More

    ಜನಮತ | ಅನುಕಂಪದ ನೇಮಕಾತಿ ಅರ್ಥ ಕಳೆದುಕೊಳ್ಳದಿರಲಿ

    ಸರ್ಕಾರದ ಅಥವಾ ಬ್ಯಾಂಕಿಂಗ್ ವಲಯದ ಉದ್ಯೋಗಿಗಳು ಸೇವೆಯಲ್ಲಿರುವಾಗ ಮೃತಪಟ್ಟರೆ ಅವರ ಅವಲಂಬಿತರಿಗೆ, ಕೆಲವು ನಿಯಮಗಳಿಗೊಳಪಟ್ಟು ಉದ್ಯೋಗ ನೀಡಲು ಅವಕಾಶವಿದೆ. 1996ಕ್ಕೂ ಹಿಂದೆ ಇಂತಹ ನೇಮಕಾತಿಗೆ ಸ್ಪಷ್ಟ ನಿಯಮಾವಳಿಗಳು ಇರಲಿಲ್ಲ, ಆದ್ದರಿಂದ ಬಹಳಷ್ಟು ಸಂದರ್ಭದಲ್ಲಿ ಇದರ ದುರುಪಯೋಗವಾದದ್ದು ಮಾತ್ರವಲ್ಲದೆ ಅರ್ಹತೆ ಇರುವವರಿಗೆ ಉದ್ಯೋಗ ಸಿಗದೆ ಕಷ್ಟಪಟ್ಟ ಉದಾಹರಣೆಗಳಿವೆ. 1996ರಲ್ಲಿ ನ್ಯಾಯಾಲಯದ ತೀರ್ಪಿನಂತೆ ಇಂತಹ ನೇಮಕಾತಿಗಳಿಗೆ ಸ್ಪಷ್ಟ ನಿಯಮಗಳನ್ನು ರೂಪಿಸಲಾಗಿದೆ. ಅದರಲ್ಲಿ ಅನುಕಂಪದ ಉದ್ಯೋಗ ಪಡೆಯಲು ಅರ್ಹತೆ ಇರುವ, ಮೃತ ನೌಕರರ ಸಂಬಂಧಿಗಳ ವಿವರವನ್ನು ನಮೂದಿಸಲಾಗಿದೆ. ನೌಕರರು ಮೃತಪಟ್ಟ ಒಂದು ವರ್ಷದ ಒಳಗೆ ಅರ್ಜಿ ಸಲ್ಲಿಸಬೇಕಾಗಿದ್ದು, ಪತಿ/ಪತ್ನಿ ವಿದ್ಯಾರ್ಹತೆ ಅಥವಾ ವಯೋಮಿತಿಯ ಕಾರಣಕ್ಕೆ ನೌಕರಿ ಪಡೆಯಲು ಅರ್ಹತೆಯಿಲ್ಲದಿದ್ದರೆ ಅಥವಾ ಇಷ್ಟವಿಲ್ಲದಿದ್ದರೆ ಅಂಥವರ ಮಕ್ಕಳಿಗೆ ಉದ್ಯೋಗ ನೀಡಲು ಅವಕಾಶ ಕಲ್ಪಿಸಲಾಗಿದೆ. ಒಂದುವೇಳೆ ನೌಕರರು ಮೃತಪಟ್ಟ ಒಂದು ವರ್ಷದೊಳಗೆ ಮಕ್ಕಳಿಗೆ 18 ವರ್ಷ ವಯೋಮಿತಿ ಇಲ್ಲದಿದ್ದರೆ ಉದ್ಯೋಗ ನೀಡಲಾಗುವುದಿಲ್ಲ ಹಾಗೂ ವಿವಾಹಿತ ಹೆಣ್ಣುಮಕ್ಕಳಿಗೆ ನೌಕರಿ ಪಡೆಯಲು ಅವಕಾಶವಿಲ್ಲ-ಇವೆರಡು ಮುಖ್ಯ ಶರ್ತಗಳು.

    ಕರ್ನಾಟಕ ಹೈಕೋರ್ಟ್ ಕೆಲ ದಿನಗಳ ಹಿಂದಷ್ಟೇ ನೀಡಿದ ತೀರ್ಪೆಂದರಲ್ಲಿ ವಿವಾಹಿತ ಹೆಣ್ಣುಮಕ್ಕಳಿಗೆ ನೌಕರಿ ಪಡೆಯಲು ಇದ್ದ ತಡೆಯನ್ನು ತೆಗೆದು ಹಾಕಿ, ಲಿಂಗ ತಾರತಮ್ಯ ಮಾಡುವಂತಿಲ್ಲವೆಂದು ಆದೇಶಿಸಿದೆ. ಇದೆಲ್ಲವೂ ನ್ಯಾಯಯುತವೇ. ಆದರೆ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿ ‘ಲಿಂಗ ತಾರತಮ್ಯದ ಕಾರಣಕ್ಕೆ’ ಅನುಕಂಪದ ನೌಕರಿ ನಿರಾಕರಿಸುವಂತಿಲ್ಲ ಎಂದಿದೆ. ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ್ದದೇನೆಂದರೆ, ವಿದ್ಯೆ, ವಯೋಮಿತಿ ಹಾಗೂ ಮಕ್ಕಳಲ್ಲಿ ಹಿರಿಯರು ಎಂಬ ಕಾರಣಕ್ಕೆ ವಿವಾಹಿತ ಮಗಳಿಗೆ ಅನುಕಂಪದ ನೌಕರಿ ನೀಡುವಾಗ ಮೃತ ನೌಕರರ ಪತ್ನಿಯ ಹಾಗೂ ಇತರ ಮಕ್ಕಳ ಜವಾಬ್ದಾರಿ ನೋಡಿಕೊಳ್ಳುವ ಶರ್ತವನ್ನು ಕಡ್ಡಾಯವಾಗಿ ಸೇರಿಸುವ ಅಗತ್ಯವಿದೆ. ಏಕೆಂದರೆ ಭಾರತೀಯ ಕೌಟುಂಬಿಕ ವ್ಯವಸ್ಥೆಯಲ್ಲಿ ವಿವಾಹಿತ ಹೆಣ್ಣುಮಕ್ಕಳ ಆದಾಯವೂ ಸೇರಿ ಎಲ್ಲ ಆಗುಹೋಗುಗಳ ನಿಯಂತ್ರಣ ಆಕೆಯ ಗಂಡನ ಮನೆಗೆ ಸೇರುತ್ತದೆ. ಮೃತ ನೌಕರರ ಕುಟುಂಬ ಬೀದಿಪಾಲಾಗಬಾರದೆಂಬ ಉದ್ದೇಶದಿಂದ ನೀಡುವ ಅನುಕಂಪದ ನೇಮಕಾತಿಯ ಮೂಲಉದ್ದೇಶ ‘ಸಮಾನತೆಯ’ ಹೆಸರಿನಲ್ಲಿ ದುರುಪಯೋಗ ಆಗಬಾರದು.

    | ಮೋಹನದಾಸ ಕಿಣಿ ಕಾಪು

    VIDEO: ಶೂಟಿಂಗ್​ ವೇಳೆ ನಟನನ್ನು ಎಳೆದೊಯ್ದ ಟಿಲ್ಲರ್​- ಸ್ವಲ್ಪದರಲ್ಲೇ ತಪ್ಪಿದೆ ಅಪಾಯ

    ದುಬೈನಲ್ಲಿ ಕೆಲಸ ಕಳೆದುಕೊಂಡ ಭಾರತೀಯ ರಾತ್ರೋರಾತ್ರಿ ಕೋಟ್ಯಧಿಪತಿಯಾದ! ಅದೃಷ್ಟವೆಂದರೆ ಇದೇ ನೋಡಿ

    ಸಾಯುವಾಗಲೂ ಮಗನಿಗೆ ಬಿಯರ್​ ಕುಡಿಯೋಕೆ ದುಡ್ಡು ಕೊಟ್ಟ ಅಪ್ಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts