ಬಳ್ಳಾರಿ: ಬೇಡ ಜಂಗಮ ಸಮುದಾಯಕ್ಕೆ ಭಾರತದ ಸಂವಿಧಾನಾತ್ಮಕವಾಗಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಬೇಡ ಜಂಗಮ ಸಮಾಜ ಗುರುವಾರ ಬೃಹತ್ ಜನಾಂದೋಲನ ನಡೆಸಿತು.
ಡಿಸಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ, ಎಡಿಸಿ ಪಿ.ಎಸ್.ಮಂಜುನಾಥ್‌ಗೆ ಮನವಿ ಸಲ್ಲಿಸಿತು. ನಗರದ ನಾರಾಯಣರಾವ್ ಪಾರ್ಕ್‌ನಿಂದ ಬೃಹತ್ ಮೆರವಣಿಗೆ ಆರಂಭಿಸಿ ಕೆಲ ಹೊತ್ತು ಗಡಿಗೆ ಚೆನ್ನಪ್ಪ ಸರ್ಕಲ್ ನಲ್ಲಿ ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಲಾಯಿತು. ಬೇಡ ಜಂಗಮ ಜಾತಿಯನ್ನು ಸಂವಿಧಾನದ ಪ್ರಕಾರ 341ನೇ ಪರಿಚ್ಛೇದದಡಿಯಲ್ಲಿ ಸೇರ್ಪಡೆಗೊಳಿಸಲಾಗಿದ್ದು, ಇದಕ್ಕೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ. ಜಾತಿ ಜನಗಣತಿಯ ಕ್ರಮ ಸಂಖ್ಯೆ 19ರಲ್ಲಿ ಬೇಡ ಜಂಗಮ ಜಾತಿ ನಮೂದಿಸಲಾಗಿದೆ. ಅದರಂತೆ, ಬೇಡ ಜಂಗಮ ಜಾತಿಯ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವೀರಶೈವ ಜಂಗಮರೇ ಬೇಡ ಜಂಗಮರೆಂದು ಗೆಜೆಟಿಯರ್ ಆದೇಶವನ್ನೂ ಹೊರಡಿಸಿವೆ. ಇತಿಹಾಸ ತಜ್ಞ ಸೂರ್ಯನಾಥ ಕಾಮತ್ ಕೂಡ ವೀರಶೈವ ಜಂಗಮರೇ ಬೇಡ ಜಂಗಮರು ಎಂದು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಆ ಪ್ರಕಾರವಾಗಿ ಬೇಡ ಜಂಗಮರಿಗೆ ಸರ್ಕಾರದಿಂದ ಇಲ್ಲಿಯವರೆಗೆ ಜಾತಿ ಪ್ರಮಾಣ ಪತ್ರ ನೀಡಿಲ್ಲ. ಇದು ಕಳೆದ 33 ವರ್ಷಗಳಿಂದ ನಮ್ಮ ಬೇಡ ಜಂಗಮ ಜಾತಿಗೆ ವಿವಿಧ ಸರ್ಕಾರಗಳು ಮಾಡಿರುವ ಅನ್ಯಾಯವಾಗಿದೆ. ನಮ್ಮ ಮನವಿ ಪತ್ರಕ್ಕೆ ಸ್ಪಂದಿಸಿ ಆದಷ್ಟು ಶೀಘ್ರವಾಗಿ ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ನೀಡಿ ನ್ಯಾಯ ಒದಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಹರಗಿನಡೋಣಿ ಶ್ರೀ ಸಿದ್ದಲಿಂಗ ಶಿವಾಚಾರ್ಯ, ಸಮಾಜದ ಮುಖಂಡರಾದ ಜೆ.ಎಸ್.ಬಸವರಾಜ ಸ್ವಾಮಿ, ಬಿ.ಎಂ.ಎರ‌್ರಿಸ್ವಾಮಿ ಎಚ್.ಕೆ.ಗೌರಿ ಶಂಕರ್, ಮಹೇಶ್ವರ ಸ್ವಾಮಿ, ಎಚ್.ಎಂ.ಕಿರಣ್ ಕುಮಾರ್, ಕೊಟ್ರಯ್ಯಸ್ವಾಮಿ ಮೋರಿಗೇರಿ, ಗೋವಿಂದವಾಡ ಮಂಜುನಾಥ ಸ್ವಾಮಿ, ಚಾ.ಮ.ಗಂಗಾಧರಯ್ಯ, ನಟರಾಜ್ ಹಿರೇಮಠ್, ಬಸವರಾಜ್, ಜಿ.ಎಂ.ಶಂಕರಮೂರ್ತಿ, ಮೃತ್ಯುಂಜಯಸ್ವಾಮಿ, ಜೆ.ಎಂ.ಮಂಜುನಾಥ, ಶಿವಾನಂದ ಇತರರು ಇದ್ದರು.