More

    ಜನರ ಕೆಲಸ ಮಾಡುವವರಿಗೆ ಮತ ದಾನ ಮಾಡಿ

    ವಿಜಯವಾಣಿ ಸುದ್ದಿಜಾಲ ಉಡುಪಿ
    ಮತ ಎಂದರೆ ದಾನ ಮಾಡುವುದು. ಅದು ಖರೀದಿ ಮಾಡುವುದಲ್ಲ. ಹೀಗಾಗಿ ಮತ ಹಾಕುವಾಗ ಯಾರಿಗೆ ಹಾಕಬೇಕು ಎಂದು ವಿಚಾರಿಸಿ ಮತವನ್ನು ದಾನ ಮಾಡಬೇಕು. ಯಾರು ಜನರ ಮಧ್ಯೆ ಇದ್ದು ಕೆಲಸ ಮಾಡುತ್ತಾರೋ, ಜನರಿಗಿರುವ ಸಂಕಷ್ಟ ದೂರ ಮಾಡಲು ಯತ್ನಿಸುತ್ತಾರೋ ಅವರನ್ನು ಗೆಲ್ಲಿಸಬೇಕು ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಕೆ.ಜಯಪ್ರಕಾಶ್​ ಹೆಗ್ಡೆ ಹೇಳಿದರು.

    ಚಿಕ್ಕಮಗಳೂರು ತಾಲೂಕಿನ ಕುರುಬರಬೂದಿಹಾಳ ಗ್ರಾಮದಲ್ಲಿ ಶನಿವಾರ ಮತಪ್ರಚಾರ ನಡೆಸಿದರು.

    ಶೋಭಾಗೆ ಟಾಂಗ್​

    2014ರಿಂದ 2024ರ ವರೆಗೆ ಒಂದೇ ಒಂದು ಅಭಿವೃದ್ಧಿ ಕಾರ್ಯ ಮಾಡದೆ, ದಿಲ್ಲಿಯಲ್ಲಿರುವ ನಾಯಕ ಮಾಡಿರುವ ಅಭಿವೃದ್ಧಿ ಕೆಲಸ ಹೇಳಿಕೊಂಡು ಗೆದ್ದು ಬಂದರೆ ಏನು ಪ್ರಯೋಜನ? ಅವರು ಯಾರೆಂದು ತಮಗೆ ಗೊತ್ತು. ತಾವು ನೋಡಿದ್ದೀರಿ ಎಂದು ಪರೋಕ್ಷವಾಗಿ ಶೋಭಾ ಕರಂದ್ಲಾಜೆಗೆ ಟಾಂಗ್​ ನೀಡಿದರು.

    ಕೆಲಸವೇ ಪ್ರಧಾನ

    ಯಾರು ನಿಮ್ಮ ಮಧ್ಯದಲ್ಲಿ ಇರುತ್ತಾರೋ, ಯಾರು ನಿಮ್ಮ ಕೆಲಸಗಳನ್ನು ಮಾಡಿಕೊಡುತ್ತಾರೋ ಅಂತಹವರನ್ನು ತಾವುಗಳು ಗೆಲ್ಲಿಸಬೇಕು. ಲೋಕಸಭೆಯಲ್ಲಿ ಜನರ ಸಮಸ್ಯೆ ಕುರಿತು ಮಾತನಾಡಬೇಕಾಗುತ್ತದೆ. ಇಲ್ಲದಿದ್ದಲ್ಲಿ ಜನರು ಗೆಲ್ಲಿಸಿದ್ದಾರೆಂದು ದೆಹಲಿಯಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಜನಪ್ರತಿನಿಧಿಗಳ ಕೆಲಸವೇ ಜನರ ಕೆಲಸ ಮಾಡುವುದು. ಹೀಗಾಗಿ ಜನರ ಕೆಲಸ ಮಾಡಲು ನನಗೆ ಈ ಬಾರಿ ಅವಕಾಶ ಮಾಡಿಕೊಡಿ ಎಂದರು.
    ಸಭೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್​ನ ಪ್ರಮುಖ ನಾಯಕರು ಹಾಗೂ ಬ್ಲಾಕ್​ ಕಾಂಗ್ರೆಸ್​ನ ಪದಾಧಿಕಾರಿಗಳು ಇದ್ದರು.

    ಅಡಕೆ ಬೆಳೆಗಾರರ ಹಿತ ಕಾಯಲು ಸಿದ್ಧ

    ಉಡುಪಿ: ಮತದಾನ ಬಹಿಷ್ಕಾರ ಮಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಯಾರು ಕೆಲಸ ಮಾಡುತ್ತಾರೋ ಅಂತಹವರನ್ನು ಆಯ್ಕೆಮಾಡಿದರೆ ಸಮಸ್ಯೆಯೇ ಉದ್ಭವಿಸುವುದಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ಮತದಾನ ಬಹಿಷ್ಕಾರದಂತಹ ತೀರ್ಮಾನ ಯಾವಾಗಲೂ ಕೈಗೊಳ್ಳಬಾರದು ಎಂದು ಜಯಪ್ರಕಾಶ್​ ಹೆಗ್ಡೆ ಹೇಳಿದರು.

    ಶೃಂಗೇರಿಯ ಕಿಗ್ಗಾದಲ್ಲಿ ಶನಿವಾರ ಆಯೋಜಿಸಿದ್ದ ಕಾಂಗ್ರೆಸ್​ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಅಡಕೆ ಬೆಳೆಗಾರರ ಸಮಸ್ಯೆ ಕುರಿತಾಗಿ ಈ ಹಿಂದೆ ನಾನು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಈ ಭಾಗದ ಬೆಳೆಗಾರರು ಸಮಸ್ಯೆ ಬಗೆಹರಿಸುವ ಭರವಸೆ ನೀಡಬೇಕು ಎಂದಿದ್ದರು. ಆದರೆ, ನಾನು ಭರವಸೆ ನೀಡದೆ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಿದ್ದೆ. ಅದಕ್ಕೆಂದೇ ಗೋರಕ್​ಸಿಂಗ್​ ಸಮಿತಿ ರಚಿಸಿ, ಅಧ್ಯಯನ ನಡೆಸಿ, ಒಂದು ಹೆಕ್ಟೇರ್​ಗೆ 15 ಸಾವಿರ ರೂ. 2 ಹೆಕ್ಟೇರ್​ಗೆ 30 ಸಾವಿರ ರೂ. ಅಡಕೆ ಬೆಳೆ ಪುನಶ್ಚೇತನಕ್ಕೆ ನೀಡಬೇಕೆಂದು ಅಧ್ಯಯನ ವರದಿಯನ್ನೂ ಸಲ್ಲಿಸಲಾಗಿತ್ತು ಎಂದು ತಿಳಿಸಿದರು.

    ಮೊಸಳೆ ಕಣ್ಣೀರು

    ಪ್ರತಿ ಚುನಾವಣೆಯಲ್ಲೂ ಬಿಜೆಪಿಯವರು ಗೋರಕ್​ಸಿಂಗ್​ ಸಮಿತಿ ವರದಿ ಜಾರಿಯಾಗಿಲ್ಲ ಎಂದು ಆರೋಪಿಸುತ್ತ ಮೊಸಳೆ ಕಣ್ಣಿರು ಸುರಿಸಿದರು. ಕಳೆದ 10 ವರ್ಷದಿಂದ ಅವರದ್ದೇ ಸರ್ಕಾರ ಇತ್ತಲ್ಲ. ಈಗಲೂ ಅವರದೇ ಸರ್ಕಾರ ಇದೆಯಲ್ಲ. ಯಾಕೆ ಅವರಿಂದ ಗೋರಕ್​ಸಿಂಗ್​ ವರದಿ ಜಾರಿ ಮಾಡಿಸಲು ಸಾಧ್ಯವಾಗಿಲ್ಲ ಎಂದು ಹೆಗ್ಡೆ ಪ್ರಶ್ನಿಸಿದರು. ನಾನು ಆಯ್ಕೆಯಾದಲ್ಲಿ ಈ ಭಾಗದ ಅಡಕೆ ಬೆಳೆಗಾರ ಸಮಸ್ಯೆ ನೀಗಿಸಲು ನನ್ನ ಪ್ರಯತ್ನ ಮತ್ತೆ ಮುಂದುವರಿಸುತ್ತೇನೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts