಅದಕ್ಕಾಗಿ ನಮಗೆ ಮನಪಾದಿಂದ ಒಂದು ತಂಡ ಹಾಗೂ ವಾಹನ ವ್ಯವಸ್ಥೆ ಮಾಡಿಕೊಡಬೇಕು ಎಂದ ಅವರು ನೋ ಪಾರ್ಕಿಂಗ್ ಹಾಗೂ ಪಾರ್ಕಿಂಗ್ ವಲಯಗಳ ಬಗ್ಗೆ ಮನಪಾ ಹಾಗೂ ಪೊಲೀಸ್ ಇಲಾಖೆಯಿಂದ ಜಂಟಿ ಸಮೀಕ್ಷೆ ಕೈಗೊಳ್ಳಲಾಗುವುದು ಎಂದರು. ನಗರದಲ್ಲಿ ಸದ್ಯ 171 ಹಳೇ ಸಿಸಿಟಿವಿ ಕ್ಯಾಮರಾಗಳಿವೆ. ಅವುಗಳನ್ನು ಬದಲಾಯಿಸಬೇಕಾದ ಸ್ಥಿತಿ ಇದೆ. ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಸುರಕ್ಷತೆ ಹಾಗೂ ಸಂಚಾರ ಸುಧಾರಣೆಗೆ ಸಿಸಿಟಿವಿ ಕ್ಯಾಮರಾ ಅಳವಡಿಸುವ ಬಗ್ಗೆ ಅನುದಾನ ಲಭಿಸಲಿದ್ದು, ಅದನ್ನು ಬಳಕೆ ಮಾಡಿಕೊಳ್ಳಲಾಗುವುದು ಎಂದರು. ಉಪಮೇಯರ್ ವೇದಾವತಿ, ಮನಪಾ ಆಯುಕ್ತ ಅಕ್ಷಿ ಶ್ರೀಧರ್, ಸದಸ್ಯರಾದ ಪ್ರೇಮಾನಂದ ಶೆಟ್ಟಿ, ಅಬ್ದುಲ್ ರವೂಫ್ ಹಾಜರಿದ್ದರು.

    ಮೊದಲ ಸಭೆಯಲ್ಲಿ ಹರಿದು ಬಂದ ದೂರು: ಸಂಚಾರಿ ಸಮಸ್ಯೆ ಕುರಿತು ನಡೆದ ಪ್ರಥಮ ಸಭೆ ಇದಾಗಿದ್ದು, ಕಾರ್ಪೊರೇಟರ್‌ಗಳಿಂದ ದೂರಿನ ಸುರಿಮಳೆ ಕೇಳಿಬಂತು. ವೀರನಗರ, ಫೈಸಲ್ ನಗರದ ಕಡೆಗೆ ಸಿಟಿ ಬಸ್ ಸರಿಯಾಗಿ ಸಂಚರಿಸದೆ ಜನರಿಗೆ ಕಷ್ಟವಾಗಿದೆ. ಬಸ್‌ಗಳು ಟ್ರಿಪ್ ಕಟ್ ಮಾಡುತ್ತಿವೆ ಎಂದು ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದರು. ನವೀನ್ ಡಿಸೋಜ ಮಾತನಾಡಿ, ಟೋಯಿಂಗ್ ಮಾಡುವುದು ತಪ್ಪಲ್ಲ, ಆದರೆ ಅದರ ಸಿಬ್ಬಂದಿ ವರ್ತನೆ ಸರಿಯಿಲ್ಲ. ಜನರಲ್ಲಿ ಕೆಟ್ಟದಾಗಿ ಮಾತನಾಡುತ್ತಾರೆ. ಅದಕ್ಕೆ ಕಡಿವಾಣ ಹಾಕಬೇಕು. ವಾಹನ ಹೊತ್ತೊಯ್ಯುವಾಗ ಹಾನಿಯಾಗದಂತೆ ನೋಡಬೇಕು. ನೋ ಪಾರ್ಕಿಂಗ್ ರೆನ್‌ಗೆ ಮಾರ್ಕಿಂಗ್ ಮಾಡಬೇಕು ಎಂದು ಒತ್ತಾಯಿಸಿದರು. ಮನೋಹರ್ ಕದ್ರಿ ಮಾತನಾಡಿ, ತನ್ನ ವಾರ್ಡ್ ವ್ಯಾಪ್ತಿಯಲ್ಲಿ ಎರಡು ಆಸ್ಪತ್ರೆಗಳಿವೆ. ಮೆಡಿಕಲ್ ಇದೆ. ಅಲ್ಲಿಗೆ ಬರುವವರು ಸಮಸ್ಯೆ ಇರುವವರಾಗಿರುತ್ತಾರೆ. ಅಲ್ಲಿ ಟೋಯಿಂಗ್ ಮಾಡುವಾಗ ಸ್ವಲ್ಪ ಅನುಕಂಪ ಇರಲಿ ಎಂದು ಸಲಹೆಯಿತ್ತರು.
    ಅಂಬೇಡ್ಕರ್ ವೃತ್ತದಲ್ಲಿ ಪಾದಚಾರಿಗಳಿಗೆ ರಸ್ತೆ ದಾಟುವುದಕ್ಕೆ ಝೀಬ್ರಾ ಕ್ರಾಸ್ ಇಲ್ಲದೆ ಸಮಸ್ಯೆಯಾಗಿದೆ. ಝೀಬ್ರಾ ಕ್ರಾಸ್ ಹಾಕಬೇಕು ಎಂದು ವಿನಯರಾಜ್ ಹೇಳಿದರೆ, ಕೋಡಿಕಲ್ ಕ್ರಾಸ್ ಅಪಾಯಕಾರಿ ಜಂಕ್ಷನ್ ಆಗಿ ಬದಲಾಗಿದೆ. ಅಲ್ಲಿ ಬಸ್ ನಿಲ್ದಾಣವಿಲ್ಲ. ಬಸ್‌ಗಳನ್ನು ಜಂಕ್ಷನ್‌ನಲ್ಲೇ ನಿಲ್ಲಿಸುವುದರಿಂದ ಅಪಘಾತ ಉಂಟಾಗುತ್ತಿದೆ. ತುರ್ತಾಗಿ ಬಸ್ ನಿಲ್ದಾಣವಾಗಬೇಕಿದೆ ಎಂದರು. ಕಂಕನಾಡಿ ಭಾಗದಲ್ಲಿ ಕಾಮಗಾರಿಗಳು ನಡೆಯುತ್ತಿದ್ದು, ಅನೇಕ ಉದ್ಯೋಗಿಗಳು ಪಾರ್ಕಿಂಗ್ ಜಾಗವಿಲ್ಲದೆ ರಸ್ತೆ ಬದಿ ವಾಹನ ನಿಲ್ಲಿಸಿದರೆ ಅದನ್ನೂ ಟೋಯಿಂಗ್ ಮಾಡಲಾಗುತ್ತಿರುವುದು ಸರಿಯಲ್ಲ. ಕಾಮಗಾರಿ ಮುಗಿಯುವವರೆಗೆ ಅಲ್ಲಿ ಟೋಯಿಂಗ್ ಬೇಡ ಎಂದರು. ಜಿಎಚ್‌ಎಸ್ ರಸ್ತೆಯಲ್ಲಿ ಹಂಪ್ಸ್ ಬೇಕು ಹಾಗೂ ಬಂದರು ರಸ್ತೆಗಳಲ್ಲಿ ಲಾರಿಗಳು ಇಕ್ಕೆಲಗಳಲ್ಲೂ ನಿಂತು ಸಂಚಾರ ದಟ್ಟಣೆಯಾಗುತ್ತಿರುವ ಬಗ್ಗೆ ಪೂರ್ಣಿಮಾ ಗಮನ ಸೆಳೆದರು.

    ಟೈಗರ್ ಕಾರ್ಯಾಚರಣೆಗೆ ನಿರ್ದೇಶನ: ನಗರದ ಹಲವು ಕಡೆಗಳಲ್ಲಿ ಫುಟ್‌ಪಾತ್ ಮತ್ತು ರಸ್ತೆಯನ್ನು ಅತಿಕ್ರಮಿಸಿಕೊಂಡು ವ್ಯಾಪಾರ ನಡೆಯುತ್ತಿರುವುದರ ಬಗ್ಗೆ ಅನೇಕ ದೂರು ಬಂದ ಹಿನ್ನೆಲೆಯಲ್ಲಿ ಟೈಗರ್ ಕಾರ್ಯಾಚರಣೆಯನ್ನು ಕಟ್ಟುನಿಟ್ಟಾಗಿ ಕೈಗೊಳ್ಳಬೇಕು ಎಂದು ಮೇಯರ್ ದಿವಾಕರ್ ಅಧಿಕಾರಿಗಳಿಗೆ ನಿರ್ದೇಶನವಿತ್ತರು. ಯಾವುದೇ ಮುಲಾಜು ಬೇಡ, ಕೇಂದ್ರದ ನೆರವಿನಲ್ಲಿ ಸಾಲ ನೀಡಿರುವುದು ಅವರು ತಳ್ಳುಗಾಡಿಯಲ್ಲಿ ಓಡಾಡುತ್ತಾ ವ್ಯಾಪಾರ ಮಾಡುವುದಕ್ಕೆ ಹೊರತು, ಒಂದೇ ಕಡೆ ನಿಂತು ಸಂಚಾರಕ್ಕೆ ಅಡ್ಡಿಪಡಿಸುವುದಕ್ಕೆ ಅಲ್ಲ. ಸರ್ವಿಸ್ ಬಸ್ ನಿಲ್ದಾಣದಲ್ಲಿ ಬಸ್‌ಗಳ ಓಡಾಟಕ್ಕೂ ಆಗದಂತೆ ಗೂಡಂಗಡಿ ಹಾಕಿರುವುದು ಗಮನಕ್ಕೆ ಬಂದಿದೆ. ಅದನ್ನು ತೆರವುಗೊಳಿಸಿ, ಯಾವುದೇ ಕಾರ್ಪೊರೇಟರ್‌ಗಳು ಇದರ ಪರವಾಗಿ ಶಿಫಾರಸು ಮಾಡಿದರೂ ಅದನ್ನು ಲೆಕ್ಕಿಸಬೇಡಿ ಎಂದು ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts