More

    ನನ್ನ ಸಾವಿನ ಘೋಷಣೆಯೊಂದೇ ಬಾಕಿ ಇತ್ತು, ನಡೆಯಿತು ಪವಾಡ ಎಂದ ಪ್ರಧಾನಿ!

    ಲಂಡನ್‌: ಅವು ಕರಾಳ ದಿನಗಳು. ಲೀಟರ್​ಗಟ್ಟಲೆ ಆಕ್ಸಿಜನ್​ ನನ್ನ ದೇಹ ಸೇರುತ್ತಲೇ ಇದ್ದವು, ಸುತ್ತಲೂ ವೈದ್ಯರು. ಅವರ ಮೊಗದಲ್ಲಿ ಆತಂಕದ ಛಾಯೆ, ಚಿಕಿತ್ಸೆ ಮುಂದುವರೆದಿತ್ತು. ಆದರೆ ಅವರ ಮುಖದಲ್ಲಿ ಯಾವುದೇ ಭರವಸೆಗಳೂ ಇರಲಿಲ್ಲ. ಪರಿಸ್ಥಿತಿ ಕೈಮೀರಿ ಹೋಗಿತ್ತು, ವೈದ್ಯರೂ ಕೈಚೆಲ್ಲಿ ಬಿಟ್ಟರು. ಇನ್ನೇನು ನನ್ನ ಉಸಿರು ನಿಲ್ಲುತ್ತಲಿತ್ತು. ನನ್ನ ಸಾವಿನ ಘೋಷಣೆ ಮಾಡಲು ಸಕಲ ಸಿದ್ಧತೆಯನ್ನೂ ವೈದ್ಯರು ಮಾಡಿಕೊಂಡಿದ್ದರು. ಆದರೆ ಈಗ ನಿಮ್ಮ ಮುಂದೆ ನಾನಿದ್ದೇನೆ…

    ಕರೊನಾ ಸೋಂಕಿನ ಕರಾಳ ದಿನಗಳನ್ನು ಸಂದರ್ಶನವೊಂದರಲ್ಲಿ ಈ ರೀತಿ ಬಿಚ್ಚಿಟ್ಟವರು ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸ್​ನ್​. ಸಾವಿನ ಬಾಯಿಗೆ ಹೋಗಿ ಅಲ್ಲಿಂದ ವಾಪಸ್​ ಬಂದು, ಈಗ ಕರ್ತವ್ಯಕ್ಕೆ ಹಾಜರಾಗಿರುವ ಪ್ರಧಾನಿ, ತಮ್ಮ ಆಸ್ಪತ್ರೆಯ ದಿನಗಳನ್ನು ಭಾವುಕರಾಗಿ ನೆನಪಿಸಿಕೊಂಡರು.

    ಇದನ್ನೂ ಓದಿ: ಕರೊನಾ ಸೋಂಕಿನಿಂದ ಚೇತರಿಸಿಕೊಂಡ ಪ್ರಧಾನಿ ಕೆಲಸಕ್ಕೆ ಹಾಜರ್​

    ‘ಕಾಯಿಲೆಯನ್ನು ಎದುರಿಸಿದ ಸನ್ನಿವೇಶ ಬಹಳ ಕಠಿಣ ಕ್ಷಣಗಳಾಗಿದ್ದವು, ನಾನು ಬದುಕುವುದೇ ಕಷ್ಟ ಎನ್ನುವ ಪರಿಸ್ಥಿತಿ ಇತ್ತು. ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ ಎಂಬ ಅರಿವಾಗಿದದ್ದೇ ತಡ, ನನ್ನ ಸಾವಿನ ಸಂಗತಿಯನ್ನು ಘೋಷಣೆ ಮಾಡಲು ವೈದ್ಯರು ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು. ಒಂದು ವೇಳೆ ಪರಿಸ್ಥಿತಿ ಕೈ ಮೀರಿ ಹೋದರೆ ಏನು ಮಾಡಬೇಕು ಎಂಬುದರ ಬಗ್ಗೆ ವೈದ್ಯರು ಚರ್ಚಿಸುತ್ತಿದ್ದರು. ಸಾವಿನ ಘೋಷಣೆ ಮಾಡಲು ಸಿದ್ಧತೆಗಳು ನಡೆಯುತ್ತಿವೆ ಎಂದು ನನಗೆ ಅರಿವಾಗಿತ್ತು ಎಂದು ಅವರು ಹೇಳಿದ್ದಾರೆ.

    ತಾವು ಬದುಕುತ್ತೇವೆ ಎಂಬ ಸಂಪೂರ್ಣ ವಿಶ್ವಾಸ ತಮ್ಮ ಮೇಲೆ ಇತ್ತು ಎಂದು ಹೇಳಿಕೊಂಡಿರುವ ಪ್ರಧಾನಿ, ವೈದ್ಯರು ನನ್ನ ಮೇಲಿನ ಭರವಸೆ ಬಿಟ್ಟರೇನಂತೆ? ಈ ಸೋಂಕಿನಿಂದ ಪಾರಾಗುವುದು ಹೇಗೆ ಎಂದು ಸದಾ ಚಿಂತಿಸುತ್ತಿದ್ದ ನಾನು, ಎಂದಿಗೂ ಸಾಯುವ ಬಗ್ಗೆ ಯೋಚನೆಯನ್ನೇ ಮಾಡಲಿಲ್ಲ. ನನಗೆ ಲೀಟರ್‌ಗಟ್ಟಲೆ ಆಕ್ಸಿಜನ್‌ ಪೂರೈಕೆ ಮಾಡಲಾಗುತ್ತಿತ್ತು. ಅಲ್ಲಿಯ ವಾತಾವರಣ ತುಂಬಾ ಬಿಗುವಿನಿಂದ ಕೂಡಿತ್ತು. ಐಸಿಯುಗೆ ಸ್ಥಳಾಂತರಿಸಿದಾಗ ಆಕ್ಸಿಜನ್‌ ವ್ಯವಸ್ಥೆಯಲ್ಲಿಡಬೇಕೆ ಬೇಡವೇ ಎಂದು ವೈದ್ಯರು ಚರ್ಚಿಸುತ್ತಿದ್ದರು. ಅದು ನನಗೆ ತಿಳಿದಾಗ ನನ್ನ ಸಾವಿನ ಘೋಷಣೆಯ ಸಿದ್ಧತೆ ನಡೆದಿದೆ ಎಂಬ ಅರಿವಾಯಿತು. ಆದರೆ ನಾನು ಮಾತ್ರ ದೃಢವಾಗಿದ್ದೆ. ನನ್ನ ವಿಶ್ವಾಸ ಗೆದ್ದಿತು. ಪವಾಡಸದೃಶವಾಗಿ ನಾನು ಬದುಕಿದೆ. ವೈದ್ಯರ ಶ್ರಮ ಸಾರ್ಥಕವಾಯಿತು ಎಂದು ಭಾವುಕರಾದರು ಪ್ರಧಾನಿ ಬೋರಿಸ್​.

    ಇದನ್ನೂ ಓದಿ: ವಾಸನೆಯಿಂದ ಕರೊನಾ ಪರೀಕ್ಷೆ ಮಾಡಲು ಬರ್ತಿವೆ ಶ್ವಾನಗಳು! ಇನ್ನು ನಾಯಿಗಳದ್ದೇ ಕಾರುಬಾರು…

    ಕರೊನಾ ಸೋಂಕು ನನ್ನನ್ನು ಬಾಧಿಸಿದೆ ಎಂದು ತಿಳಿದಾಗ ಶುರುವಿನಲ್ಲಿ ಆಸ್ಪತ್ರೆಗೆ ದಾಖಲಾಗದು ನಿರಾಕರಿಸಿದ್ದೆ. ಆಕ್ಸಿಜನ್ ಪ್ರಮಾಣ ನನ್ನ ದೇಹದಲ್ಲಿ ಕಡಿಮೆಯಾಗಿದೆ ಎಂದು ವೈದ್ಯರು ತಿಳಿಸಿ ದಾಖಲಾಗುವಂತೆ ಹೇಳಿದಾಗಲೇ ನಾನು ಒಪ್ಪಿಕೊಂಡದ್ದು. ಒಂದು ವೇಳೆ ದಾಖಲಾಗದೇ ಹೋಗಿದ್ದರೆ ಬಹುಶಃ ಇಂದು ನಾನು ನಿಮ್ಮ ಮುಂದೆ ಇರುತ್ತಿರಲಿಲ್ಲ ಎಂದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts