More

    ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಿ; ಜನಮತ

    ರಾಜಕೀಯ ಆರೋಪ-ಪ್ರತ್ಯಾರೋಪ ಮತ್ತು ಇತರ ವಿಷಯಗಳಲ್ಲಿ ಕಾಲಹರಣ ಮಾಡುವುದಕ್ಕಿಂತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಯತ್ನಿಸಬೇಕು. ಯುವಕರಿಗೆ ಉದ್ಯೋಗಾವಕಾಶಗಳು ಮರೀಚಿಕೆಯಾಗಿವೆ. ಬಿಎಸ್​ಎನ್​ಎಲ್, ಬಿಎಚ್​ಇಎಲ್, ಬಿಇಎಂಎಲ್​ನಂಥ ಹಲವಾರು ಸರ್ಕಾರಿ ಸ್ವಾಮ್ಯದ ನಿಗಮಗಳನ್ನೇ ಖಾಸಗೀಕರಣ ಮಾಡಲಾಗುತ್ತಿದೆ.

    ರೈತರಿಗೆ ವರ್ಷಕ್ಕೆ ಆರು ಸಾವಿರ ರೂ. ಕೊಟ್ಟರೆ ಅವರ ಆದಾಯ ದ್ವಿಗುಣಗೊಳ್ಳುತ್ತದೆಯೇ? ಈ ದಿನಗಳಲ್ಲಿ ಆರು ಸಾವಿರದಿಂದ ರೈತ ಏನು ಮಾಡಲು ಸಾಧ್ಯ. ರೈತರಿಗೆ ಬ್ಯಾಂಕ್​ಗಳಲ್ಲಿ, ನಬಾರ್ಡ್​ನಲ್ಲಿ ಸುಲಭವಾಗಿ ಸಾಲ ಸಿಗುವುದಿಲ್ಲ. ರೈತನಿಗೆ ಕಡಿಮೆ ಬಡ್ಡಿದರದಲ್ಲಿ, ಸುಲಭವಾಗಿ ಸಾಲ ಲಭ್ಯವಾಗಬೇಕು. ಸಬ್ಸಿಡಿ ದರದಲ್ಲಿ ಉಪಕರಣಗಳು, ಬೀಜ, ರಸಗೊಬ್ಬರ ದೊರೆಯುವಂತಾಗಬೇಕು. ರೈತರು ಬೆಳೆದ ಬೆಳೆಗೆ ತಕ್ಕ ಬೆಲೆ ಸಿಗುವಂತೆ ಆಗಬೇಕು. ಬ್ಯಾಂಕುಗಳು ದೊಡ್ಡ ದೊಡ್ಡ ಉದ್ಯಮಿಗಳಿಗೆ ಸಾವಿರಾರು ಕೋಟಿ ರೂ. ಸಾಲ ನೀಡುತ್ತವೆ. ಸಾಲ ಪಡೆದವರು ವಿದೇಶಕ್ಕೆ ಹಾರಿ ಐಷಾರಾಮಿ ಜೀವನ ನಡೆಸುತ್ತಾರೆ ಎಂಬುದು ವಿಪರ್ಯಾಸದ ಸಂಗತಿ.

    ಪೆಟ್ರೋಲ್, ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚುತ್ತಿದೆ. ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಹೀಗಾದರೆ ಕೂಲಿಕಾರ್ವಿುಕರು, ಮಧ್ಯಮವರ್ಗದ ಜನರು ಜೀವನ ಮಾಡುವುದಾದರೂ ಹೇಗೆ? ಕೇಂದ್ರ ಬಜೆಟ್​ನಲ್ಲೂ ಶ್ರೀಸಾಮಾನ್ಯರಿಗೆ ಮೂಗಿಗೆ ತುಪ್ಪ ಹಚ್ಚಿದಂತಾಗಿದೆ. ರಾಜ್ಯ ಸರ್ಕಾರ ಇದೇ ಮಾರ್ಗವನ್ನು ಅನುಸರಿಸಿದರೆ ಬಡವರ ಸ್ಥಿತಿ ಇನ್ನಷ್ಟು ವಿಷಮವಾಗುತ್ತದೆ. ವಿದ್ಯುತ್ ದರ ಹೆಚ್ಚಿಸಲು ವಿದ್ಯುತ್ ಮಂಡಳಿ ಮುಂದಾಗಿದೆ. ಅಲ್ಲದೆ, ನೀರಿನ ದರ ಹೆಚ್ಚುವ ಸಾಧ್ಯತೆಯಿದೆ. ಹಾಗಾಗಿ, ಜನರ ಸಂಕಷ್ಟವನ್ನು ಹೆಚ್ಚಿಸುವ ಯಾವುದೇ ನಿರ್ಧಾರವನ್ನು ಕೇಂದ್ರ, ರಾಜ್ಯ ಸರ್ಕಾರಗಳು ತಳೆಯಬಾರದು. ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರಗಳಿದ್ದಲ್ಲಿ ರಾಮರಾಜ್ಯವಾಗುತ್ತದೆ ಎಂಬ ಜನರ ನಿರೀಕ್ಷೆ ಹುಸಿಯಾಗದಿರಲಿ.

    | ಬಿ.ಜಿ.ರಂಗೇಗೌಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts