More

    ಜನರ ಬಳಿಯೇ ತೆರಳಿ ಸಮಸ್ಯೆ ಆಲಿಕೆ

    ನಾಪೋಕ್ಲು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಜನತಾ ದರ್ಶನ ಕಾರ್ಯಕ್ರಮವನ್ನು ಪ್ರತಿ ತಿಂಗಳು ಜಿಲ್ಲೆಯ ಒಂದೊಂದು ಭಾಗದಲ್ಲಿ ಆಯೋಜಿಸುವ ಮೂಲಕ ಜನಸಾಮಾನ್ಯರ ಸಮಸ್ಯೆಗಳನ್ನು ಅವರ ಬಳಿಗೆ ತೆರಳಿ ಪರಿಹರಿಸುವ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಹೇಳಿದರು.

    ನಾಪೋಕ್ಲುವಿನ ಚೆರಿಯಪರಂಬು ಶಾದಿ ಮಹಲ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನರ ಬಳಿಗೆ ಸರ್ಕಾರ ಹೋಗಬೇಕು. ಅಧಿಕಾರಿಗಳು ಖುದ್ದಾಗಿ ಜನರ ಸಮಸ್ಯೆ ಆಲಿಸಬೇಕು. ಸ್ಥಳೀಯವಾಗಿ ಇರುವ ಸಮಸ್ಯೆಗಳು ಜಿಲ್ಲಾ ಮಟ್ಟದಲ್ಲಿ ಪರಿಹಾರ ಆಗಬೇಕು. ಎಲ್ಲ ಸಮಸ್ಯೆಗಳಿಗೆ ಆದಷ್ಟು ಸ್ಥಳದಲ್ಲೇ ಪರಿಹಾರ ಸಿಗಬೇಕು ಎನ್ನುವ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜನತಾದರ್ಶನ ಕಾರ್ಯಕ್ರಮ ಆರಂಭಿಸಿದ್ದಾರೆ. ಎಲ್ಲ ಜಿಲ್ಲೆಗಳಲ್ಲೂ ಈ ಕಾರ್ಯಕ್ರಮ ನಡೆಯಲಿದೆ. ಕೊಡಗಿನಲ್ಲಿ ಮುಂದಿನ ಜನತಾ ದರ್ಶನ ನಡೆಯುವುದಕ್ಕೆ 15 ದಿನಗಳ ಮುಂಚಿತವಾಗಿಯೇ ವ್ಯಾಪಕ ಪ್ರಚಾರ ನೀಡಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

    ಕೊಡಗು ವಿದ್ಯಾವಂತರು ಮತ್ತು ವಿಚಾರವಂತರ ಜಿಲ್ಲೆಯಾಗಿದ್ದು, ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಬಳಿಗೆ ನೇರವಾಗಿ ತೆರಳಿ ಪರಿಹರಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಹಾಗಾಗಿಯೇ ಜನತಾದರ್ಶನದಲ್ಲಿ ಅರ್ಜಿಗಳ ಸಂಖ್ಯೆ ಕಡಿಮೆ ಇದೆ. ಅರಣ್ಯ ಮತ್ತು ಕಂದಾಯ ಇಲಾಖೆ ಸಮಸ್ಯೆ ಕೊಡಗಿನಲ್ಲಿ ಹೆಚ್ಚು ಇದೆ ಎಂದರು.

    ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆಯುತ್ತಿದ್ದು, ಚುನಾವಣೆಗೂ ಮೊದಲೇ ಘೋಷಣೆ ಆಗಿದ್ದ 5 ಜನಪರ ಗ್ಯಾರಂಟಿಗಳ ಪೈಕಿ 4 ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಇನ್ನುಳಿದ ಒಂದು ಗ್ಯಾರಂಟಿಯನ್ನು ಡಿಸೆಂಬರ್ ಅಂತ್ಯಕ್ಕೆ ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ. ಈಗಾಗಲೇ ಫಲಾನುಭವಿಗಳಿಗೆ ತಲುಪಿರುವ ಗ್ಯಾರಂಟಿಗಳಿಗೆ ಯಾವುದೇ ಮಧ್ಯವರ್ತಿಗಳು ಅಡ್ಡಿಯಾಗಿಲ್ಲ ಎಂದು ವಿವರಿಸಿದರು.

    ಶಕ್ತಿ ಯೋಜನೆ ಅಡಿ ಕೊಡಗಿನ 55 ಲಕ್ಷ ಮಹಿಳೆಯರು ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಂಚರಿಸಿದ್ದಾರೆ. ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆ ಅಡಿ 6.65 ಕೋಟಿ ರೂ. ವಿದ್ಯುತ್ ಬಿಲ್ ಪಾವತಿಯಾಗಿದೆ. 1,16,426 ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಅಡಿ ತಲಾ 2 ಸಾವಿರ ರೂ. ಪಡೆದುಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

    ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಎಲ್ಲ ಇಲಾಖೆಗಳು ಒಂದೇ ಜಾಗದಲ್ಲಿ ಒಟ್ಟಿಗೆ ಸಿಗಬೇಕು ಹಾಗೂ ಜನಸಾಮಾನ್ಯರ ಸಮಸ್ಯೆ ಬಗೆಹರಿಯಬೇಕು ಎನ್ನುವ ಸಿಎಂ ಆಶಯದಂತೆ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
    ಮಡಿಕೇರಿ ಶಾಸಕ ಡಾ.ಮಂತರ್ ಗೌಡ, ಎಸ್.ಪಿ.ರಾಮರಾಜನ್, ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ, ಜಿಪಂ ಸಿಇಒ ವರ್ಣಿತ್ ನೇಗಿ, ನಾಪೋಕ್ಲು ಗ್ರಾಪಂ ಅಧ್ಯಕ್ಷೆ ವನಜಾಕ್ಷಿ ಇದ್ದರು.

    ಪ್ರತಿ ತಿಂಗಳು ತಾಲೂಕು ಮಟ್ಟದಲ್ಲಿ ಆಯೋಜನೆ

    ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೇವಲ 100 ದಿನಗಳಲ್ಲಿ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದೆ. ಜನಸಾಮಾನ್ಯರು, ಬಡವರು, ಶೋಷಿತರ ಸರ್ಕಾರ ಇದಾಗಿದ್ದು, ಬದ್ಧತೆಯಿಂದ ಕೆಲಸ ಮಾಡಲಾಗುತ್ತಿದೆ. ಇನ್ಮುಂದೆ ಪ್ರತಿ ತಿಂಗಳು ತಾಲೂಕು ಮಟ್ಟದಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆಯಲಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆಗಿರುವ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದರು.ಚೆರಿಯಪರಂಬು ನಿವಾಸಿಗಳ ಬಹುದಿನದ ಬೇಡಿಕೆಯಾಗಿದ್ದ ರಸ್ತೆಗಳ ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿದೆ. ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ. ಕಾವೇರಿ ನದಿಗೆ ತ್ಯಾಜ್ಯ ಸೇರುವುದನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳಲಾಗುವುದು. ಸಿದ್ದಾಪುರ, ಮಾಲ್ದಾರೆ ಭಾಗದಲ್ಲಿ ಘನ ತ್ಯಾಜ್ಯ ಸಮಸ್ಯೆಗೆ ಪರಿಹಾರ ಹುಡುಕಲಾಗಿದೆ. ಇದೇ ರೀತಿಯಲ್ಲಿ ಕಾವೇರಿ ನದಿಯ ತ್ಯಾಜ್ಯ ಸಮಸ್ಯೆಯನ್ನೂ ಬಗೆಹರಿಸಲಾಗುವುದು. ಸರ್ಕಾರ ಮತ್ತು ಅಧಿಕಾರಿಗಳು ಜನರ ಬಳಿಗೆ ತೆರಳಬೇಕು ಎನ್ನುವ ಉದ್ದೇಶದಿಂದ ಗ್ರಾಮೀಣ ಪ್ರದೇಶದಲ್ಲಿ ಮೊದಲ ಬಾರಿಗೆ ಜನತಾ ದರ್ಶನ ಆಯೋಜಿಸಲಾಗಿದೆ ಎಂದರು.
    ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎಂ.ವಿ. ಪ್ರಸಾದ್ ಮಾತನಾಡಿ, ಕಾವೇರಿ ನದಿಯಲ್ಲಿ ತ್ಯಾಜ್ಯ ಸುರಿಯದಂತೆ ಕಡಿವಾಣ ಹಾಕಲು ಯೋಜನೆ ರೂಪಿಸಲಾಗುವುದು. ಈ ವಿಷಯವನ್ನು ಮುಖ್ಯಮಂತ್ರಿ ಗಮನಕ್ಕೂ ತರಲಾಗುವುದು ಎಂದು ತಿಳಿಸಿದರು.

    ಮೊದಲ ಕಾರ್ಯಕ್ರಮ ಯಶಸ್ವಿ
    ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೊದಲ ಜನತಾ ದರ್ಶನ ಕಾರ್ಯಕ್ರಮ ಕೊಡಗಿನಲ್ಲಿ ಯಶಸ್ವಿಯಾಗಿ ನಡೆಯಿತು.
    ಇದೇ ಸಂದರ್ಭದಲ್ಲಿ ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಜನಸಾಮಾನ್ಯರ ಸಮಸ್ಯೆಗಳನ್ನು ಅರ್ಜಿಗಳ ರೂಪದಲ್ಲಿ ಪಡೆದುಕೊಳ್ಳಲಾಯಿತು. ಅರ್ಜಿ ಕೊಟ್ಟವರ ಮೊಬೈಲ್ ನಂಬರ್ ಪಡೆದುಕೊಂಡು ಸ್ವೀಕೃತಿ ನೀಡಲಾಯಿತು. ಕಂದಾಯ ಇಲಾಖೆ ಅದರಲ್ಲೂ ಪಟ್ಟೆದಾರಿಕೆಗೆ ಸಂಬಂಧಿಸಿದಂತೆ ಹೆಚ್ಚಿನ ಅರ್ಜಿಗಳು ಬಂದಿದ್ದವು. ಇನ್ನುಳಿದಂತೆ ಅರಣ್ಯ ಇಲಾಖೆ, ಸೆಸ್ಕ್, ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಜನತಾದರ್ಶನದಲ್ಲಿ ಅಧಿಕಾರಿಗಳ ಗಮನಕ್ಕೆ ತರಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts