More

    ಜೆಡಿಎಸ್‌ನಿಂದ ಚುನಾವಣಾ ತಂತ್ರಗಾರಿಕೆ; ಮಂಡ್ಯದ ಮುಖಂಡರಿಗೇ ಪ್ರಚಾರದ ಜವಾಬ್ದಾರಿ

    ಬೆಂಗಳೂರು: ಟೀಕೆ-ಟಿಪ್ಪಣಿ, ಆರೋಪ-ಪ್ರತ್ಯಾರೋಪ, ಘಟಾನುಘಟಿ ನಾಯಕರ ಚುನಾವಣಾ ಪ್ರಚಾರ, ಸ್ಥಳೀಯ ಅಸ್ಮಿತೆಗಳಿಂದ ಮಂಡ್ಯ ಲೋಕಸಭಾ ಚುನಾವಣೆ ರಂಗೇರಿದೆ.

    ಕಾಂಗ್ರೆಸ್ ಶಾಸಕರು ಮೈತ್ರಿ ಅಭ್ಯರ್ಥಿ ವಿರುದ್ಧ ಸೆಡ್ಡು ಹೊಡೆದು ಜಿಲ್ಲೆಯಲ್ಲೇ ಠಿಕಾಣಿ ಹೂಡೆದು ನಿಂತಿದ್ದಾರೆ. ಮೈತ್ರಿ ಅಭ್ಯರ್ಥಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸೋಲಿಸಲೇಬೇಕು ಎಂದು ಪಣ ತೊಟ್ಟಿದ್ದಾರೆ. ಅದಕ್ಕಾಗಿ ಇಡೀ ಜಿಲ್ಲೆ ಶಾಸಕರು ಭದ್ರ ಕೋಟೆ ನಿರ್ಮಿಸಿದ್ದಾರೆ.

    ಇನ್ನೊಂದೆಡೆ ಕುಮಾರಸ್ವಾಮಿ ಕೂಡ ಹೊಸ ಹೊಸ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಜೆಡಿಎಸ್ ಪಕ್ಷ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವುದರಿಂದ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೂ ಕುಮಾರಸ್ವಾಮಿ ಟೊಂಕ ಕಟ್ಟಿ ನಿಲ್ಲಬೇಕಿದೆ. ಹಾಗಾಗಿ ಮಂಡ್ಯ ಕ್ಷೇತ್ರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಸಮಯ ಮೀಸಲಿಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಚುನಾವಣಾ ಪ್ರಚಾರಕ್ಕೆ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ.

    ನಿಖಿಲ್ ಪ್ರಚಾರ ಬಲು ಜೋರು

    ಜಿಲ್ಲಾ ಕೇಂದ್ರ ಮತ್ತು ತಾಲೂಕು ಮಟ್ಟದಲ್ಲಿ ಮಾತ್ರ ಕುಮಾರಸ್ವಾಮಿ ತಮ್ಮ ಪ್ರಚಾರವನ್ನು ಸೀಮಿತಗೊಳಿಸಿಕೊಂಡಿದ್ದಾರೆ. ಉಳಿದಂತೆ ಪುತ್ರ ನಿಖಿಲ್ ಕುಮಾರಸ್ವಾಮಿ ಹೋಬಳಿ ಮಟ್ಟಕ್ಕೆ ಇಳಿದು ಪ್ರಚಾರ ಮಾಡಲಿದ್ದಾರೆ. ಜೆಡಿಎಸ್ ಮಾಜಿ ಸಚಿವರು, ಕೆ.ಆರ್.ಪೇಟೆ ಶಾಸಕರು, ಮಾಜಿ ಶಾಸಕರು, ಪಕ್ಷದ ಪದಾಧಿಕಾರಿಗಳಿಗೆ ಬೂತ್ ಮಟ್ಟದಲ್ಲಿ ಪ್ರಚಾರದ ಜವಾಬ್ದಾರಿ ನೀಡಲಾಗಿದೆ.

    ಕೇಡರ್ ಆಧಾರದಲ್ಲಿ ಪ್ರಚಾರದ ಉಸ್ತುವಾರಿ

    ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿಗಳ ಪರ ರಾಜ್ಯಾದ್ಯಂತ ಪ್ರಚಾರ ಮಾಡಬೇಕಾಗಿರುವುದರಿಂದ ಮಂಡ್ಯದಲ್ಲಿ ಒಂದು ಸುತ್ತು ಅಥವಾ ಎರಡು ಸುತ್ತಿನ ಪ್ರಚಾರಕ್ಕೆ ಮಾತ್ರ ಸೀಮಿತಗೊಳಿಸಿಕೊಂಡಿದ್ದಾರೆ. ಉಳಿದಂತೆ ಪಕ್ಷದ ಕೇಡರ್ ಬೇಸ್ ಪದಾಧಿಕಾರಿಗಳಿಗೆ ಪ್ರಚಾರದ ಉಸ್ತುವಾರಿಯನ್ನು ನೀಡಲು ತಂತ್ರಗಾರಿಕೆ ರೂಪಿಸಿದ್ದಾರೆ.

    ಬೂತ್ ಮಟ್ಟದಲ್ಲಿ ಪ್ರಚಾರಕ್ಕೆ ತಂತ್ರಗಾರಿಕೆ

    ತಳ ಮಟ್ಟದಲ್ಲಿ ಪಕ್ಷದ ಬಲವನ್ನು ಹೆಚ್ಚಿಸಲು ಹಾಗೂ ಪ್ರತಿ ಮನೆಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಸಿಎಂ ಆಗಿ ನೀಡಿದ ಕೊಡುಗೆಗಳನ್ನು ಜನರ ಮುಂದಿಡುವ ಜವಾಬ್ದಾರಿಯನ್ನು ಕೆಳ ಹಂತದ ಮುಖಂಡರಿಗೆ ನೀಡಲು ನಿರ್ಧರಿಸಲಾಗಿದೆ.
    ಕಳೆದ ಚುನಾವಣೆಯಲ್ಲಿ ಮಗ ನಿಖಿಲ್ ಕುಮಾರಸ್ವಾಮಿ ಸೋಲನ್ನು ಸವಾಲಾಗಿ ತೆಗೆದುಕೊಂಡಿರುವ ಕುಮಾರಸ್ವಾಮಿ ತಮ್ಮ ಗೆಲುವಿಗೆ ಬೇಕಾದ ತಂತ್ರಗಾರಿಕೆಯನ್ನು ತಮ್ಮ ಬತ್ತಳಿಕೆಯಿಂದ ಹೊರ ತೆಗೆಯುತ್ತಿದ್ದಾರೆ. ಇದಕ್ಕೆ ಕೌಂಟರ್ ಕೊಡುವ ರೀತಿಯಲ್ಲಿ ಕಾಂಗ್ರೆಸ್ ಕೂಡ ಪ್ರತಿ ಹೆಜ್ಜೆ ಹೆಜ್ಜೆಗೂ ಜೆಡಿಎಸ್‌ಗೆ ಸವಾಲು ಒಡ್ಡುತ್ತಲೇ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts