More

    ಜಾತ್ರೆಯೊಳಗೊಂದು ಜಾಗೃತಿ; ಐತಿಹಾಸಿಕ ಪ್ರಸಿದ್ಧ ಗುರುಗುಂಟಾ ಶ್ರೀ ಅಮರೇಶ್ವರ ರಥೋತ್ಸವ

    ಆನಂದ ತುರ್ವಿಹಾಳ, ಗುರುಗುಂಟಾ
    ಭಕ್ತರ ಬದುಕಿನಲ್ಲಿ ಶ್ರೀ ಅಮರೇಶ್ವರ ಜಾತ್ರೆ ವಿಶೇಷ ಸ್ಥಾನ ಹೊಂದಿದೆ. ಇಲ್ಲಿನ ಜಾತ್ರೆಯೆಂದರೆ ಅದೊಂದು ಬಗೆಯ ಯಾತ್ರೆ. ಕೇವಲ ಒಂದು ರಥ, ಒಂದು ವಿಗ್ರಹ, ಪೂಜೆ, ಒಂದಿಷ್ಟು ಖರೀದಿ, ಸಿಹಿ ತಿನಿಸುಗಳ ಮೇಳವಷ್ಟೇ ಇಲ್ಲಿರುವುದಿಲ್ಲ. ಜಾತ್ರೆಯೊಳಗೆ ಹೊಕ್ಕರೆ ಇಡೀದಿನ ಸುತ್ತಿದರೂ ನೋಡುವುದು ಮುಗಿಯದಂಥ ವೈವಿದ್ಯಮ ಪ್ರದರ್ಶನ ಇಲ್ಲಿರುತ್ತವೆ. ಯಾತ್ರೆಯಂಥ ವಿಶೇಷ ಅನುಭವ ಕಟ್ಟಿಕೊಡುತ್ತದೆ.

    ಈ ರಥೋತ್ಸವದೊಂದಿಗೆ ಆರಂಭವಾಗುತ್ತದೆ. ಜಯಘೋಷಗಳ ನಡುವೆ ಶ್ರೀ ಶಿವಯೋಗಿಗಳ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸುತ್ತಾರೆ. ಮಠಾಧೀಶರಾದ ಶ್ರೀ ಅಮರೇಶ್ವರ ಗುರು ಗಜದಂಡ ಶಿವಾಚಾರ್ಯರ ನೇತೃತ್ವದಲ್ಲಿ ಅರ್ಚಕರ ವೇದಘೋಷ, ವಿವಿಧ ಬಗೆಯ ವಾದ್ಯ ಮೇಳಗಳೊಂದಿಗೆ ಪೂಜೆ ಸಲ್ಲಿಕೆಯಾಗುತ್ತದೆ. ಗುರುಗುಂಟಾ ಹಾಗೂ ಗುಂತಗೋಳ ಸಂಸ್ಥಾನಿಕ ರಾಜರ ನೇತೃತ್ವದಲ್ಲಿ ಪೂಜೆ ಸಲ್ಲಿಕೆಯಾಗಿ, ನಂತರ ರಥ ಎಳೆಯಲಾಗುತ್ತದೆ. ಕಳಸ ಹೊತ್ತ ಮಹಿಳೆಯರು ಉತ್ಸವಕ್ಕೆ ವಿಶೇಷ ಮೆರುಗು ನೀಡುತ್ತಾರೆ.

    ರಥೋತ್ಸವ ಜತೆಗೆ ಕೃಷಿ ಮೇಳ, ರಾಸುಗಳ ಪ್ರದರ್ಶನ ಇಲ್ಲಿರುತ್ತದೆ. ಕೃಷಿ ವಿಜ್ಞಾನಿಗಳು, ಪ್ರಗತಿಪರರು ವಿಷಯ ಮಂಡಿಸುತ್ತಾರೆ. ವಿಷಯ ತಜ್ಞರೊಂದಿಗೆ ಸಂವಾದ ನಡೆಯುತ್ತದೆ. ದನಗಳ ಜಾತ್ರೆ ಮತ್ತೊಂದು ಪ್ರಧಾನ ಆಕರ್ಷಣೆ. ರಾಸುಗಳ ಕೊಡು-ಕೊಳ್ಳುವಿಕೆ ಒಂದು ಹಬ್ಬವೇ ಸರಿ. ದನಗಳ ಜಾತ್ರೆಗೆ ಹೋಗುವುದೆಂದರೆ ಅದೊಂದು ಪ್ರತಿಷ್ಠೆ ವಿಷಯ.

    ಜಾತ್ರೆಯೊಳಗೊಂದು ಜಾಗೃತಿ; ಐತಿಹಾಸಿಕ ಪ್ರಸಿದ್ಧ ಗುರುಗುಂಟಾ ಶ್ರೀ ಅಮರೇಶ್ವರ ರಥೋತ್ಸವ
    ಗುರುಗುಂಟಾ ಶ್ರೀ ಅಮರೇಶ್ವರ ಮೂರ್ತಿ

    ಉತ್ತರ-ಮಧ್ಯ ಕರ್ನಾಟಕದಿಂದ 100ಕ್ಕೂ ಅಧಿಕ ಭಜನಾ ತಂಡಗಳು ಭಾಗವಹಿಸುತ್ತವೆ. ಜಾತ್ರೆ ನಡೆಯುವಷ್ಟು ದಿನ ಮುಂಜಾನೆಯಿಂದ ಸಂಜೆವರೆಗೆ ಭಜನಾಕಲೆ ಪ್ರದರ್ಶನಗೊಳ್ಳುತ್ತವೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ನವದಂಪತಿಗಳು ದೇವರ ದರ್ಶನದೊಂದಿಗೆ ಸುಂದರ ಕ್ಷಣಗಳನ್ನು ಕಣ್ತುಂಬಿಕೊಳ್ಳುತ್ತಾರೆ. ಹೆಸರಾಂತ ಕಂಪನಿಗಳಿಂದ ನಾಟಕಗಳು ಪ್ರದರ್ಶನ ಇಲ್ಲಿರುತ್ತದೆ. ದನಗಳ ಜಾತ್ರೆಗೆ ಆಗಮಿಸಿದ ಉತ್ತಮ ತಳಿಯ ಜೋಡಿ ರಾಸುಗಳಿಗೆ ಎಪಿಎಂಸಿಯಿಂದ ವಿಶೇಷ ಬಹುಮಾನ ವಿತರಿಸಲಾಗುತ್ತದೆ. ದೇವಸ್ಥಾನ ಸಮಿತಿ ಹಾಗೂ ಅಮರೇಶ್ವರ ಆರ್ಯವೈಶ್ಯ ಅನ್ನಛತ್ರದಿಂದ ಪ್ರತಿ ದಿನ ಮೂರೂ ಹೊತ್ತು ಉಪಾಹಾರ-ಊಟದ ವ್ಯವಸ್ಥೆ ಇರುತ್ತದೆ. ಜಾತ್ರೆಯ ಮತ್ತೊಂದು ಆಕರ್ಷಣೆ ವಸ್ತು ಪ್ರದರ್ಶನ. ಕೈಮಗ್ಗ, ಕರಕುಶಲ ಉತ್ಪನ್ನಗಳು, ಕೈಗಾರಿಕೋತ್ಪನ್ನಗಳು, ಗ್ರಾಮೀಣೋತ್ಪನ್ನಗಳು, ಸ್ವ-ಸಹಾಯ ಸಂಘ ಹಾಗೂ ಸ್ತ್ರೀಶಕ್ತಿ ಸಂಘಗಳು ಸಿದ್ಧಪಡಿಸಿದ ಗೃಹಬಳಕೆ ವಸ್ತು ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇರುತ್ತದೆ. ರಥೋತ್ಸವಕ್ಕೆ ಪ್ರತಿವರ್ಷ ಲಕ್ಷಾಂತರ ಭಕ್ತ ಸಮೂಹ ಸೇರುತ್ತದೆ. ಸಂಚಾರಕ್ಕೆ ಬಸ್, ವಸತಿ, ಮೂಲ ಸೌಕರ್ಯಗಳನ್ನು ದೇವಸ್ಥಾನ ಸಮಿತಿ ಮಾಡಿದೆ.

    ಜಾತ್ರೆಯೊಳಗೊಂದು ಜಾಗೃತಿ; ಐತಿಹಾಸಿಕ ಪ್ರಸಿದ್ಧ ಗುರುಗುಂಟಾ ಶ್ರೀ ಅಮರೇಶ್ವರ ರಥೋತ್ಸವ
    ಗುರುಗುಂಟಾ ಶ್ರೀ ಅಮರೇಶ್ವರ ದೇವಸ್ಥಾನ ಹೊರನೋಟ.
    ಕಳಸ ಮೆರವಣಿಗೆ
    ಜಾತ್ರೋತ್ಸವದ ಅಂಗವಾಗಿ ಶ್ರೀ ಅಮರೇಶ್ವರ ದೇವರ ಗುರುಗಳು ಭಾನುವಾರ ರಾತ್ರಿ ಗುರುಗುಂಟ ಸಂಸ್ಥಾನಕ್ಕೆ ಆಗಮಿಸಿ, ಸಂಪ್ರದಾಯದಂತೆ ರಾಜರ ದರ್ಬಾರಕ್ಕೆ ತೆರಳಿ ಜಾತ್ರೆಗೆ ಬರುವಂತೆ ಆಹ್ವಾನವಿತ್ತರು. ನಂತರ ಗುರುಗುಂಟ ಕಳಸದ ಗುಡಿಯಲ್ಲಿ ರಾತ್ರಿ ಪೂರ್ತಿ ಭಜನೆ, ಪೂಜೆಗಳು ನಡೆದವು. ಗುಡಿಯಿಂದ ಕಳಸ, ಉತ್ಸವಮೂರ್ತಿ, ಪಲ್ಲಕ್ಕಿ ಸಮೇತ ಶ್ರೀ ಅಮರೇಶ್ವರ ದೇವರ ಗುರುಗಳು ತಡರಾತ್ರಿ ಕಳಸದಗುಡಿಯಿಂದ ಮೆರವಣಿಗೆ ಹೊರಟು ನಸುಕಿನಜಾವ ದರ್ಬಾರ್ ತಲುಪಿದರು. ಮಾರ್ಗ ಮಧ್ಯದ ಪುರವಂತಿಕೆ ಸೇವೆ ಜರುಗಿದವು. ಈ ವೇಳೆ ಭಕ್ತರು ಶಸ್ತ್ರವನ್ನು ಹಾಕಿಸಿಕೊಂಡು ಹರಕೆ ತೀರಿಸಿದರು. ಈ ವೇಳೆ ಹತ್ತಾರು ಮಣಭಾರ ತೂಕದ ಗೋಣಿಚೀಲದಲ್ಲಿ ತುಂಬಿದ ಉಸುಕು ಹಾಗು ಕಲ್ಲುಗುಂಡು ಎತ್ತುವ ಸ್ಪರ್ಧೆಗಳನ್ನು ಕಳಸದಗುಡಿ ಮುಂದೆ ಹಾಗೂ ರಾಜರ ಬೀದಿಯ ಅಂಗಳದಲ್ಲಿ ರಾತ್ರಿ ಏರ್ಪಡಿಸಲಾಗಿತ್ತು. ಈ ಸಂದರ್ಭ ಗುರುಗುಂಟ, ಬುಂಕಲದೊಡ್ಡಿ, ಯಮನೂರು, ಐದನಾಳ ಪುರವಂತಗಾರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts