More

    ಮೂರು ಪಕ್ಷದವರಿಂದಲೂ ಅಪಪ್ರಚಾರ: ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಆರೋಪ

    ಮಂಡ್ಯ: ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಯವರಿಂದ ನನ್ನ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ಆದರೆ ಮುಂಬರುವ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಹೇಳಿದರು.
    ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ಬೆಂಬಲಿಗರು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ವೆಂಕಟೇಶ್ ಮನವೊಲಿಸಲಿದ್ದಾರೆ. ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ವದಂತಿ ಹಬ್ಬಿಸಿದ್ದಾರೆ. ಅತ್ತ ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ಹಾಗೂ ಬಿಜೆಪಿ ಮುಖಂಡ ಸಚ್ಚಿದಾನಂದ ಅವರು ನಮಗೆ ಬೆಂಬಲ ಸೂಚಿಸುತ್ತಾರೆಂದು ಹೇಳುವ ಮೂಲಕ ಕ್ಷೇತ್ರದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.
    30 ವರ್ಷದಿಂದ ಜೆಡಿಎಸ್‌ನ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿಯುತ್ತಿದ್ದೇನೆ. ಹಾಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರ ಗೆಲುವಿನಲ್ಲಿ ನನ್ನ ಪರಿಶ್ರಮವಿದೆ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠರು ಅವಕಾಶ ಕಲ್ಪಿಸಲಿದ್ದಾರೆ ಎಂಬ ವಿಶ್ವಾಸವಿದೆ. ಅವಕಾಶ ಸಿಗಲಿ ಅಥವಾ ಸಿಗದಿರಲಿ ನನ್ನ ಸ್ಪರ್ಧೆ ಖಚಿತ ಎಂದು ಸ್ಪಷ್ಟಪಡಿಸಿದರು.
    ನಾನು ಹಣಕ್ಕೆ ವ್ಯಾಪಾರವಾಗುವ ವ್ಯಕ್ತಿಯಲ್ಲ. ತತ್ವ ಸಿದ್ಧಾಂತ, ಮಾನವೀಯ ಮೌಲ್ಯಗಳಿಂದ ಜನ ಸೇವೆ ಮಾಡಿಕೊಂಡು ಹಂತ-ಹಂತವಾಗಿ ಬೆಳೆದಿದ್ದೇನೆ. ನನಗೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ. ಕ್ಷೇತ್ರದ ಮೂರು ಪಕ್ಷಗಳ ಸಂಭವನೀಯ ಅಭ್ಯರ್ಥಿಗಳು ನನ್ನೊಟ್ಟಿಗೆ ಪಕ್ಷೇತರವಾಗಿ ಸ್ಪರ್ಧಿಸಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲಿ. ಅವರಿಗಿಂತ ಒಂದು ಮತ ಕಡಿಮೆ ಪಡೆದರೂ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಸವಾಲು ಹಾಕಿದರು.
    ಕ್ಷೇತ್ರದಲ್ಲಿ ಎರಡು ಕುಟುಂಬದ ರಾಜಕೀಯ ಪಾರುಪತ್ಯದಿಂದ ಕ್ಷೇತ್ರದ ಜನ ಬೇಸತ್ತಿದ್ದಾರೆ. ಒಂದೇ ಕುಟುಂಬದ ತಲಾ ಮೂವರು ಶಾಸಕರಾಗಿದ್ದಾರೆ. ಇದರಿಂದ ಜನತೆ ಹೊಸ ನಾಯಕತ್ವಕ್ಕೆ ಹಂಬಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾನೂ ಯಾವುದೇ ಆಸೆ, ಆಮಿಷಕ್ಕೆ ಬಲಿಯಾಗದೆ ಚುನಾವಣೆಗೆ ಸ್ಪರ್ಧಿಸುವುದು ಖಚಿತ ಎಂದು ಸ್ಪಷ್ಟಪಡಿಸಿದರು.
    ತಾಪಂ ಮಾಜಿ ಸದಸ್ಯ ಮುರಳಿ, ಹನಿಯಂಬಾಡಿ ಸುರೇಶ್, ಸಿದ್ದರಾಜು, ಸಂತೆಕಸಲಗೆರೆ ಜಗದೀಶ್, ಮಂಜು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts