More

    ಬಿಜೆಪಿಗೆ ಜಾರಕಿಹೊಳಿ ಶಾಕ್!; 13 ಜನ ಶಾಸಕರು, ಮೂವರು ಸಂಸದರಿದ್ದರೂ ಕಮಲಪಡೆಗೆ ದಕ್ಕದ ಜಯ

    | ರಾಯಣ್ಣ ಆರ್.ಸಿ. ಬೆಳಗಾವಿ

    ಅತ್ಯಂತ ಕುತೂಹಲ ಕೆರಳಿಸಿದ್ದ ಜಿಲ್ಲೆಯ ದ್ವಿಸದಸ್ಯ ಸ್ಥಾನಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ, ಜಿಲ್ಲೆಯ ಬಿಜೆಪಿಗರ ನೀರಿಳಿಸಿದ್ದಾರೆ. ಚುನಾವಣೆಯ ಮತದಾನಕ್ಕಿಂತ 3-4 ದಿನಗಳ ಮುಂಚೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನಗರದ ಹೊರವಲಯದ ಖಾಸಗಿ ಹೊಟೇಲ್​ದಲ್ಲಿ ಇಡೀ ದಿನ ಠಿಕಾಣಿ ಹೂಡಿ, ಈ ಬಾರಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಜಿಲ್ಲೆಯ ಎಲ್ಲ ಶಾಸಕರಿಗೆ, ಸಂಸದರಿಗೆ ತಾಕೀತು ಮಾಡಿದ್ದರೂ, ಬಿಜೆಪಿ ಅಭ್ಯರ್ಥಿಯಾಗಿದ್ದ ಮಹಾಂತೇಶ ಕವಟಗಿಮಠ ಅವರನ್ನು ಗೆಲ್ಲಿಸಲು ಬಿಜೆಪಿ ಮುಖಂಡರು ವಿಫಲರಾಗಿದ್ದಾರೆ.

    ರಾಜ್ಯದಲ್ಲಿಯೇ ಅತಿದೊಡ್ಡ ಜಿಲ್ಲಾ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಳಗಾವಿಯ 18 ವಿಧಾನ ಕ್ಷೇತ್ರಗಳ ಪೈಕಿ 13 ವಿಧಾನಸಭೆ ಕ್ಷೇತ್ರಗಳು ಬಿಜೆಪಿ ಶಾಸಕರ ಕೈಯಲ್ಲಿಯೇ ಇವೆ. ಜತೆಗೆ ಇಬ್ಬರು ಸಂಸದರು, ಓರ್ವ ರಾಜ್ಯಸಭೆ ಸದಸ್ಯರಿದ್ದರೂ, ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಸಾಧ್ಯವಾಗದೇ ಮುಖಭಂಗ ಅನುಭವಿಸುವಂತಾಗಿದೆ. ಇದಕ್ಕೆ ಬಿಜೆಪಿ ಮುಖಂಡರು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

    ‘ಜಾರಕಿಹೊಳಿ’ ಕುಟುಂಬ ಇತಿಹಾಸ: ಒಂದೇ ಕುಟುಂಬದ ನಾಲ್ವರು ಸಹೋದರರು ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ಜಾರಕಿಹೊಳಿ ಕುಟುಂಬದ ಸದಸ್ಯರು ಹೊಸ ಇತಿಹಾಸ ನಿರ್ವಿುಸಿದ್ದಾರೆ. ಮಾಜಿ ಸಚಿವ ರಮೇಶ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಬಿಜೆಪಿಯಲ್ಲಿದ್ದರೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಶಾಸಕರೂ ಆಗಿರುವ ಸತೀಶ ಜಾರಕಿಹೊಳಿ ಕಾಂಗ್ರೆಸ್​ನಲ್ಲಿದ್ದಾರೆ. ಈಗ ಸಹೋದರ ಲಖನ್ ಜಾರಕಿಹೊಳಿ ಮೇಲ್ಮನೆ ಪ್ರವೇಶಿಸುವುದರ ಮೂಲಕ ಒಟ್ಟು ಒಂದೇ ಕುಟುಂಬದ ನಾಲ್ವರು ಶಾಸಕರು ಅಧಿಕಾರದ ಗದ್ದುಗೆ ಹಿಡಿದು ದಾಖಲೆ ನಿರ್ವಿುಸಿದ್ದಾರೆ.

    500 ರೂ. ನೋಟಿನ ಸುರಿಮಳೆ: ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಗೆಲುವು ಘೊಷಣೆಯಾಗುತ್ತಿದ್ದಂತೆ ಜಾರಕಿಹೊಳಿ ಕುಟುಂಬದ ಅಭಿಮಾನಿಯೊಬ್ಬ 500 ರೂ. ಮುಖಬೆಲೆಯ ನೋಟುಗಳ ಕಂತೆಯನ್ನು ಗಾಳಿಗೆ ತೂರಿ ಸಂಭ್ರಮಿಸಿದ ವಿಡಿಯೋ ವೈರಲ್ ಆಗಿದೆ. ಮತ ಎಣಿಕೆ ಕೇಂದ್ರದ ಆವರಣದಲ್ಲಿ ಅಭಿಮಾನಿಗಳು ವಿಜಯೋತ್ಸವ ಆಚರಿಸುತ್ತಿದ್ದಾಗ 500 ರೂ. ನೋಟುಗಳು ತೂರಿಬಂದವು. ಇದನ್ನು ಸ್ಥಳೀಯರೊಬ್ಬರು ಮೊಬೈಲ್​ನಲ್ಲಿ ವಿಡಿಯೋ ಮಾಡಿದ್ದಾರೆ. ನೋಟುಗಳನ್ನು ಹೆಕ್ಕಲು ಜನರು ಮುಗಿಬಿದ್ದರು.

    ಮತದಾರರ ತೀರ್ಪಿಗೆ ನಾನು ಬದ್ಧನಾಗಿದ್ದೇನೆ. ಬಿಜೆಪಿಯಲ್ಲಿರುವ ‘ಮತ’ಗಳು ವಿಭಜನೆ ಯಾಗಿರುವುದೇ ನನ್ನ ಸೋಲಿಗೆ ಕಾರಣವಾಗಿದೆ.

    | ಮಹಾಂತೇಶ ಕವಟಗಿಮಠ ವಿಧಾನ ಪರಿಷತ್ತಿನ ಆಡಳಿತ ಪಕ್ಷದ ಮುಖ್ಯಸಚೇತಕ

    ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯೂ ಮತದಾನ ನಡೆಯುವುದಕ್ಕಿಂತ 1-2ದಿನ ಮುಂಚೆ ಕಾಂಗ್ರೆಸ್ ಅಭ್ಯರ್ಥಿಯ ಜತೆ ಮ್ಯಾಚ್​ಫಿಕ್ಸಿಂಗ್ ಮಾಡಿಕೊಂಡು, ನಮ್ಮನ್ನು ಸೋಲಿಸುವುದಕ್ಕಾಗಿ ಹೆಣೆದ ತಂತ್ರ ವಿಫಲವಾಗಿದೆ. ಬಿಜೆಪಿ ಸೋಲಿಗೆ ಬಿಜೆಪಿಯೇ ಕಾರಣವಾಗಿದ್ದು, ಬಿಜೆಪಿ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳಬೇಕು.

    | ಲಖನ್ ಜಾರಕಿಹೊಳಿ ಎಂಎಲ್​ಸಿ ಬೆಳಗಾವಿ ಪಕ್ಷೇತರ ಅಭ್ಯರ್ಥಿ

    ಲಖನ್ ಜಾರಕಿಹೊಳಿಗೆ ಬೇಡಿಕೆ!: ರಾಜಕೀಯ ಜಂತರ್ ಮಂತರ್​ನಲ್ಲಿ ಮೇಲ್ಮನೆಗೆ ಪಕ್ಷೇತರರಾಗಿ ಗೆಲುವು ಸಾಧಿಸಿರುವ ಲಖನ್ ಜಾರಕಿಹೊಳಿಗೆ ಬೇಡಿಕೆ ಕುದುರಿದೆ! ಮೇಲ್ಮನೆಯಲ್ಲಿ ಸ್ಪಷ್ಟ ಬಹುಮತ ಪಡೆಯಲು ಯಾವುದೇ ಪಕ್ಷ 38 ಸ್ಥಾನ ಪಡೆದಿರಬೇಕು. ಆದರೆ, ಈಗ ಬಿಜೆಪಿ 37 ಸ್ಥಾನ ಹೊಂದಿದ್ದು, ಬಹುಮತಕ್ಕೆ ಒಂದು ಸದಸ್ಯ ಸ್ಥಾನದ ಅವಶ್ಯಕತೆಯಿದೆ. ಹಾಗಾಗಿ ರಮೇಶ್ ಜಾರಕಿಹೊಳಿ ಅವರ ಸಹೋದರ ಲಖನ್ ಜಾರಕಿಹೊಳಿ ಅವರನ್ನು ಬಿಜೆಪಿ ತನ್ನತ್ತ ಸೆಳೆಯಲು ಮುಂದಾಗಿದೆ. ಲಖನ್​ಗೆ ಬೇಡಿಕೆ ಕುದಿರಿರುವುದರಿಂದ ಬಿಜೆಪಿಯ ರಾಜಕೀಯ ಲೆಕ್ಕಾಚಾರವೇ ಏರುಪೇರಾಗುವ ಲಕ್ಷಣಗಳಿವೆ. ಇದನ್ನೇ ಜಾರಕಿಹೊಳಿ ಬ್ರದರ್ಸ್ ಬಂಡವಾಳ ಮಾಡಿಕೊಳ್ಳುವ ಸಾಧ್ಯತೆಗಳಿವೆ. ರಮೇಶ್ ಜಾರಕಿಹೊಳಿ ಈ ಸಂದರ್ಭವನ್ನು ಬಳಸಿಕೊಂಡು ಪುನಃ ಮಂತ್ರಿ ಸ್ಥಾನ ಸೇರಿ ವಿವಿಧ ಬೇಡಿಕೆಗಳನ್ನು ವರಿಷ್ಠರ ಮುಂದಿಡುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

    ವಿಧಾನಸೌಧಕ್ಕೀಗ ಮೂವರು ಸಹೋದರರು

    ಬೀದರ್: ಜಿದ್ದಾಜಿದ್ದಿನ ವಿಧಾನ ಪರಿಷತ್ ಚುನಾವಣೆ ಅಖಾಡದಲ್ಲಿ ಕೊನೆಗೂ ಹುಮನಾಬಾದ್ ಗೌಡ್ರು ಮೇಲುಗೈ ಸಾಧಿಸಿದ್ದಾರೆ. ಈ ಮೂಲಕ ಮೂವರು ಸಹೋದರರು ವಿಧಾನಸೌಧಕ್ಕೆ ಎಂಟ್ರಿ ಕೊಟ್ಟಿದ್ದು ವಿಶೇಷ. ಒಂದೇ ಪರಿವಾರದ ಅದೂ ಮೂವರು ಖಾಸಾ ಅಣ್ಣ-ತಮ್ಮಂದಿರು ವಿಧಾನಸೌಧ ಪ್ರವೇಶಿಸಿರುವುದು ರಾಜ್ಯದಲ್ಲಿ ದಾಖಲೆ ಎನಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಭೀಮರಾವ ಪಾಟೀಲ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇವರ ಹಿರಿಯ ಸಹೋದರ ರಾಜಶೇಖರ ಪಾಟೀಲ್ ಹುಮನಾಬಾದ್ ಕ್ಷೇತ್ರದಿಂದ ನಾಲ್ಕನೇ ಸಲ ಶಾಸಕರಾಗಿದ್ದಾರೆ. ಇನ್ನೊಬ್ಬ ಸಹೋದರ ಡಾ.ಚಂದ್ರಶೇಖರ ಪಾಟೀಲ್ ವಿಧಾನ ಪರಿಷತ್ ಸದಸ್ಯರು (ಪದವೀಧರ ಕ್ಷೇತ್ರ). ಹೀಗಾಗಿ ಮೂವರು ಸಹೋದರು ಇದೀಗ ವಿಧಾನಸೌಧಕ್ಕೆ ಏಕಕಾಲಕ್ಕೆ ಹೋಗುವ ಸಂದರ್ಭ ಬಂದಿದೆ. ಬೆಳಗಾವಿಯ ಜಾರಕಿಹೊಳಿ ಬ್ರದರ್ಸ್ ಬಿಟ್ಟರೆ ಹುಮನಾಬಾದ್ ಪಾಟೀಲ್ (ಗೌಡ್ರು) ಸಹೋದರರು ವಿಧಾನಸೌಧಕ್ಕೆ ಹೋದಂತಾಗಿದೆ.

    ಸರ್ಕಾರಿ ನೌಕರರಿಗೆ ಭರ್ಜರಿ ಕೊಡುಗೆ; ಹಬ್ಬದ ಮುಂಗಡ ಹಣ 25 ಸಾವಿರ ರೂಪಾಯಿಗೆ ಹೆಚ್ಚಳ

    ಇದು ‘ಎಣ್ಣೆ-ಏಟು’: ಪಾನಮತ್ತ ಚಾಲಕ, ಕೋಪೋದ್ರಿಕ್ತ ಮಾಲೀಕ; ಮುಂದಾಗಿದ್ದೆಲ್ಲ ವೈರಲ್!

     

     

     

     

     

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts