More

    ಸೋಂಕು ಕಡಿಮೆಯಾದ್ರೆ ಲಾಕ್‌ಡೌನ್ ಸಡಿಲ ; ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸುಳಿವು

    ತುಮಕೂರು: ಮುಂದಿನ ಒಂದು ವಾರದಲ್ಲಿ ನಿರೀಕ್ಷೆಯಂತೆ ಜಿಲ್ಲೆಯ ಎಲ್ಲ ತಾಲೂಕಿನಲ್ಲಿಯೂ ಕರೊನಾ ಸೋಂಕು ನಿಯಂತ್ರಣಕ್ಕೆ ಬಂದರೆ ಲಾಕ್‌ಡೌನ್ ತೆರವುಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಅಧಿಕಾರಿಗಳ ಜತೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಜಿಲ್ಲಾಡಳಿತದ ನಿರೀಕ್ಷೆಯಂತೆ ಕರೊನಾ ನಿಯಂತ್ರಣಕ್ಕೆ ಬಂದಿಲ್ಲ. ಈಗಲೂ ಇರುವ ಕೆಂಪು ವಲಯ ಮತ್ತು ಹಾಟ್‌ಸ್ಪಾಟ್ ಪ್ರದೇಶಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬಂದ ಬಳಿಕ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ತೆರವು ಸಾಧ್ಯ ಎಂದರು.

    ಸೋಂಕಿತರ ಸಂಖ್ಯೆ ಹೆಚ್ಚಳದಿಂದಾಗಿ ಶಿರಾ ತಾಲೂಕು ಸೇರಿ ಉಳಿದ ತಾಲೂಕುಗಳ ಭಾಗಗಳು ಕೆಂಪು ವಲಯ ಹಾಗೂ ಹಾಟ್‌ಸ್ಪಾಟ್ ಪ್ರದೇಶಗಳನ್ನಾಗಿ ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ಸೋಂಕು ನಿಯಂತ್ರಣಕ್ಕೆ ತಂದು ಆ ಪ್ರದೇಶಗಳನ್ನು ಕೆಂಪುವಲಯ ಹಾಗೂ ಹಾಟ್‌ಸ್ಪಾಟ್‌ಗಳಿಂದ ಮುಕ್ತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಆರ್‌ಸಿಎಚ್ ಅಧಿಕಾರಿ ಡಾ.ಕೇಶವರಾಜ್ ಮಾಹಿತಿ ನೀಡಿ, ಜಿಲ್ಲೆಗೆ ಪೂರೈಕೆಯಾಗುತ್ತಿರುವ ಲಸಿಕೆಯನ್ನು ತಾಲೂಕುವಾರು ಜನಸಂಖ್ಯೆಗೆ ಅನುಗುಣವಾಗಿ ಲಸಿಕಾಕರಣ ಕಾರ್ಯ ವಾಡಲಾಗುತ್ತಿದೆ. ಯಾವುದೇ ಸಮಸ್ಯೆಯಾಗದಂತೆ ಲಸಿಕಾ ಕಾರ್ಯ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಲಸಿಕೆ ಪೂರೈಕೆಯಾಗುವ ಸಾಧ್ಯತೆಯಿದೆ ಎಂದರು,

    ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸುರೇಶ್‌ಬಾಬು ಮಾತನಾಡಿ, ಜಿಲ್ಲೆಯಲ್ಲಿ ಪತ್ತೆಯಾಗಿರುವ ಬ್ಲಾಕ್ ಫಂಗಸ್ ರೋಗಿಗಳಿಗೆ ಸೂಕ್ತವಾಗಿ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆ ಅವಶ್ಯಕವಿದ್ದಲ್ಲಿ ಬೆಂಗಳೂರಿಗೆ ಕಳುಹಿಸಲಾಗುತ್ತಿದೆ, ಜಿಲ್ಲೆಗೆ ಹೆಚ್ಚಿನ ಔಷಧ ಲಭ್ಯತೆಯ ಅವಶ್ಯಕವಿದೆ ಎಂದರು.

    ಮೂರನೇ ಅಲೆ ಮಕ್ಕಳಿಗೆ ಹೆಚ್ಚಾಗಿ ತಗುಲುವ ನಿರೀಕ್ಷೆಯಿದೆ ಹಾಗಾಗಿ, ಎಲ್ಲ ಅಧಿಕಾರಿಗಳೂ ಸಮನ್ವಯ ಸಾಧಿಸಿ ಚಿಕಿತ್ಸೆಗೆ ಕೊರತೆಯುಂಟಾಗದಂತೆ ಎಚ್ಚರಿಕೆ ವಹಿಸಬೇಕು. ಹೆಚ್ಚು ನಿಗಾವಹಿಸಿ ಅಪೌಷ್ಟಿಕ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಕ್ರಮ ವಹಿಸಬೇಕು. ಅಂಗನವಾಡಿ ಮಟ್ಟದಲ್ಲಿಯೇ ಅಪೌಷ್ಟಿಕ ಮಕ್ಕಳಿಗೆ ಸೂಕ್ಷ್ಮ ಪೋಷಕಾಂಶವುಳ್ಳ ಆಹಾರ ವಿತರಣೆಗೆ ಆಸಕ್ತಿ ವಹಿಸಬೇಕು ಎಂದು ಮಾಧುಸ್ವಾಮಿ ನಿರ್ದೇಶಿಸಿದರು.

    ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಪಂ ಸಿಇಒ ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲಕುವಾರ್ ಶಹಾಪುರವಾಡ್, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಡಿಎಚ್‌ಒ ಡಾ.ನಾಗೇಂದ್ರಪ್ಪ ಇದ್ದರು.

    2ನೇ ಅಲೆಯಲ್ಲಿ 7579 ಮಕ್ಕಳಿಗೆ ಕರೊನಾ: 2ನೇ ಅಲೆಯಲ್ಲಿ ಜಿಲ್ಲೆಯಲ್ಲಿ 7579 ಮಕ್ಕಳಿಗೆ ಕರೊನಾ ಸೋಂಕು ಕಾಣಿಸಿದ್ದು ಮಾನಸಿಕ ಕಾಯಿಲೆ ಇದ್ದ ಒಂದು ಮಗು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದ್ದು, ಇದು ಕರೊನಾ ಕಾರಣಕ್ಕೆ ಸಂಭವಿಸಿದ್ದಲ್ಲ ಎಂದು ಜೆ.ಸಿ.ಮಾಧುಸ್ವಾಮಿ ಮಾಹಿತಿ ನೀಡಿದರು. 8672 ಅಪೌಷ್ಟಿಕವುಳ್ಳ ಹಾಗೂ ವಿವಿಧ ಗಂಭಿರ ಖಾಯಿಲೆಗಳಿಂದ ಬಳಲುತ್ತಿರುವ 2200 ಮಕ್ಕಳನ್ನು ಗುರುತಿಸಲಾಗಿದ್ದು, ಈ ಮಕ್ಕಳ ಆರೋಗ್ಯದ ಕಡೆ ನಿಗಾ ವಹಿಸಬೇಕಿದೆ. ಮಕ್ಕಳಿಗೆ ಆಯಾ ಗ್ರಾಮದಲ್ಲಿಯೇ ಹಾಲು ವಿತರಣೆ ಬಗ್ಗೆ ಚಿಂತಿಸಲಾಗಿದೆ ಎಂದರು.

    ಮೂರನೇ ಅಲೆಯಲ್ಲಿ ರೋಗ ಲಕ್ಷಣ ಬದಲಾಗುವ ಸಾಧ್ಯತೆಯಿದೆ, ಶೇ.90 ಕಣ್ಣು ಕೆಂಪಗಾಗಿ ಕಣ್ಣಿನ ಬಳಿ ಗುಳ್ಳೆಗಳಾಗುವ ಸಾಧ್ಯತೆ ಇದೆ. ವಾಂತಿ ಅಥವಾ ಬೇಧಿಯಾಗುತ್ತದೆ. ವಾಂತಿ ಅಥವಾ ಬೇಧಿಯಾಗುವ ಮಕ್ಕಳನ್ನು ಕೋವಿಡ್ ಎಂದು ಚಿಕಿತ್ಸೆ ವಾಡಲಾಗುತ್ತದೆ.ರೋಗ ಲಕ್ಷಣ ಕಂಡು ಬಂದ ಮಕ್ಕಳ ಆರೈಕೆಗಾಗಿ ಈಗಾಗಲೇ 600 ಹಾಸಿಗೆ ಸಿದ್ಧಪಡಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಸರ್ಕಾರದ 18 ಸೇರಿದಂತೆ 70 ಮಕ್ಕಳ ವೈದ್ಯರಿದ್ದು ಅವರಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ ಎಂದರು.

    ಅಂಗನವಾಡಿಯಿಂದ ಸ್ಪಿರುಲಿನಾ ಚಿಕ್ಕಿ ವಿತರಣೆ ವಾಡುತ್ತಿದ್ದು, ಇದರ ಜತೆಗೆ ಪೌಷ್ಟಿಕ ಆಹಾರ ಪದಾರ್ಥ ವಿತರಿಸಿ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಕ್ರಮಜರುಗಿಸಲಾಗುವುದು. ಜಿಲ್ಲೆಯಲ್ಲಿ ಒಟ್ಟು ಅಂಗನವಾಡಿಯಲ್ಲಿ 145811 ಶಾಲೆಯಲ್ಲಿ 2.44 ಲಕ್ಷ ಸೇರಿ ಒಟ್ಟು 3.81ಲಕ್ಷ ಮಕ್ಕಳಿದ್ದಾರೆ. ಈ ಪೈಕಿ 8672 ಅಪೌಷ್ಟಿಕ, 127 ತೀವ್ರ ಅಪೌಷ್ಟಿಕ ಮಕ್ಕಳಿದ್ದಾರೆ. ಸರ್ಕಾರದಿಂದ ಸಿಗುವ ಎಲ್ಲಾ ಪೌಷ್ಟಿಕಾಂಶಗಳನ್ನು ಸೂಕ್ತ ರೀತಿಯಲ್ಲಿ ನೀಡಲಾಗುತ್ತಿದೆ.
    ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts