More

    ಮೊಬೈಲ್ ಟವರ್‌ಗಳಿಗೆ ಸಿಗದ ಭೂಮಿ

    ಶಿರಸಿ: ಕುಗ್ರಾಮಗಳಿಗೂ ಮೊಬೈಲ್ ಸಂಪರ್ಕ ಕಲ್ಪಿಸುವ ಕೇಂದ್ರ ಸರ್ಕಾರದ 4ಜಿ ಸ್ಯಾಚುರೇಶನ್ ಪ್ರಾಜೆಕ್ಟ್ ಜಾರಿ ರಾಜ್ಯದಲ್ಲಿ ಮಂದಗತಿಯಲ್ಲಿ ಸಾಗಿದೆ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಯೋಜನೆಯ ಅನುಷ್ಠಾನ ಅತ್ಯಂತ ನಿಧಾನವಾಗಿದ್ದು, ಕೆಲವೆಡೆ ಮೊಬೈಲ್ ಗೋಪುರ ನಿರ್ಮಾಣಕ್ಕೆ ಇನ್ನೂ ಭೂಮಿ ಮಂಜೂರಿ ಹಂತದಲ್ಲಿಯೇ ತೆವಳುತ್ತಿದೆ.

    ಮೊಬೈಲ್ ತರಂಗಗಳು ತಲುಪದ ಹಳ್ಳಿಗಳಲ್ಲೂ ವೇಗದ ಇಂಟರ್‌ನೆಟ್ ಸೌಲಭ್ಯ ದೊರೆಯಬೇಕು ಎಂಬ ಆಶಯದೊಂದಿಗೆ ಕೇಂದ್ರ ಸರ್ಕಾರ 2022ರಲ್ಲಿ ಮಹಾತ್ವಾಕಾಂಕ್ಷಿ ಯೋಜನೆ 4ಜಿ ಸ್ಯಾಚುರೇಶನ್ ಪ್ರಾಜೆಕ್ಟ್ ಆರಂಭಿಸಿದೆ. ಯುನೈಟೆಡ್ ಸರ್ವಿಸ್ ಆಬ್ಲಿಗೇಶನ್ ಫಂಡ್‌ನ (ಯುಎಸ್‌ಒಎಫ್) ಹಣ ಬಳಸಿ ಕುಗ್ರಾಮಗಳನ್ನು ಗುರುತಿಸಿ ಅಲ್ಲಿ ಮೊಬೈಲ್ ಗೋಪುರ ಸ್ಥಾಪಿಸುವ ಜವಾಬ್ದಾರಿಯನ್ನು ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ಗೆ ವಹಿಸಿದೆ. ಜಿಲ್ಲೆಯಲ್ಲಿ ಕುಗ್ರಾಮಗಳನ್ನು ಗುರುತಿಸಿ ಒಟ್ಟು 196 ಮೊಬೈಲ್ ಗೋಪುರ ಸ್ಥಾಪಿಸಲು 2022ರಲ್ಲಿಯೇ ಕೇಂದ್ರದ ಅನುಮೋದನೆಯೂ ದೊರೆತಿದೆ. ಇದರ ಅನ್ವಯ ಕಾರವಾರದಲ್ಲಿ 8, ಅಂಕೋಲಾದಲ್ಲಿ 12, ಜೊಯಿಡಾದಲ್ಲಿ 42, ಕುಮಟಾ 19, ಹೊನ್ನಾವರ 8, ಭಟ್ಕಳ 13, ಸಿದ್ದಾಪುರ 17, ಶಿರಸಿ 24, ಮುಂಡಗೋಡಿನಲ್ಲಿ 10, ಹಳಿಯಾಳ, ದಾಂಡೇಲಿ ಹಾಗೂ ಅಗತ್ಯವುಳ್ಳ 43 ಹಳ್ಳಿಗಳಲ್ಲಿ ಮೊಬೈಲ್ ಗೋಪುರ ಮಂಜೂರಾಗಿವೆ. ಯುಎಸ್‌ಒಎಫ್ 2022ರ ಜುಲೈ 27ರಿಂದ 500 ದಿನಗಳ ಒಳಗಾಗಿ ಅಂದರೆ 2023ರ ಡಿಸೆಂಬರ್ 9ರ ಒಳಗೆ ಎಲ್ಲ ಮೊಬೈಲ್ ಗೋಪುರಗಳ ಕಾಮಗಾರಿ ಪೂರ್ಣಗೊಳಿಸಿ ಸೇವೆ ಆರಂಭಿಸುವಂತೆ ಸೂಚಿಸಿತ್ತು. ಈ ಅವಧಿ ಮುಕ್ತಾಯವಾಗಿ ತಿಂಗಳುಗಳೇ ಕಳೆದಿದ್ದರೂ ಕೆಲ ಹಳ್ಳಿಗಳಲ್ಲಿ ಗೋಪುರ ನಿರ್ಮಾಣ ಕಾರ್ಯ ನಡೆದಿದ್ದರೆ, ಬಹುತೇಕ ಹಳ್ಳಿಗಳಲ್ಲಿ ಇನ್ನೂ ಗೋಪುರ ನಿರ್ಮಾಣಕ್ಕಾಗಿ ಜಾಗ ಮಂಜೂರಿ ಪ್ರಕ್ರಿಯೆ ನಡೆಯುತ್ತಿದೆ.

    ಸೊಪ್ಪಿನ ಬೆಟ್ಟದ ಗೊಂದಲ!: 4ಜಿ ಸ್ಯಾಚುರೇಶನ್ ಪ್ರಾಜೆಕ್ಟ್ ಯಶಸ್ಸಿಗಾಗಿ 2022ರಲ್ಲಿದ್ದ ರಾಜ್ಯ ಬಿಜೆಪಿ ಸರ್ಕಾರ ಮೊಬೈಲ್ ಗೋಪುರ ನಿರ್ಮಾಣಕ್ಕಾಗಿ ಭೂಮಿಯನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿತ್ತು. ಅದೇ ವರ್ಷ ಜಿಲ್ಲೆಯ ಕುಗ್ರಾಮಗಳಲ್ಲಿ ಬಿಎಸ್‌ಎನ್‌ಎಲ್ ಜಾಗವನ್ನೂ ಗುರುತಿಸಿ ಮಂಜೂರಿಗೆ ಕಳಿಸಿದೆ. ಈ ಪೈಕಿ 78 ಗ್ರಾಮಗಳಲ್ಲಿ ಬಿಎಸ್‌ಎನ್‌ಎಲ್, ಗೋಪುರ ನಿರ್ಮಾಣಕ್ಕೆ ಸೂಕ್ತ ಜಾಗ ಸಿಗದೆ ಸೊಪ್ಪಿನ ಬೆಟ್ಟಗಳಲ್ಲಿ ಜಾಗ ಗುರುತಿಸಿ ಮಂಜೂರು ಮಾಡಿಸಿಕೊಂಡಿತ್ತು.

    ಆದರೆ, 2023ರಲ್ಲಿ ಸೊಪ್ಪಿನ ಬೆಟ್ಟದ ಜಾಗದ ಕುರಿತು ಕೆಲ ಗೊಂದಲಗಳು ನಿರ್ಮಾಣವಾದವು. ಅರಣ್ಯ ಇಲಾಖೆ ಜಿಲ್ಲಾಧಿಕಾರಿಗೆ ಪತ್ರ ಬರೆದು ಸೊಪ್ಪಿನ ಬೆಟ್ಟದಲ್ಲಿ ರೈತರ ಹಕ್ಕೂ ಇದೆ. ಬ್ರಿಟಿಷ್ ಸರ್ಕಾರದ ಅವಧಿಯಲ್ಲಿ ಕೆನರಾ ಪ್ರಿವಿಲೇಜ್ ಆ್ಯಕ್ಟ್ ಮೂಲಕ ಅವರಿಗೆ ಭೂಮಿ ಬಳಕೆಗೆ ನೀಡಲಾಗಿದ್ದು, ಈ ಜಾಗದಲ್ಲಿ ಅರಣ್ಯ ಇಲಾಖೆ ಹಾಗೂ ರೈತರ ಜಂಟಿ ಹಕ್ಕುಗಳಿರುತ್ತವೆ. ಹೀಗಾಗಿ, ಈ ಜಾಗದಲ್ಲಿ ಬಿಎಸ್ ಎನ್‌ಎಲ್ ಅಗತ್ಯವಿರುವ 2 ಗುಂಟೆ ಜಾಗ ಬಿಟ್ಟುಕೊಡಲು ಅರಣ್ಯ ಇಲಾಖೆಗೆ ಕಾನೂನು ತೊಡಕಾಗುತ್ತದೆ ಎಂದು ತಿಳಿಸಿತ್ತು. ಈ ಹಿನ್ನೆಲೆಯೆಲ್ಲಿ ಜಿಲ್ಲಾಡಳಿತ ಬಿಎಸ್‌ಎನ್‌ಎಲ್‌ಗೆ ಮಂಜೂರು ಮಾಡಿದ್ದ ಸೊಪ್ಪಿನ ಬೆಟ್ಟದ ಭೂಮಿಯನ್ನು ವಾಪಸ್ ಪಡೆದುಕೊಂಡಿದೆ.

    ತಿಂಗಳುಗಳ ಬಳಿಕ ಮತ್ತೆ ಕಾರ್ಯಪ್ರವೃತ್ತವಾದ ಬಿಎಸ್‌ಎನ್‌ಎಲ್, ಅದೇ ಗ್ರಾಮದ ಅರಣ್ಯ ಪ್ರದೇಶದಲ್ಲಿ 2 ಗುಂಟೆ ಜಾಗ ಗುರುತಿಸಿ ಮಂಜೂರು ಮಾಡಿ ಕೊಡುವಂತೆ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಈ ಎಲ್ಲ ಜಾಗಗಳ ಮಾಹಿತಿಯನ್ನು ಅರಣ್ಯ ಇಲಾಖೆ ಪರಿವೇಶ ತಂತ್ರಾಂಶಕ್ಕೆ ಅಳವಡಿಸಿ ಮೊದಲ ಹಂತದ ಮಂಜೂರಿ ನೀಡಿದೆ. ಆದರೆ, ಭೂಮಿಯನ್ನು ಬಿಎಸ್‌ಎನ್‌ಗೆ ಹಸ್ತಾಂತರಿಸುವ ಪ್ರಕ್ರಿಯೆ ಮಾತ್ರ ನಿಧಾನವಾಗಿ ಸಾಗುತ್ತಿದೆ. ಇನ್ನೊಂದೆಡೆ, ಅರಣ್ಯ ಸಮಸ್ಯೆ ಇರದ ಇತರ ಹಳ್ಳಿಗಳಲ್ಲಿ ಮೊಬೈಲ್ ಗೋಪುರ ನಿರ್ಮಾಣ ಅರ್ಧಮರ್ಧವಾಗಿದ್ದು, ಹಳ್ಳಿಗರು ಮೊಬೈಲ್ ಸಿಗ್ನಲ್‌ಗೆ ಕಾದು ಸುಸ್ತಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts