More

    ಜಂಗಮ ವಟುಗಳು ಶಿಷ್ಟಾಚಾರ ಪಾಲಿಸಲಿ

    ಬ್ಯಾಡಗಿ: ವೀರಶೈವ ಸಂಪ್ರದಾಯದಂತೆ ಜಂಗಮವಟುಗಳಿಗೆ ನೀಡುವ ಶಿವದೀಕ್ಷೆ (ಅಯ್ಯಾಚಾರ) ಪದ್ಧತಿಯನ್ನು ಜಂಗಮ ಕುಲಬಾಂಧವರು ಉಳಿಸಿಕೊಂಡು ಹೋಗಬೇಕು. ಪೂರ್ವಜರ ಆಚಾರ, ವಿಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಧರ್ಮರಕ್ಷಣೆಗೆ ಮುಂದಾಗುವಂತೆ ದಿಂಡದಹಳ್ಳಿ ಪಂಚಮಠಾಧೀಶ ಷ.ಬ್ರ. ಪಶುಪತಿ ಶಿವಾಚಾರ್ಯರು ಸಲಹೆ ನೀಡಿದರು.

    ಪಟ್ಟಣದ ಜಗದ್ಗುರು ಪಂಚಾಚಾರ್ಯ ಯುವವೇದಿಕೆ ಆಶ್ರಯದಲ್ಲಿ ರೇಣುಕಮಂದಿರ ಹಾಗೂ ಸಂಗಮೇಶ್ವರ ದೇವಸ್ಥಾನಗಳ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ 26 ಜಂಗಮ ವಟುಗಳ ಶಿವದೀಕ್ಷಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಪ್ರಾಚೀನ ಕಾಲದಿಂದಲೂ ವೀರಶೈವ ಪರಂಪರೆಯ ಜಂಗಮರು ಪುರೋಹಿತ, ಧಾರ್ವಿುಕ ವಿಧಿ-ವಿಧಾನಗಳಲ್ಲಿ ತೊಡಗಿಕೊಂಡಿದ್ದಾರೆ. 8 ವರ್ಷ ವಯೋಮಾನದ ಎಲ್ಲ ಜಂಗಮರು ಸಂಪ್ರದಾಯದಂತೆ ಅಯ್ಯಾಚಾರ ದೀಕ್ಷೆ ಪಡೆದು, ಕೋರುಣ್ಯ ಭಿಕ್ಷಾಟನೆ ಕಾಯಕ ಮಾಡಬೇಕಿದೆ. ವಟುಗಳಿಗೆ ಜಂಗಮ ಶಿವಾಚಾರ್ಯರು ಮಂತ್ರೋಚ್ಛಾರದ ಮೂಲಕ ಲಿಂಗಧಾರಣೆ, ಬೆತ್ತ, ಜೋಳಿಗೆ, ಕಾಲಿಗೆ ಜಂಗು ಧರಿಸುವ ಮೂಲಕ ಶಿಷ್ಟಾಚಾರಗಳನ್ನು ಪಾಲಿಸಬೇಕು. ಗುರುವಂಶಸ್ಥರಾದ ಜಂಗಮರನ್ನು ಭಕ್ತಿ ಭಾವನೆಗಳಿಂದ ಕಾಣುತ್ತಾರೆ. ನಮ್ಮ ಆಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ವಟುಗಳಿಗೆ ಪಾಲಕರು, ಹಿರಿಯರು ತಿಳಿಹೇಳುವ ಮೂಲಕ ಧರ್ಮಪಾಲನೆ ಅನುಸರಿಸಬೇಕು ಎಂದರು.

    ವಿವಿಧೆಡೆಯಿಂದ ಆಗಮಿಸಿದ 26 ಜಂಗಮ ವಟುಗಳಿಗೆ ಶಿವದೀಕ್ಷೆ ನೀಡಿ, ಪ್ರಮಾಣ ಪತ್ರ ನೀಡಲಾಯಿತು. ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಇಂತಹ ಶಿವದೀಕ್ಷಾ ಕಾರ್ಯಕ್ರಮಗಳು ಜರುಗಬೇಕು ಎಂದರು.

    ಮುಪ್ಪಿನಸ್ವಾಮಿ ಮಠದ ಮಲ್ಲಿಕಾರ್ಜುನ ಶ್ರೀಗಳು, ಧರ್ಮಾಧಿಕಾರಿ ಮಂಜಯ್ಯಸ್ವಾಮಿ ಹಿರೇಮಠ, ವರ್ತಕ ಮೃತ್ಯುಂಜಯ್ಯ ಹಿರೇಮಠ, ರಾಜಶೇಖರ ಹಾಲೇವಾಡಿಮಠ, ಬಸಯ್ಯ ಹಿರೇಮಠ, ಪತ್ರಕರ್ತ ಕರಬಸಯ್ಯ ಬರ್ದೂರಹಿರೇಮಠ, ವಿಜಯ ಕುದರಿಹಾಳಮಠ, ಶೇಖರಗೌಡ್ರ ಕರೇಗೌಡ್ರ, ಲಿಂಗರಾಜ ರಂಗಾರಿ, ಕುಮಾರ ಹಿರೇಮಠ ಇದ್ದರು.

    ಜಂಗಮ ಸಮಾಜ ಅಭಿವೃದ್ಧಿ ನಿಗಮ ಸ್ಥಾಪಿಸಿ

    ಸಮಾಜದ ಯುವಮುಖಂಡ ಗಿರೀಶ ಇಂಡಿಮಠ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ಜಂಗಮ ಸಮಾಜಕ್ಕೆ ನಿವೇಶನ ನೀಡಬೇಕು. ರಾಜ್ಯದಲ್ಲಿ ಜಂಗಮ ಸಮಾಜ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿದೆ. ಬಜೆಟ್​ನಲ್ಲಿ ಕಡುಬಡತನ ಅನುಭವಿಸುತ್ತಿರುವ ಜಂಗಮ ಸಮಾಜಕ್ಕೆ ಅಭಿವೃದ್ಧಿ ನಿಗಮ ರಚಿಸಬೇಕು. ರಾಜ್ಯಾದ್ಯಂತ ಬೇಡ ಜಂಗಮ ಜಾತಿ ಪ್ರಮಾಣ ಪತ್ರದಲ್ಲಿ ಆಗುತ್ತಿರುವ ಸಮಸ್ಯೆಯನ್ನು ಕೂಡಲೆ ಸರಿಪಡಿಸಬೇಕು ಎಂದು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts