More

    ಶಿಗ್ಲಿಯಲ್ಲಿ ಜಾತ್ರಾ ಮಹೋತ್ಸವ ಇಂದಿನಿಂದ

    ಶಿಗ್ಲಿ: ಗ್ರಾಮ ಸೇರಿ ಸುತ್ತ್ತನ ಗ್ರಾಮಗಳ ಆರಾಧ್ಯದೈವ ಹಾಗೂ ಇಚ್ಛಾಮರಣಿಗಳಾದ ಗುರುಬಸಪ್ಪಜ್ಜ ಶಾಂತವೀರಮ್ಮನವರ ಜಾತ್ರಾ ಮಹೋತ್ಸವ ಹಾಗೂ ಶಿವರಾತ್ರಿ ಜಾಗರಣೆ ಕಾರ್ಯಕ್ರಮ ಮಾ. 8ರಿಂದ 11ರವರೆಗೆ ಹಮ್ಮಿಕೊಳ್ಳಲಾಗಿದೆ.

    ಮಹಾಶಿವರಾತ್ರಿ ಅಂಗವಾಗಿ ಮಾ. 8ರಂದು ಬೆಳಗ್ಗೆಯಿಂದ ಉಪವಾಸ ಸಂಜೆ 6ರಿಂದ ಮಾ. 9ರ ಬೆಳಗಿನ 6 ಗಂಟೆವರೆಗೆ ಗುರುಬಸಪ್ಪಜ್ಜ ದಂಪತಿಯ ಗದ್ದುಗೆಗೆ ವಿಶೇಷ ಅಭಿಷೇಕ, ಬಿಲ್ವಾರ್ಚನೆ ಮೂಲಕ ಪೂಜೆ, ಶಿವನಾಮ ಸ್ಮರಣೆ ಹಾಗೂ ಭಜನಾ ಕಾಯಕ್ರಮಗಳು ನೆರವೇರಲಿವೆ. ಮಾ. 10ರಂದು ಅಮಾವಾಸ್ಯೆ ನಿಮಿತ್ತ ಮಾ. 10ರಂದು ಬೆಳಗ್ಗೆ ಸಕಲ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗುರುಬಸಪ್ಪಜ್ಜ ದಂಪತಿ ಮೂರ್ತಿಗಳ ಮೆರವಣಿಗೆ ಜರುಗಲಿದೆ. ನಂತರ ಶಿರಾ, ಕರಿಂಡಿ, ಜೋಳದ ನುಚ್ಚಿನ ಸಂಗಟಿ ಪ್ರಸಾದ ವಿತರಣೆ ಮಾಡಲಾಗುವುದು. ಮಾ. 11ರಂದು ಸಂಜೆ 4 ಗಂಟೆಗೆ ಕಡುಬಿನಕಾಳಗ ಹಾಗೂ ಪಲ್ಲಕ್ಕಿ ಉತ್ಸವ ನಡೆಯಲಿದೆ.

    ಇತಿಹಾಸ: ಮೂಲತಃ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ 35 ವರ್ಷದ ತರುಣ, ಶರಣ ಗುರುಬಸಪ್ಪಜ್ಜ, ಶರಣೆ ಶಾಂತವೀರಮ್ಮನವರು ವಾಸವಿದ್ದರು. ನೂಲಿನ ವ್ಯಾಪಾರ ಮಾಡುತ್ತ ಅಲ್ಲಿಂದ ಲಕ್ಷೆ್ಮೕಶ್ವರ ಸಮೀಪದ ಕನಕಾಪುರ ಗ್ರಾಮಕ್ಕೆ ಬಂದು ನೆಲೆಸಿದರು. ಅಧ್ಯಾತ್ಮದ ಒಲವು, ನಾಟಿ ವೈದ್ಯ ಹಾಗೂ ನಾಡಿ ಮಿಡಿತ ಚಿಕಿತ್ಸೆ ಮಾಡುತ್ತ ಜನರಿಗೆ ಆರಾಧ್ಯರಾದರು. 1895ರಲ್ಲಿ ಇವರಿಬ್ಬರನ್ನು ಗ್ರಾಮಸ್ಥರು ಶಿಗ್ಲಿಗೆ ಕರೆತಂದರು. ಆಗ ಜನರನ್ನು ಕಾಡುತ್ತಿದ್ದ ಪ್ಲೇಗ್, ಕಾಲರಾದಂತಹ ಸಾಂಕ್ರಾಮಿಕ ರೋಗಗಳನ್ನು ಹಗಲಿರುಳೆನ್ನದೇ ಉಪಚರಿಸಿ ಗುಣಪಡಿಸಿದರು. ಅಲ್ಲದೆ, ಗ್ರಾಮಸ್ಥರಿಗೆ ಅಧ್ಯಾತ್ಮದ ಅರಿವು ಮೂಡಿಸುವ ಕೈಂಕರ್ಯದಲ್ಲಿ ತೊಡಗಿಕೊಂಡು ದೇವ ಸಮಾನರಾದರು.

    ಗಾಂಧೀಜಿಯವರ ತತ್ವಾದರ್ಶಗಳಿಂದ ಪ್ರಭಾವಿತರಾದ ಗುರುಬಸಪ್ಪಜ್ಜನವರು, 1924ರಲ್ಲಿ ಬೆಳಗಾವಿಯಲ್ಲಿ ಏರ್ಪಾಟಾಗಿದ್ದ ಸ್ವಾತಂತ್ರ್ಯ ಸಂಗ್ರಾಮದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ್ದರು. ಸ್ವಾತಂತ್ರ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದರು. ಶಿಗ್ಲಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಸ್ವಾತಂತ್ರ್ಯ ಚಳವಳಿಗಳಲ್ಲಿ ಭಾಗವಹಿಸುವಂತೆ ಪ್ರೇರಣಾದಾಯಿಯಾಗಿದ್ದರು. ಜನರ ಕಲ್ಯಾಣ, ರೋಗರುಜಿನ ದೂರ ಮಾಡುವ ನಾಟಿ ವೈದ್ಯರಾಗಿ ಸಾವಿರಾರು ಜನರ ಪ್ರಾಣ ಉಳಿಸಿದರು. ಅಂದಿನಿಂದ ಇಂದಿನವರೆಗೂ ನಂಬಿ ಬಂದವರ ಕೈ ಹಿಡಿದು ಕಾಪಾಡುವ ಕಲಿಯುಗದ ದೈವವಾಗಿದ್ದಾರೆ ಗುರುಬಸಪ್ಪಜ್ಜ ದಂಪತಿ.

    ಅಂಗಾರದ ಪವಾಡ: ಗುರುಬಸಪ್ಪಜ್ಜನವರ ಮಠಕ್ಕೆ ಭೇಟಿ ನೀಡಿ ಅಜ್ಜನ ಅಂಗಾರ ಹಣೆಗೆ ಹಚ್ಚಿಕೊಂಡರೆ ಸಕಲ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ. ಅಜ್ಜನವರ ಗದ್ದುಗೆಗೆ ಹಣೆ ಹಚ್ಚಿ ಭಕ್ತಿಭಾವದಿಂದ ನಮಸ್ಕರಿಸಿದರೆ ಕಷ್ಟಕಾರ್ಪಣ್ಯ ನಿವಾರಣೆಯಾಗುತ್ತವೆ ಎಂಬುದು ಭಕ್ತರ ನಂಬಿಕೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts