More

    ಜನರ ನೆರವಿಗೆ ಸಹಾಯವಾಣಿ: ಶೀಘ್ರ 112ಕ್ಕೆ ಕರೆ ಮಾಡುವ ವ್ಯವಸ್ಥೆ

    ರಾಮನಗರ: ಜಿಲ್ಲೆಯ ಸಾರ್ವಜನಿಕರಿಗೆ ಸಂಕಷ್ಟದ ಸಮಯದಲ್ಲಿ ತಕ್ಷಣವೇ ಪೊಲೀಸ್ ನೆರವು ದೊರೆಯುವಂತಾಗಲು ಹೊಯ್ಸಳ ಮಾದರಿ ಸೇವೆಯನ್ನು ಶೀಘ್ರವೇ ಆರಂಭಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಗಿರೀಶ್ ಹೇಳಿದರು.

    ತಮ್ಮ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೊಂದರೆಯಲ್ಲಿರುವ ಸಾರ್ವಜನಿಕರಿಗೆ ತಕ್ಷಣ ಸ್ಪಂದಿಸಲು 112 ಸಂಖ್ಯೆಗೆ ಕರೆ ಮಾಡುವ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಕರೆ ಬಂದ ತಕ್ಷಣವೇ ಪೊಲೀಸರು ನೆರವಿಗೆ ಧಾವಿಸಲಿದ್ದಾರೆ ಎಂದು ತಿಳಿಸಿದರು.

    ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದರೂ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿ. ಸೂಕ್ತ ಸ್ಪಂದನೆ ಸಿಗದಿದ್ದ ಪಕ್ಷದಲ್ಲಿ ಮೇಲಿನ ಅಧಿಕಾರಿಗಳನ್ನು ಸಂಪರ್ಕಿಸಿ. ಇದರ ಹೊರತಾಗಿ ನನ್ನೊಂದಿಗೂ ನೇರವಾಗಿ ಮಾಹಿತಿ ಹಂಚಿಕೊಳ್ಳಬಹುದು ಎಂದರು.

    ಅನಗತ್ಯ ಶೇಖರಣೆ ಬೇಡ: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ನನ್ನ ಮೊದಲ ಆದ್ಯತೆಯಾಗಿದೆ. ಈ ಹಿಂದೆಯೂ ವಿವಿಧೆಡೆ ಕೆಲಸ ಮಾಡಿದ ಅನುಭವವಿದೆ. ಜಿಲ್ಲೆಯಲ್ಲಿ ಒಳ್ಳೆಯ ಅಧಿಕಾರಿಗಳ ತಂಡವಿದೆ. ಸಾರ್ವಜನಿಕರ ಸುರಕ್ಷತೆ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು. ಜತೆಗೆ ಸಾರ್ವಜನಿಕರು ತಮ್ಮಲ್ಲಿರುವ ಹೆಚ್ಚಿನ ಹಣ ಮತ್ತು ಒಡವೆಯನ್ನು ಮನೆಯಲ್ಲೇ ಇಟ್ಟುಕೊಳ್ಳದೆ ಬ್ಯಾಂಕ್ ಲಾಕರ್‌ಗಳಲ್ಲಿ ಇಡುವುದು ಸುರಕ್ಷಿತ ಎಂದು ಸಲಹೆ ನೀಡಿದರು.

    ಡ್ರಗ್ಸ್ ವಿರುದ್ಧ ಸರ್ಜಿಕಲ್ ಸ್ಟ್ರೈಕ್: ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಸಾಕಷ್ಟು ಕೆಲಸ ಮಾಡುತ್ತಿದೆ. ಕಳೆದ 15 ದಿನಗಳಿಂದ ಸುಮಾರು 100 ಕೆ.ಜಿ. ಗಾಂಜಾ ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆ ಜಿಲ್ಲೆಗೆ ಸೀಮಿತವಾಗದೆ, ಜಿಲ್ಲೆಯ ಮಾರಾಟ ವ್ಯವಸ್ಥೆಗೆ ಪೂರೈಕೆ ಮಾಡುವ ಮೂಲದ ಮೇಲೂ ದಾಳಿ ನಡೆಸುವ ಮೂಲಕ ಸಾಕಷ್ಟು ಕ್ರಮಗಳನ್ನು ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಕೈಗೊಂಡಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ಮಾದರಿಯಲ್ಲಿ ದಾಳಿಗಳನ್ನು ಸಂಘಟಿಸುತ್ತಿದ್ದೇವೆ ಎಂದರು. ಮಾದಕ ವಸ್ತುಗಳಿಂದ ಮಕ್ಕಳು ದೂರ ಉಳಿಯುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಪಾಲಕರ ಮೇಲಿದೆ. ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ಇರಿಸಬೇಕು, ಇದರಿಂದ ಡ್ರಗ್ಸ್ ದಂಧೆ ನಿಯಂತ್ರಣ ಸಾಧ್ಯ. ಪೊಲೀಸ್ ಇಲಾಖೆ ಶಾಲಾ ಕಾಲೇಜುಗಳಿಗೆ ತೆರಳಿ ಮಕ್ಕಳಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತದೆ. ಫೇಸ್‌ಬುಕ್ ಮತ್ತು ಟ್ವಿಟರ್ ಖಾತೆಗಳ ಮೂಲಕವೂ ಅರಿವು ಮೂಡಿಸಲಾಗುತ್ತದೆ ಎಂದು ಗಿರೀಶ್ ತಿಳಿಸಿದರು.

    ಅಕ್ರಮ ಸಹಿಸಲ್ಲ.. ಬಾಲ ಬಿಚ್ಚಬೇಡಿ: ಜಿಲ್ಲೆಯಲ್ಲಿ ಹಿಂದಿನ ಎಸ್‌ಪಿ ಅನೂಪ್ ಎ. ಶೆಟ್ಟಿ ಅವರು ಉತ್ತಮ ಕೆಲಸ ಮಾಡಿದ್ದಾರೆ. ಅವರ ಕಾರ್ಯವನ್ನು ಮುಂದುವರಿಸುತ್ತೇವೆ. ಯಾವುದೇ ಕಾರಣಕ್ಕೂ ಅಕ್ರಮ ಚಟುವಟಿಕೆಗೆ ಅವಕಾಶ ನೀಡಲ್ಲ, ಭ್ರಷ್ಟಾಚಾರಕ್ಕೂ ಕಡಿವಾಣ ಹಾಕಲು ನನ್ನ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತೇನೆ. ಜೂಜು, ಅಕ್ರಮ ಮದ್ಯ ಮಾರಾಟ, ಮರಳು ಗಣಿಗಾರಿಕೆ ಸೇರಿ ಇತರ ಅಕ್ರಮ ಚಟುವಟಿಕೆಗಳ ಮೇಲಿನ ದಾಳಿ ಮುಂದುವರಿಯಲಿದೆ. ಹೊಸ ಎಸ್‌ಪಿ ಎಂದು ಬಾಲ ಬಿಚ್ಚುವುದು ಬೇಡ ಎಂದು ಗಿರೀಶ್ ಎಚ್ಚರಿಸಿದರು.

    ಯಾವುದೇ ರಾಜಕಾರಣಿಯ ಅಕ್ರಮಕ್ಕೆ ಬೆಂಬಲ ನೀಡುವುದಿಲ್ಲ, ನಾನೂ ಸಹ ಕಾನೂನು ಮೀರಿ ನಡೆಯುವುದಿಲ್ಲ. ಯಾರೇ ಆದರೂ ಅಕ್ರಮ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ.
    ಎಸ್.ಗಿರೀಶ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ರಾಮನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts