More

    ದಾಖಲೆ ಕೊಡೋಲ್ಲವೆಂದು ಬರೆದುಕೊಡಿ, ಅಧಿಕಾರಿಗಳಿಗೆ ಜಯಪ್ರಕಾಶ್ ಹೆಗ್ಡೆ ಎಚ್ಚರಿಕೆಯ ಸೂಚನೆ

    ಕುಂದಾಪುರ: ‘ಉತ್ತರ ಕನ್ನಡದಲ್ಲಿ ಜಾತಿ ಪ್ರಮಾಣ ಪತ್ರ ಕೊಟ್ಟಿದ್ದಾರೆ. ಕುಂದಾಪುರದಲ್ಲಿ ಏಕೆ ಕೊಡಲಾಗುತ್ತಿಲ್ಲ? ಆಗದಿದ್ದರೆ, ಆಗೋದಿಲ್ಲ ಎಂದು ಬರವಣಿಗೆ ಮೂಲಕ ಕೊಡಿ’ ಎಂದು ಹಿಂದುಳಿದ ವರ್ಗ ಆಯೋಗ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅಧಿಕಾರಿಗಳಿಗೆ ಖಡಕ್ಕಾಗಿ ಸೂಚಿಸಿದ್ದಾರೆ.

    ಕುಂದಾಪುರ ಪ್ರವಾಸಿ ಮಂದಿರದಲ್ಲಿ ಸೋಮವಾರ ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಜಾತಿ ಪ್ರಮಾಣ ಪತ್ರ ನಿರಾಕರಣೆ ಸಮಸ್ಯೆಯೊಂದಕ್ಕೆ ಈ ರೀತಿ ಅವರ ಈ ರೀತಿ ಎಚ್ಚರಿಕೆಯ ಸೂಚನೆ ಕೊಟ್ಟಿದ್ದಾರೆ. ಪ್ರಮಾಣ ಪತ್ರ ಕೊಡಲಾಗದು ಎಂದು ಬರವಣಿಗೆ ಮೂಲಕ ತಿಳಿಸಿದರೆ, ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದರು.

    ಮಕ್ಕಳಿಲ್ಲ ಎನ್ನುವ ಕಾರಣಕ್ಕೆ ಕೆದೂರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್ ಸ್ಥಳೀಯ ಪಂಚಾಯಿತಿಗೆ ವರ್ಗಾಯಿಸಿದ್ದು, ನಿರ್ವಹಣೆ ಇಲ್ಲದೆ ಕಟ್ಟಡ ಹಾಳಾಗುತ್ತಿದೆ. ಏಕೆ ನಿರ್ವಹಣೆ ಮಾಡಿಲ್ಲ ಎನ್ನುವ ಬಗ್ಗೆ ಸಮಗ್ರ ವರದಿ ನೀಡಲು ಸೂಚಿಸಿದರು. ಸ್ಥಳೀಯಾಡಳಿತಕ್ಕೆ ಹಾಸ್ಟೆಲ್ ನಿರ್ವಹಣೆ ಅಸಾಧ್ಯ ಎಂದಾದಲ್ಲಿ ಅದನ್ನು ಬೇರೆ ಯಾವುದೇ ಸಂಸ್ಥೆಗೆ ಹಸ್ತಾಂತರಿಸಬಹುದಿತ್ತು. ಇದರಿಂದ ಸಾರ್ವಜನಿಕ ಆಸ್ತಿಗೆ ಹಾನಿಯಾದಂತಾಗಿದೆ. ಸರಿಯಾದ ನಿರ್ವಹಣೆ ನಡೆಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಹಿಂದುಳಿದ ಆಯೋಗದ ಸದಸ್ಯ ಕೆ.ಟಿ.ಸುವರ್ಣ, ಬಿ.ಎಸ್.ರಾಜಶೇಖರನ್, ಎಚ್.ಕಲ್ಯಾಣ್ ಕುಮಾರ್, ಅರುಣ್ ಕುಮಾರ್, ಎಸಿ ರಾಜು ಕೆ., ತಹಸೀಲ್ದಾರ್ ಆನಂದಪ್ಪ ಎಚ್.ನಾಯ್ಕ, ಬಿಸಿಎಂ ಇಲಾಖಾಧಿಕಾರಿ ದಯಾನಂದ, ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಪ್ರಮುಖರಾದ ಕೇಶವ ಶೆಟ್ಟಿಗಾರ್, ಗಣೇಶ್ ಕೆ., ಬಿಜೆಪಿ ಮುಖಂಡರಾದ ಶಂಕರ ಅಂಕದ ಕಟ್ಟೆ, ಕಿಶೋರ್ ಕುಮಾರ್, ಮೀನುಗಾರಿಕೆ ಇಲಾಖೆಯ ಹೇಮಲತಾ, ಪುರಸಭಾ ಸದಸ್ಯ ಗಿರೀಶ್ ಜಿ.ಕೆ.ಇದ್ದರು. ಹಾಸ್ಟೆಲ್ ವಾರ್ಡನ್ ನರಸಿಂಹ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.

    ಕುಂದಾಪುರ ಪುರಸಭಾ ವ್ಯಾಪ್ತಿ ಎರಡು ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳಲ್ಲಿ ವರ್ಷಗಳಿಂದ ಡ್ರೈನೇಜ್ ಸಮಸ್ಯೆ ಕಾಡುತ್ತಿದೆ. ತೆರೆದ ಗುಂಡಿಗಳಿಂದಾಗಿ ಸುತ್ತಮುತ್ತಲಿನ ಜನ ವಾಸನೆ ಸಹಿಸಿ ಬದುಕಬೇಕಾಗಿದೆ ಎನ್ನುವ ದೂರಿದೆ. ಪುರಸಭಾ ಮುಖ್ಯಾಧಿಕಾರಿ ಜತೆ ಈ ಬಗ್ಗೆ ಚರ್ಚೆ ನಡೆಸಿ ತದನಂತರ ಹಾಸ್ಟೆಲ್‌ನ ಸಮಸ್ಯೆಯ ಕುರಿತು ಸ್ಥಳ ವೀಕ್ಷಣೆ ಕೈಗೊಂಡು, ನೈಜ ಸಮಸ್ಯೆ ಅರಿತು ಪರಿಹಾರ ಮಾಡಲಾಗುತ್ತದೆ.
    – ಕೆ.ಜಯಪ್ರಕಾಶ್ ಹೆಗ್ಡೆ, ಅಧ್ಯಕ್ಷ, ರಾಜ್ಯ ಹಿಂದುಳಿದ ವರ್ಗ ಆಯೋಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts