More

    ಯಾರನ್ನೋ ಮೆಚ್ಚಿಸಲು ಕೆಲಸ ಮಾಡುವುದನ್ನು ಬಿಡಬೇಕು; ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸಲಹೆ

    ಚಿಕ್ಕನಾಯಕನಹಳ್ಳಿ: ಯಾರನ್ನೋ ಮೆಚ್ಚಿಸಲು ಕೆಲಸ ಮಾಡುವುದನ್ನು ಬಿಟ್ಟು ಮತ ನೀಡಿದವರ ಕೆಲಸ ಮಾಡಬೇಕು. ನಾನು ಈ ಸಣ್ಣನೀರಾವರಿ ಸಚಿವನಾಗಿರಲು ಬಯಸುವುದು ನಮ್ಮ ರೈತರಿಗೆ ಅನುಕೂಲವಾಗುವ ಕೆಲಸ ಮಾಡಲು ಹಾಗೂ ಎಲ್ಲ ಕೆರೆಗಳನ್ನು ತುಂಬಿಸಲು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

    ಜೆ.ಸಿ.ಪುರದಲ್ಲಿ ಮಂಗಳವಾರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಗ್ರಾಮಪಂಚಾಯಿತಿ ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಅಭಿನಂಧನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಅಧಿಕಾರ ಮುಖ್ಯವಲ್ಲ, ಸೇವೆಯೇ ಮುಖ್ಯ. ಯಾರಿಗಾದರೂ ಸಹಾಯ ಮಾಡುವುದಾದರೆ ಅಲ್ಲಿ ಪಕ್ಷಬೇಧ ತೋರಿಸಬೇಡಿ, ಎಲ್ಲರಿಗೂ ಸಹಾಯ ಮಾಡಿ. ನಾನು ನೀರು ಹರಿಸುವ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಕ್ಷೇತ್ರದ ಎಲ್ಲ ಕೆರೆಗಳಿಗೂ ನೀರು ಹರಿಸುತ್ತೇನೆ ಎಂದರು.

    ಮಂಡ್ಯ ಹಾಗೂ ವಿಜಯಪುರ ಜಿಲ್ಲೆಯಲ್ಲೂ ಕೆಲವು ಜಾಗಗಳಲ್ಲಿ ನೀರಿಲ್ಲ, ಹೀಗಾಗಿ ಅಲ್ಲಿ ಶೀಘ್ರದಲ್ಲೇ ಪ್ರವಾಸ ಮಾಡಿ ಸಮಸ್ಯೆ ಗಮನಹರಿಸುತ್ತೇನೆ ಎಂದು ವಿವರಿಸಿದರು. ಈ ಬಾರಿ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ 33 ಗ್ರಾಮಪಂಚಾಯಿತಿಗಳಲ್ಲಿ 23 ಬಿಜೆಪಿ ಪಾಲಾಗಿವೆ ಎಂದು ಹೇಳಿದರು.

    ಜಿಪಂ ಸದಸ್ಯೆ ಮಂಜುಳಮ್ಮ ಮಾತನಾಡಿ, ನೀರು ಹರಿಸಲು ಕ್ರಮಕೈಗೊಳ್ಳುತ್ತಿರುವಂತಹ ಸಚಿವರ ಕೆಲಸವೇ ಇಂದು ಬಿಜೆಪಿ ಗೆಲುವಿಗೆ ಕಾರಣ ಎಂದರು.
    ಬುಕ್ಕಾಪಟ್ಟಣದ ತಾಪಂ ಮಾಜಿ ಸದಸ್ಯ ವಂಜಣ್ಣ ಮಾತನಾಡಿ, ಬುಕ್ಕಾಪಟ್ಟಣ ಹೋಬಳಿಯ 6 ಗ್ರಾಮ ಪಂಚಾಯಿತಿಗಳಲ್ಲಿ 5 ಬಿಜೆಪಿ ಪಾಲಾಗಿವೆ, ಇದು ಸಚಿವರ ಬೆಂಬಲದಿಂದ ಸಾಧ್ಯವಾಗಿದೆ ಎಂದರು.

    ತಾಪಂ ಸದಸ್ಯರಾದ ಕೇಶವಮೂರ್ತಿ, ಶೈಲಾಶಶಿಧರ್, ಇಂದ್ರಕುಮಾರಿ, ತುಮುಲ್ ನಿರ್ದೇಶಕ ಹಳೆಮನೆ ಶಿವನಂಜಪ್ಪ, ತಾಪಂ ಮಾಜಿ ಅಧ್ಯಕ್ಷರಾದ ಕೆಂಕೆರೆ ನವೀನ್, ಸೀತಾರಾಮಯ್ಯ, ನಿರಂಜನಮೂರ್ತಿ, ಪುರಸಭಾ ಸದಸ್ಯರಾದ ಬಾಬು, ರತ್ನಮ್ಮ, ಜಯಮ್ಮ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಿಲ್ಟ್ರಿ ಶಿವಣ್ಣ, ಶಿರಾದ ಮುಖಂಡರಾದ ಸತ್ಯನಾರಾಯಣ, ಶಿವರಾಜು, ಶಂಕರಣ್ಣ ಇದ್ದರು.

    ಒಂದು ಕ್ಷಣ ಮಲಗಿ ಹೋದರೆ ತಂದೆ ಆಗಲ್ಲ : ಹೇಮಾವತಿ ನೀರಾವರಿ ಯೋಜನೆ ಕುರಿತು ಮಾತನಾಡಿದ ಸಚಿವ ಮಾಧುಸ್ವಾಮಿ, ಕೇವಲ ಒಂದುಕ್ಷಣ ಮಲಗಿ ಎದ್ದು ಹೋಗುವವರು ತಂದೆ ಅನ್ನಿಸಿಕೊಳ್ಳುವುದಿಲ್ಲ. ಮಗುವನ್ನು ತಾಯಿಯೊಂದಿಗೆ ಜತೆಗಿದ್ದು
    ಹೆರಿಗೆ ಮಾಡಿಸಿ ಅದಕ್ಕೆ ನಾಮಕರಣ ಮಾಡಿ ಅದಕ್ಕೆ ಒಂದು ಸೂಕ್ತವಾದ ವ್ಯವಸ್ಥೆ ಮಾಡಿ ಬೆಳೆಸುವವನು
    ನಿಜವಾದ ತಂದೆ ಎಂದರು.

    ಈ ಬಗ್ಗೆ ನಾನು ಯಾರನ್ನೂ ಟೀಕಿಸುವುದಿಲ್ಲ. ಅದರೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದರು. ಬಿಜೆಪಿ ಬೆಂಬಲಿತ ಗ್ರಾಪಂ ಜನಪ್ರತಿನಿಧಿಗಳ ಸನ್ಮಾನ ಸಮಾರಂಭದಲ್ಲಿ ತಾಲೂಕಿನ ಬಿಜೆಪಿ ಮಂಡಲದ ಯಾವುದೇ ಪದಾಧಿಕಾರಿಗಳು ವೇದಿಕೆಯಲ್ಲಿ ಕಾಣಿಸಲಿಲ್ಲ. ಅದರೆ ಅಧ್ಯಕ್ಷರಾಗಲು ಬೆಂಬಲ ನೀಡಿದ ಕೆಲವು ಜೆಡಿಎಸ್ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರು ಹಾಜರಾಗಿದ್ದು ಕಂಡುಬಂದಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts